ʼವಿಡಿಯೋ ಬಾಂಬ್‌ʼ ಸ್ಫೋಟ | ʼಲಾಟರಿ ಸಿಎಂʼ: ಸಿದ್ದರಾಮಯ್ಯ ವಿರುದ್ಧ ಬಿ.ಆರ್‌. ಪಾಟೀಲ್‌ ಏಕವಚನದ ದಾಳಿ

"ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ ಸಿಎಂ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಮೊದಲು ಭೇಟಿ ಮಾಡಿಸಿದವನು ನಾನು. ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ," ಎಂದು ಬಿ.ಆರ್.‌ ಪಾಟೀಲ್ ಕಟಕಿಯಾಡಿದ್ದಾರೆ.;

Update: 2025-07-01 09:12 GMT

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವ ಜಮೀರ್‌ ಅಹ್ಮದ್‌ ಖಾನ್‌  ಸಚಿವಾಲಯದ  ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಹಿರಿಯ ನಾಯಕ ಬಿ.ಆರ್‌. ಪಾಟೀಲ್‌ ಈಗ ಸ್ವತಹ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ  ದಾಳಿ ನಡೆಸಿದ್ದಾರೆ.

ಮಂಡ್ಯದ ಕೆ.ಆರ್‌. ಪೇಟೆಯಲ್ಲಿ ತಮ್ಮ ಆಪ್ತರ ಜತೆ ದೂರವಾಣಿ ಕರೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, "ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ," ಎಂದು ಹೇಳಿದ್ದಾರೆ. ಜತೆಗೆ, ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಅತೃಪ್ತ ಕಾಂಗ್ರೆಸ್‌ ನಾಯಕರ ಹೇಳಿಕೆ ಪಡೆಯುತ್ತಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರ ಬಳಿ ಸಿದ್ದರಾಮಯ್ಯ ಅವರು ದೂರು ನೀಡಿರುವುದೂ ಈ ವೀಡಿಯೋದಿಂದ ಬಹುತೇಕ ಖಚಿತವಾಗಿದೆ.

"ಸುರ್ಜೇವಾಲ ಬೇಟಿ ಮಾಡಿ ಮಾತನಾಡಿದ್ದೇನೆ.  ನನ್ನ ಮಾತನ್ನ ಗಂಭೀರವಾಗಿ ಆಲಿಸಿದ್ದಾರೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ" ಎಂದೂ ಅವರು ದೂರವಾಣಿಯಲ್ಲಿ ಮಾತನಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮಂಡ್ಯದ ಕೆ.ಆರ್‌. ಪೇಟೆಗೆ ತರಳಿದ್ದ ಅವರು, ತಮ್ಮ ಆಪ್ತರೊಬ್ಬರ ಬಳಿ ದೂರವಾಣಿ ಸಂಭಾಷಣೆ ನಡೆಸಿ, "ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.

ಸಿಎಂ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಮೊದಲು ಭೇಟಿ ಮಾಡಿಸಿದವನು ನಾನು.  ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ," ಎಂದು ಕಟಕಿಯಾಡಿದ್ದಾರೆ.

"ನನ್ನ ಗ್ರಹಚಾರ! ನನಗೆ ಗಾಡು ಇಲ್ಲ, ಫಾದರು ಇಲ್ಲ. ಸುರ್ಜೆವಾಲ ಬೇಟಿ ಮಾಡಿ ಮಾತನಾಡಿದ್ದೇನೆ. ನನ್ನ ಮಾತನ್ನ ಗಂಭೀರವಾಗಿ ಆಲಿಸಿದ್ದಾರೆ.

ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ," ಎಂದು ಸ್ಪಷ್ಟವಾಗಿ ಅವರು ಹೇಳಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.

 ಸಿದ್ದರಾಮಯ್ಯರಿಗೆ ಮುಜುಗರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಹಾಗೂ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ವಸತಿ ಇಲಾಖೆಯಲ್ಲೇ ಮನೆಗಳ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ  ನಡೆದಿದೆ ಎಂದು ಬಿ.ಆರ್‌. ಪಾಟೀಲ್‌ ಇತ್ತೀಚೆಗೆ ಆರೋಪಿಸಿದ್ದರು.

ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರ ಆಪ್ತರೇ ಆಗಿರುವ  ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌. ಪಾಟೀಲ್‌ ಅವರೇ ಸ್ವತಃ ಆರೋಪ ಮಾಡಿರುವುದು  ಸರ್ಕಾರಕ್ಕೆ ತೀರಾ ಮುಜುಗರ ಸೃಷ್ಟಿಸಿದೆ. ಭ್ರಷ್ಟಾಚಾರ ಆರೋಪ ಸಂಬಂಧ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು  ಮತ್ತು ಅದು ತನ್ನದೇ ದನಿ ಎಂದು ಬಳಿಕ ಪಾಟೀಲ್‌ ಒಪ್ಪಿಕೊಂಡಿದ್ದರು.

ಆ ಆಡಿಯೋದಲ್ಲಿ  ಬಿ.ಆರ್‌. ಪಾಟೀಲ್‌, ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಆಪ್ತ ಸಹಾಯಕ ಸರ್ಫರಾಜ್‌ ಖಾನ್‌ ಎಂಬವರ ಜತೆ ದೂರವಾಣಿಯಲ್ಲಿ ಮಾತನಾಡಿ, ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದರು.  

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಖುದ್ದು ಆರೋಪ ಮಾಡಿದ್ದ ಪಾಟೀಲ್ ಅವರು ಲಂಚ ಪಡೆಯುತ್ತಿರುವ ವ್ಯಕ್ತಿಗಳ ಹೆಸರುಗಳನ್ನೂ ಉಲ್ಲೇಖಿಸಿದ್ದರು. 

ವೈರಲ್‌ ಆದ ವಿಡಿಯೋದ ಒಂದು ದೃಶ್ಯ

ಪದೇ ಪದೇ ಆರೋಪ

ಸಿದ್ದರಾಮಯ್ಯ ಸರ್ಕಾರ ರಚನೆಯಾದ ಕೆಲ ತಿಂಗಳಲ್ಲೇ ಸರ್ಕಾರದ ಕಾರ್ಯ ವೈಖರಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಬಿ.ಆರ್ ಪಾಟೀಲ್, ಅ ಬಗ್ಗೆ ತಮ್ಮ ಲೆಟರ್‌ಹೆಡ್‌ನಲ್ಲಿಯೇ ಸುಮಾರು 50ಕ್ಕೂ ಹೆಚ್ಚು ಶಾಸಕರ ಸಹಿ ಹಾಕಿಸಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಆ ಮೂಲಕ ಶಾಸಕಾಂಗ ಸಭೆ ಕರೆಯದೆ ಕ್ಷೇತ್ರಗಳನ್ನು ಕೆಲವು ಸಚಿವರು ಅವಗಣನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

ಸಿಎಂ ಸಲಹೆಗಾರ

ಅದಾದ ಬಳಿಕ ಬಿ.ಅರ್‌. ಪಾಟೀಲ್‌ ಅವರನ್ನು ಮುಖ್ಯಮಂತ್ರಿ ಅವರ ರಾಜಕೀಯ ಸಲಹೆಗಾರನಾಗಿ ನೇಮಿಸಲಾಗಿತ್ತು. ಕೆಲವೇ ದಿನಗಳಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಬಹಿರಂಗ ಅಕ್ರೋಶ ವ್ಯಕ್ತಪಡಿಸಿದ್ದ ಪಾಟೀಲ್‌ ಅವರು ವಿಧಾನಸಭೆ ಅಧಿವೇಶನದಲ್ಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು ಹಾಗೂ ತಾವು ಸಿಎಂ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಪತ್ರ ಬರೆದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಬಳಿಕ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅವರನ್ನು ಸಿದ್ದರಾಮಯ್ಯ ನಿಯುಕ್ತಿಗೊಳಿಸಿದ್ದರು. ಈಗ ವಸತಿ ಖಾತೆಯಲ್ಲಾಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿರುವ ಆಡಿಯೋ ಎಲ್ಲೆಡೆ ಸದ್ದು ಮಾಡುತ್ತಿರುವ ವೇಳೆಯಲ್ಲೇ ಹೊಸ ʼವಿಡಿಯೋ ಬಾಂಬ್‌ʼ ಸ್ಫೋಟವಾಗಿದೆ.

ಇದು ಸಹಜವಾಗಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಗಳಿಗೆ ಹೊಸ ಅಸ್ತ್ರಗಳನ್ನು ನೀಡಿದಂತಾಗಿದೆ. 

Tags:    

Similar News