ಜೆಡಿಎಸ್ ಕೋರ್ ಕಮಿಟಿಗೆ ನೂತನ ಸಾರಥ್ಯ: ಎಂ.ಕೃಷ್ಣಾರೆಡ್ಡಿಗೆ ಅಧ್ಯಕ್ಷ ಸ್ಥಾನ
ಜೆಡಿಎಸ್ ಪಕ್ಷವು ಕೋರ್ ಕಮಿಟಿಯನ್ನು ಪುನಾರಚಿಸಿದೆ. ಎಂ.ಕೃಷ್ಣಾರೆಡ್ಡಿ ನೂತನ ಅಧ್ಯಕ್ಷರಾಗಿ ನಿಯೋಜನೆ ಮಾಡಲಾಗಿದ್ದು, ಶಾಸಕ ಎ. ಮಂಜು ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.
ಕಳೆದೊಂದು ವರ್ಷದಿಂದ ಸ್ಥಗಿತಗೊಂಡಿದ್ದ ಜೆಡಿಎಸ್ ಕೋರ್ ಕಮಿಟಿಗೆ ಇದೀಗ ಜೀವ ಬಂದಿದ್ದು, ಕಮಿಟಿಯ ಅಧ್ಯಕ್ಷರಾಗಿದ್ದ ಜಿ.ಟಿ.ದೇವೇಗೌಡ ಅವರನ್ನು ಬದಲಿಸಿ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿಗೆ ಕಮಿಟಿಯ ಸಾರಥ್ಯವನ್ನು ನೀಡಲಾಗಿದೆ.
ವಿಧಾನಸಭೆಯ ಶಾಸಕಾಂಗ ಪಕ್ಷದ ಸ್ಥಾನ ಸಿಗದ ಕಾರಣಕ್ಕಾಗಿ ದಳಪತಿಗಳ ವಿರುದ್ಧ ಮುನಿಸಿಕೊಂಡಿದ್ದ ಜಿ.ಟಿ.ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ದೂರವಿದ್ದರು. ಪರಿಣಾಮ ಕೋರ್ ಕಮಿಟಿ ನಿಷ್ಕ್ರಿಯಗೊಂಡಿತು. ಪಕ್ಷದ ಚಟುವಟಿಕೆಗಳು ಸಹ ಸ್ಥಗಿತಗೊಂಡಿದ್ದವು. ಜೆಡಿಎಸ್ ಪಕ್ಷದ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಸಭೆ ನಡೆಸಿ ಜಿ.ಟಿ.ದೇವೇಗೌಡ ಅವರಿಗೆ ಕೊನೆಗೂ ಕೊಕ್ ನೀಡಿ, ಆ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಿದ್ದಾರೆ. ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರನ್ನು ಕೋರ್ ಕಮಿಟಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ಮುಂದಾಗಿರುವ ಜೆಡಿಎಸ್ ಪಕ್ಷವು ಕೋರ್ ಕಮಿಟಿಯನ್ನು ಪುನಾರಚಿಸಿದೆ. ಎಂ.ಕೃಷ್ಣಾರೆಡ್ಡಿ ನೂತನ ಅಧ್ಯಕ್ಷರಾಗಿ ನಿಯೋಜನೆ ಮಾಡಲಾಗಿದ್ದು, ಶಾಸಕ ಎ. ಮಂಜು ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ನೂತನ ಸಮಿತಿಗೆ 20 ಸದಸ್ಯರಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯನಿರ್ವಹಿಸಲಿದೆ ಎಂದು ಜೆಡಿಎಸ್ ತಿಳಿಸಿದೆ.
ಹಿರಿಯ ಮತ್ತು ಕಿರಿಯ ನಾಯಕರ ಸಮಾಗಮ
ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋರ್ ಕಮಿಟಿಯ ನೂತನ ಸದಸ್ಯರ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು. ನೂತನ ಸಮಿತಿಯಲ್ಲಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಸಂಸದ ಎಂ. ಮಲ್ಲೇಶ್ ಬಾಬು, ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಹೆಚ್.ಕೆ. ಕುಮಾರಸ್ವಾಮಿ, ಸಿ.ಎಸ್. ಪುಟ್ಟರಾಜು ಅವರೊಂದಿಗೆ ಹಾಲಿ ಶಾಸಕರಾದ ಕರೆಮ್ಮ ಜಿ. ನಾಯಕ್, ಕೆ. ನೇಮಿರಾಜ್ ನಾಯಕ್, ಸಮೃದ್ಧಿ ಮಂಜುನಾಥ್, ಶರಣಗೌಡ ಕಂದಕೂರ ಮತ್ತು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸೇರಿದಂತೆ ಹಲವು ಪ್ರಮುಖರಿಗೆ ಸ್ಥಾನ ಕಲ್ಪಿಸಲಾಗಿದೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ 2026ರ ವಿಧಾನ ಪರಿಷತ್ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು ಈ ಸಮಿತಿಯ ಪ್ರಮುಖ ಗುರಿಯಾಗಿದೆ. ಸಮಿತಿಯು ಪಕ್ಷದ ಬಲವರ್ಧನೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ನಿಷ್ಕ್ರಿಯವಾಗಿರುವ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಚುರುಕುಗೊಳಿಸುವುದಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ಪೂರ್ವಸಿದ್ಧತೆ ನಡೆಸುವುದಾಗಿದೆ. ನವೆಂಬರ್ 2026ರಲ್ಲಿ ನಡೆಯಲಿರುವ ನಾಲ್ಕು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಕಮಿಟಿಯು ಚರ್ಚೆ ನಡೆಸಲಿದೆ.
ನಗರ ಮತ್ತು ಪಂಚಾಯತ್ ಸ್ಥಳೀಯ ಸಂಸ್ಥೆಗಳು, ಸಹಕಾರ ಸಂಘಗಳು ಹಾಗೂ ಎಪಿಎಂಸಿ ಚುನಾವಣೆಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ರಾಜ್ಯ ಕಚೇರಿಗೆ ಸಲ್ಲಿಸಲಿದೆ. ಎನ್‌ಡಿಎ ಮೈತ್ರಿಕೂಟದೊಂದಿಗೆ ಸಮನ್ವಯ ಮತ್ತು ಚುನಾವಣಾ ಹೊಂದಾಣಿಕೆಯ ಬಗ್ಗೆ ರೂಪುರೇಷೆ ಸಿದ್ಧಪಡಿಸಲಿದೆ. ಪಕ್ಷದ ವಿವಿಧ ವಿಭಾಗಗಳನ್ನು ಸಕ್ರಿಯಗೊಳಿಸಲು ಮುಖ್ಯಸ್ಥರ ನೇಮಕಕ್ಕೆ ಸೂಕ್ತ ನಾಯಕರ ಹೆಸರನ್ನು ಶಿಫಾರಸು ಮಾಡಲಿದೆ. ಅಗತ್ಯವಿದ್ದರೆ ಪಕ್ಷದ ಇತರೆ ಮುಖಂಡರನ್ನೂ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಕಮಿಟಿಗೆ ನೀಡಲಾಗಿದೆ. ಈ ಮೂಲಕ ಜೆಡಿಎಸ್ ಪಕ್ಷವು ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸಿ, ರಾಜಕೀಯ ಸವಾಲುಗಳನ್ನು ಎದುರಿಸಲು ಹೊಸ ರಣತಂತ್ರ ರೂಪಿಸಿದೆ.
ವೈ.ಎಸ್.ವಿ. ದತ್ತಾ ನೇತೃತ್ವದಲ್ಲಿ ಪ್ರಚಾರ ಸಮಿತಿ ರಚನೆ
ಪಕ್ಷದ ಸಂಘಟನೆಗೆ ಚುರುಕು ನೀಡಿ, ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮಹತ್ವದ ಉದ್ದೇಶದೊಂದಿಗೆ ಜೆಡಿಎಸ್ ಪಕ್ಷವು 16 ಸದಸ್ಯರ ನೂತನ ಪ್ರಚಾರ ಸಮಿತಿಯನ್ನು ರಚಿಸಿದೆ. ಹಿರಿಯ ನಾಯಕ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ನೂತನವಾಗಿ ರಚಿಸಲಾದ ಪ್ರಚಾರ ಸಮಿತಿಯಲ್ಲಿ ಅನುಭವಿ ರಾಜಕಾರಣಿಗಳಿಗೆ ಮಣೆ ಹಾಕಲಾಗಿದೆ. ಸಮಿತಿಯಲ್ಲಿ ಮಾಜಿ ಶಾಸಕರಾದ ಅಶೋಕ್ ಕುಮಾರ್ ಎಂ., ಸುರೇಶ್ ಗೌಡ, ಡಾ. ಕೆ. ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ ನೇಮಕ ಮಾಡಲಾಗಿದೆ. ಇವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಟಿ.ಎ.ಶರವಣ, ಭೋಜೆಗೌಡ , ಕೆ. ವೆಂಕಟೇಶ್, ಕೆ.ಎ. ತಿಪ್ಪೇಸ್ವಾಮಿ, ಡಾ. ಸೂರಜ್ ರೇವಣ್ಣ ಮತ್ತು ಮುಖಂಡ ಸುಧಾಕರ್ ಎಸ್.ಶೆಟ್ಟಿ ಸೇರಿದಂತೆ ಪ್ರಮುಖ ನಾಯಕರು ಸದಸ್ಯರಾಗಿ ಸ್ಥಾನ ಪಡೆದಿದ್ದಾರೆ.
ಶಿಸ್ತುಪಾಲನಾ ಸಮಿತಿ ರಚನೆ
ಪಕ್ಷದಲ್ಲಿನ ಶಿಸ್ತು ಉಲ್ಲಂಘನೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜೆಡಿಎಸ್ ಪಕ್ಷವು ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ, ಮಾಜಿ ಸಚಿವ ಎ. ನಾಗರಾಜಯ್ಯ ಅಧ್ಯಕ್ಷತೆಯಲ್ಲಿ 10 ಸದಸ್ಯರನ್ನೊಳಗೊಂಡ ನೂತನ ಶಿಸ್ತುಪಾಲನಾ ಸಮಿತಿಯನ್ನು ರಚಿಸಲಾಗಿದೆ. ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವ ಮುಖಂಡರ ಹಾಗೂ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಈ ಸಮಿತಿಗೆ ನೀಡಲಾಗಿದೆ.
ನೂತನ ಸಮಿತಿಯಲ್ಲಿ ಪಕ್ಷದ ಹಿರಿಯ ಮತ್ತು ಅನುಭವಿ ನಾಯಕರಿಗೆ ಸ್ಥಾನ ನೀಡಲಾಗಿದೆ. ಮಾಜಿ ಸಂಸದ ನಿಲೇಂದ್ರ ರೆಡ್ಡಿ, ಶಾಸಕರಾದ ಬೆಳ್ಳಿ ವೆಂಕಟಶಿವಾರೆಡ್ಡಿ, ಎಚ್.ಟಿ. ಮಂಜು, ಇತರರನ್ನು ನಿಯೋಜಿಸಲಾಗಿದೆ. ಪಕ್ಷದೊಳಗೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ, ಒಗ್ಗಟ್ಟಿನಿಂದ ಮುನ್ನಡೆಯುವ ಸಂದೇಶವನ್ನು ರವಾನಿಸುವುದು ಈ ಸಮಿತಿ ರಚನೆಯ ಪ್ರಮುಖ ಉದ್ದೇಶವಾಗಿದೆ. ಪಕ್ಷದ ಸಿದ್ಧಾಂತ, ಯೋಜನೆಗಳು ಹಾಗೂ ಪ್ರಜಾಪ್ರಭು ತ್ವದ ನಿಲುವುಗಳನ್ನು ರಾಜ್ಯದ ಜನತೆಗೆ ತಲುಪಿಸುವಲ್ಲಿ ಈ ಸಮಿತಿಯು ಪ್ರಮುಖ ಪಾತ್ರ ವಹಿಸಲಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.