ನಗರಾಭಿವೃದ್ಧಿ ಸಚಿವರೊಂದಿಗಿನ ಸಂಧಾನ ಸಭೆ ಫಲಪ್ರದ; ಪಾಲಿಕೆ ನೌಕರರ ಮುಷ್ಕರ ಅಂತ್ಯ

ಪಾಲಿಕೆ ನೌಕರರಿಗೆ ಸಕಾಲಕ್ಕೆ ವೇತನ ನೀಡುವುದು, ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಆರ್ಥಿಕ ಇಲಾಖೆ ಅನುಮೋದನೆ ಪಡೆಯುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವ ಭೈರತಿ ಸುರೇಶ್‌ ಸೂಚನೆ ನೀಡಿದರು.;

Update: 2025-07-15 14:39 GMT

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಮಹಾನಗರ ಪಾಲಿಕೆ ನೌಕರರ ಪ್ರತಿಭಟನೆ ಅಂತ್ಯಗೊಂಡಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ವಿಕಾಸಸೌಧದಲ್ಲಿ ನೌಕರರ ಪದಾಧಿಕಾರಿಗಳೊಂದಿಗೆ ನಡೆಸಿದ ಸಂಧಾನ ಸಭೆ ಫಲಪ್ರದವಾಗಿದ್ದು, ನೌಕರರು ತಮ್ಮ ಮುಷ್ಕರವನ್ನು ಕೈಬಿಟ್ಟಿದ್ದಾರೆ. ಈ ಸಭೆಯಲ್ಲಿ ನೌಕರರ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸಮ್ಮತಿಸಿದೆ.

ಮಂಗಳವಾರ ನಡೆದ ಈ ಸಭೆಯಲ್ಲಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತರಾಜ್ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಸಚಿವರು ಪಾಲಿಕೆ ನೌಕರರಿಗೆ ಸಕಾಲದಲ್ಲಿ ವೇತನ ನೀಡುವುದು, ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ನೌಕರರ ಬೇಡಿಕೆಗಳು ಮತ್ತು ಸರ್ಕಾರದ ಭರವಸೆಗಳು

ಮಹಾನಗರ ಪಾಲಿಕೆಗಳ ಸಾಮಾನ್ಯ ನೇಮಕಾತಿ ನಿಯಮಗಳು 2011ಕ್ಕೆ ಸಮಗ್ರ ತಿದ್ದುಪಡಿ ಮಾಡುವುದು, ಮಹಾನಗರ ಪಾಲಿಕೆ ನೌಕರರನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ನೌಕರರೆಂದು ಪರಿಗಣಿಸುವುದು, ಹಾಗೂ ಸರ್ಕಾರಿ ನೌಕರರ ರೀತಿಯಲ್ಲಿ ಮಹಾನಗರ ಪಾಲಿಕೆಗಳ ಅಧಿಕಾರಿಗಳು ಮತ್ತು ನೌಕರರಿಗೂ ಕೆಜಿಐಡಿ (ಕರ್ನಾಟಕ ಸರ್ಕಾರಿ ವಿಮಾ ಇಲಾಖೆ), ಜಿಐಎಸ್ (ಗುಂಪು ವಿಮಾ ಯೋಜನೆ) ಮತ್ತು ಜಿಪಿಎಫ್ (ಸಾಮಾನ್ಯ ಭವಿಷ್ಯ ನಿಧಿ) ಸೌಲಭ್ಯಗಳನ್ನು ನೀಡಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಗಳಾಗಿದ್ದವು.

ಪೌರಾಡಳಿತ ಆಯುಕ್ತರ ಹುದ್ದೆಗಳನ್ನು ಸೃಜಿಸುವಂತೆಯೂ ನೌಕರರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಪರಿಮಿತಿಯೊಳಗೆ ವಲಯ ಆಯುಕ್ತರ ಹುದ್ದೆಗಳನ್ನು ಸೃಜಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಬಗ್ಗೆ ಆರ್ಥಿಕ ಇಲಾಖೆಯ ಅಭಿಪ್ರಾಯ ಬಂದ ತಕ್ಷಣ ಕ್ರಮ ವಹಿಸುವುದಾಗಿ ತಿಳಿಸಿದರು.

ಮಹಾನಗರ ಪಾಲಿಕೆಗಳಲ್ಲಿ ಸಾಕಷ್ಟು ಸಂಖ್ಯೆಯ ಪರಿಸರ ಇಂಜಿನಿಯರ್‌ಗಳ ಹುದ್ದೆಗಳು ಖಾಲಿ ಇರುವುದರಿಂದ ದೈನಂದಿನ ಕರ್ತವ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ನೌಕರರು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಮಂಜೂರಾಗಿರುವ ಪರಿಸರ ಇಂಜಿನಿಯರ್‌ಗಳ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರಿ ನೌಕರರ ಮಾದರಿಯಲ್ಲಿ ಪಾಲಿಕೆ ನೌಕರರಿಗೂ ಗುಂಪು ವಿಮೆ ಯೋಜನೆ (ಜಿಐಎಸ್) ಜಾರಿಗೆ ತರುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಸಚಿವರು ತಿಳಿಸಿದರು. ವಿಮಾ ಕಂತಿನ ಮೊತ್ತದಲ್ಲಿ ನೌಕರರು ತಮ್ಮ ಪಾಲಿನ ಮೊತ್ತವನ್ನು ಪಾವತಿಸಲು ಸಿದ್ಧವಿರುವುದಾಗಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆಗಳು ನೌಕರರ ಗುಂಪು ವಿಮೆ ಯೋಜನೆಗೆ ಉಳಿದ ಮೊತ್ತವನ್ನು ಭರಿಸುವುದಾದರೆ ಆರ್ಥಿಕ ಹೊರೆಯನ್ನು ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಯಿತು.

ಪ್ರತಿ ವರ್ಷ ಪಾಲಿಕೆಗಳ ನೌಕರರಿಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಆರ್ಥಿಕ ಹೊರೆಯಾಗದ ರೀತಿಯಲ್ಲಿ ಪಾಲಿಕೆಗಳಿಂದಲೇ ವೆಚ್ಚ ಭರಿಸಲು ಸೂಚನೆ ನೀಡಲಾಗಿದ್ದು, ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ನೌಕರರ ಇನ್ನಿತರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವ ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆಯನ್ನು ಪಾಲಿಕೆ ನೌಕರರಿಗೂ ವಿಸ್ತರಣೆ ಮಾಡುವ ಬಗ್ಗೆ ಸಭೆಯಲ್ಲಿ ಸಹಮತ ವ್ಯಕ್ತಪಡಿಸಲಾಗಿದೆ. ಈ ಯೋಜನೆಯಡಿ ನೌಕರರು ತಮ್ಮ ಪಾಲಿನ ವಿಮಾ ಮೊತ್ತ ಮತ್ತು ಅದಕ್ಕೆ ಸಮಾನವಾದ ಮೊತ್ತವನ್ನು ಪಾಲಿಕೆಗಳು ಭರಿಸುವ ಬಗ್ಗೆ ಪರಿಶೀಲಿಸಲಾಗುತ್ತದೆ. ಇದಲ್ಲದೇ, ನೌಕರರ ಚಿಕಿತ್ಸಾ ವೆಚ್ಚವನ್ನು ಮಂಜೂರು ಮಾಡುವ ಅಧಿಕಾರವನ್ನು ಆಯಾ ಪಾಲಿಕೆಗಳ ಆಯುಕ್ತರಿಗೆ ನೀಡುವ ಮಹತ್ವದ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಸಚಿವ ಭೈರತಿ ಸುರೇಶ್ ಅವರ ಈ ಸಕಾರಾತ್ಮಕ ಸ್ಪಂದನೆಯಿಂದ ಪಾಲಿಕೆ ನೌಕರರ ಮುಷ್ಕರ ಅಂತ್ಯಗೊಂಡಿದ್ದು, ಸರ್ಕಾರದ ಮತ್ತು ನೌಕರರ ನಡುವಿನ ಸಂಬಂಧ ಸುಧಾರಿಸುವ ಭರವಸೆ ಮೂಡಿದೆ. 

Tags:    

Similar News