Naxals Surrender | ಮಲೆನಾಡಿನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ; ಸತ್ತವರೆಷ್ಟು, ಶರಣಾದವರೆಷ್ಟು?
ಕರ್ನಾಟಕದಲ್ಲಿ ಎಎನ್‌ಎಫ್(Anti-Naxal Force) ಹಾಗೂ ನಕ್ಸಲರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ನಕ್ಸಲರು, ಶರಣಾದವರು, ನಕ್ಸಲರ ಗುಂಡೇಟಿಗೆ ಬಲಿಯಾದ ನಾಗರಿಕರು, ಅಧಿಕಾರಿಗಳ ಕುರಿತ ಟೈಮ್‌ಲೈನ್ ಇಲ್ಲಿದೆ.;
ರಾಜ್ಯದಲ್ಲಿ 80ರ ದಶಕದಿಂದ ಆರಂಭವಾದ ನಕ್ಸಲ್ ಚಟುವಟಿಕೆಯಲ್ಲಿ ಈವರೆಗೆ 29 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 17ಮಂದಿ ನಕ್ಸಲರು, 9 ಮಂದಿ ಪೊಲೀಸರು ಹಾಗೂ ಮೂವರು ನಾಗರಿಕರು ಮೃತಪಟ್ಟಿದ್ದಾರೆ.
ಎರಡು ದಶಕದಿಂದ ಉಡುಪಿ, ಚಿಕ್ಕಮಗಳೂರು ಜಿಲ್ಲೆ ಒಳಗೊಂಡಂತೆ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಪ್ರಬಲಗೊಂಡು ಈಗ ಮುಂಡಗಾರು ಲತಾ ಸೇರಿ ಆರು ಜನರ ಶರಣಾಗತಿಯಿಂದ ನಕ್ಸಲ್ ಹೋರಾಟ ಅಂತ್ಯ ಕಾಣುತ್ತಿದೆ.
ಕಳೆದ ಮೂರು ದಶಕದಲ್ಲಿ ಕರ್ನಾಟಕದಲ್ಲಿ ನಕ್ಸಲ್ ನಿಗ್ರಹ ಪಡೆ ಹಾಗೂ ನಕ್ಸಲರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ನಕ್ಸಲರು, ಸರ್ಕಾರದ ಮುಂದೆ ಶರಣಾದ ನಕ್ಸಲರು, ನಕ್ಸಲರ ಗುಂಡೇಟಿಗೆ ಬಲಿಯಾದ ನಾಗರಿಕರು ಹಾಗೂ ಅಧಿಕಾರಿಗಳ ಕುರಿತ ಟೈಮ್‌ಲೈನ್ ಇಲ್ಲಿದೆ.
ಕರ್ನಾಟಕದಲ್ಲಿ ನಕ್ಸಲ್ ಕರಾಳ ಇತಿಹಾಸ
ಎನ್‌ಕೌಂಟರ್ ಸರಣಿ
2003 ನವೆಂಬರ್ 17
ಉಡುಪಿ ಜಿಲ್ಲೆಯ ಈದು ಗ್ರಾಮದಲ್ಲಿ ನಡೆದ ಎನ್‌ಕೌಂಟರ್ ವೇಳೆ ನಕ್ಸಲರಾದ ಶಿವಮೊಗ್ಗ ಜಿಲ್ಲೆಯ ಸೊರಬದ ಪಾರ್ವತಿ ಹಾಗೂ ರಾಯಚೂರು ಜಿಲ್ಲೆಯ ಹಾಜೀಮಾ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು. ಅಡಗಿ ಕುಳಿತಿದ್ದ ಯಶೋಧಾ ಸೆರೆ ಸಿಕ್ಕಿದ್ದರು. ಇದು ರಾಜ್ಯದಲ್ಲಿ ನಡೆದ ಮೊದಲ ನಕ್ಸಲ್ ಹತ್ಯೆಯಾಗಿ ಗುರುತಿಸಿಕೊಂಡಿದೆ.
2005 ಫೆಬ್ರುವರಿ 06
ನಕ್ಸಲ್ ಚಳವಳಿಯ ನಾಯಕತ್ವ ವಹಿಸಿದ್ದ ಸಾಕೇತ್ ರಾಜನ್ ಕೊಪ್ಪ ತಾಲ್ಲೂಕಿನ ಮೆಣಸಿನಹಾಡ್ಯದ ಬಳಿ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ಅವರ ಅಂಗ ರಕ್ಷಕ ಶಿವಲಿಂಗು ಕೂಡ ಈ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ.
2005 ಜೂನ್ 23
ಉಡುಪಿಯ ಕುಂದಾಪುರ ತಾಲೂಕಿನ ಹಳ್ಳಿಹೊಳೆ ಸಮೀಪದ ದೇವರಬಾಳು ಎಂಬಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರ ಗುಂಡಿಗೆ ಬೆಳಗಾವಿ ಮೂಲದ ಅಜಿತ್ ಕುಸುಬಿ ಹಾಗೂ ಮೂಡಿಗೆರೆಯ ಉಮೇಶ್ ಬಣಕಲ್ ಮೃತಪಟ್ಟಿದ್ದರು.
2006 ಆಗಸ್ಟ್ 23
ಶೃಂಗೇರಿಯ ಕೆರೆಕಟ್ಟೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಕಚೇರಿ ಮೇಲೆ ನಕ್ಸಲ್ ದಾಳಿ. ಕೆಲ ದಿನದ ಬಳಿಕ ಕಾರ್ಕಳ ಮುನಿಯಾಲು ಮುಟ್ಲುಪಾಡಿಯಲ್ಲಿ ಸದಾನಂದ ಶೆಟ್ಟಿ ಅವರ ಬೈಕ್‌ಗೆ ಬೆಂಕಿ ಹಚ್ಚಿ ನಕ್ಸಲರಿಂದ ಬೆದರಿಕೆ.
2006 ಡಿಸೆಂಬರ್ 25
ಶೃಂಗೇರಿ ಬಳಿಯ ಕಿಗ್ಗಾದಲ್ಲಿ ನಕ್ಸಲ್ ದಿನಕರ ಎನ್‌ಕೌಂಟರ್‌ಗೆ ಬಲಿ.
2007 ಮಾರ್ಚ್ 13
ಶಂಕಿತ ನಕ್ಸಲ್ ಯುವತಿ ಚೆನ್ನಮ್ಮ ಅಮಾಸೆಬೈಲಿನಲ್ಲಿ ಸೆರೆ.
2007 ಜೂನ್ 03
ಶೃಂಗೇರಿ ಕಿಗ್ಗಾ ಸಮೀಪ ಗುಂಡಘಟ್ಟದಲ್ಲಿ ನಕ್ಸಲರಿಂದ ಅಂಗಡಿ ಮಾಲೀಕ ವೆಂಕಟೇಶ ಹತ್ಯೆ.
2007 ಜೂನ್ 07
ಆಗುಂಬೆ ತಲ್ಲೂರಂಗಡಿ ಬಳಿ ಕೆಎಸ್ಆರ್‌ಟಿಸಿ ಬಸ್‌ಗೆ ಬೆಂಕಿ.
2007 ಜುಲೈ 10
ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯ ಒಡೆಯರಮಠದಲ್ಲಿ ಪೊಲೀಸ್ ಎನ್‌ಕೌಂಟರ್‌ಗೆ ನಕ್ಸಲ್ ಯುವಕ ಸಿಂಧನೂರಿನ ಗೌತಮ್, ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ, ಕಾರ್ಮಿಕ ಸುಂದರೇಶ್, ಮನೆಯ ಯಜಮಾನರಾದ ರಾಮೇಗೌಡ್ಲು, ಕಾವೇರಿ ಬಲಿ.
2007 ಜುಲೈ 17
ಆಗುಂಬೆ ಸಮೀಪದ ಹುಲ್ಲಾರಬೈಲಿನಲ್ಲಿ ಗುಂಡಿನ ಚಕಮಕಿ, ಎಸ್ಐ ವೆಂಕಟೇಶ ಹತ್ಯೆ.
2008 ಮೇ 15
ಹೆಬ್ರಿ ಸಮೀಪದ ಸೀತಾನದಿ ಬಳಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಬಲಿ.
2008 ಜುಲೈ 07
ಬೆಳ್ತಂಗಡಿ ತಾಲೂಕಿನ ಕುತ್ಲೂರು ಹಾಗೂ ಕಾರ್ಕಳದ ತಿಂಗಳಮಕ್ಕಿಯಲ್ಲಿ ನಕ್ಸಲರ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ.
2008 ನವೆಂಬರ್ 13
ಶಿವಮೊಗ್ಗದಲ್ಲಿ ಶಂಕಿತ ನಕ್ಸಲ್ ಜನಾರ್ದನ ಬಂಧನ, ನಕ್ಸಲರು ಬಚ್ಚಿಟ್ಟ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಪೋಟಕ ವಶ.
2008 ನವೆಂಬರ್ 20
ಹೊರನಾಡು ಸಮೀಪ ಮಾವಿನಹೊಲ ಬಳಿ ಎನ್ಕೌಂಟರ್. ನಕ್ಸಲರಾದ ಸೊರಬದ ಮನೋಹರ್, ಸಹಚರರಾದ ನವೀನ್, ಅಭಿಲಾಷ್ ಹತ್ಯೆ, ಪೇದೆ ಗುರುಪ್ರಸಾದ್ ಸಾವು.
2008 ಡಿಸೆಂಬರ್ 07
ಹಳ್ಳಿಹೊಳೆ ಸಮೀಪದ ಕೃಷಿಕ ಜಮೀನ್ದಾರ ಕೇಶವ ಯಡಿಯಾಳರನ್ನು ಪೊಲೀಸರ ಮಾಹಿತಿದಾರನೆಂಬ ಆರೋಪದಲ್ಲಿ ಮನೆಗೆ ನುಗ್ಗಿ ನಕ್ಸಲರು ಹತ್ಯೆಗೈದರು.
2009 ಆಗಸ್ಟ್ 22
ಶೃಂಗೇರಿಯ ನೆಮ್ಮಾರಿನ ದಿಂಡೋಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೊಲೀಸರ ವಶ.
2010 ಮಾರ್ಚ್ 01
ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿ ಎಂಬಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಗೌಡ್ಲು ಯಾನೆ ಆನಂದ ಹತ್ಯೆ.
2011 ಅಗಸ್ಟ್ 09
ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಪಂ ವ್ಯಾಪ್ತಿಯ ನಾವೂರ ಗ್ರಾಮದ ಮಂಜಲದಲ್ಲಿ ಬೆಳಗಿನ ಜಾವ ನಕ್ಸಲ್ ನಿಗ್ರಹದಳದ ಪೊಲೀಸರ ಗನ್ ಮಿಸ್ ಫೈರ್ ಆಗಿ ಎಎನ್ಎಫ್ ಸಿಬ್ಬಂದಿ ಮಹಾದೇವ ಮಾನೆ ಬಲಿ.
2011 ಡಿಸೆಂಬರ್ 19
ಹೆಬ್ರಿ ಕಬ್ಬಿನಾಲೆ ಸಮೀಪದ ತಿಂಗಳ ಮಕ್ಕಿಯ ಸದಾಶಿವ ಗೌಡ (49) ತೆಂಗಿನಮಾರು ಮನೆಯಿಂದ ನಾಪತ್ತೆ, 22ರಂದು ವಿಷಯ ಬಹಿರಂಗ. ಶಂಕಿತ ನಕ್ಸಲ್ ವಿಶ್ವನಿಂದ ಪತ್ರಕರ್ತರಿಗೆ ಮಾಹಿತಿ.
2011 ಡಿಸೆಂಬರ್ 28
ತೆಂಗಿನಮಾರುವಿನಿಂದ ಎರಡು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ಸದಾಶಿವ ಗೌಡ ಎಂಬವರ ಶವ ಕೈಕಾಲು ಕಟ್ಟಿ ಸ್ಥಿತಿಯಲ್ಲಿ ಗೋಳಿಮರದಡಿ ಪತ್ತೆ. ನಕ್ಸಲರ ಬರಹವೂ ಸಮೀಪದಲ್ಲೇ ದೊರಕಿತ್ತು.
2024 ನವೆಂಬರ್ 18
ಕಾರ್ಕಳ ತಾಲೂಕಿನ ಹೆಬ್ರಿಯ ಪೀತಬೈಲುವಿನಲ್ಲಿ ಎಎನ್ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ.
ಶರಣಾದ ನಕ್ಸಲರು
2010 ಸೆಪ್ಟೆಂಬರ್ 28
ಕೊಪ್ಪ ತಾಲೂಕು ಹಾಗಲಗಂಚಿ ಗ್ರಾಮದ ವೆಂಕಟೇಶ್ ಶರಣಾಗಿದ್ದರು.
2010 ಅಕ್ಟೋಬರ್ 15
ಕೊಪ್ಪ ತಾಲೂಕು ದೂಬಳದ ಮಲ್ಲಿಕಾ, ಮೇಗೂರು ಗ್ರಾಮದ ಹೊರಲೆ ಜಯ ಹಾಗೂ ಯಡಗುಂದ ಗ್ರಾಮದ ಕೋಮಲ ಶರಣಾಗಿದ್ದರು.
2014 ಡಿಸೆಂಬರ್ 8
ಚಿಕ್ಕಮಗಳೂರಿನಲ್ಲಿ ಶೃಂಗೇರಿ ತಾಲ್ಲೂಕಿನ ಸಿರಿಮನೆ ನಾಗರಾಜ್, ಚಿತ್ರದುರ್ಗದ ನೂರ್ ಜುಲ್ಫಿಕಾರ್ ಅಲಿಯಾಸ್ ನೂರ್ ಶ್ರೀಧರ್ ಅವರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಗೌರಿ ಲಂಕೇಶ್ ನೇತೃತ್ವದಲ್ಲಿ ಶರಣಾಗಿದ್ದರು.
2016 ನವೆಂಬರ್14
ರಿಜ್ವಾನ ಬೇಗಂ, ಆಕೆಯ ಪತಿ ರಾಜು ಅಲಿಯಾಸ್ ಪರಶುರಾಮ, ಭಾರತಿ, ನಿಲುಗುಳಿ ಪದ್ಮನಾಭನ್ ಪೊಲೀಸರ ಮುಂದೆ ಶರಣಾಗಿದ್ದರು.
2017 ಜೂನ್ 05
ಬೆಂಗಳೂರಿನ ಶಿವು ಅಲಿಯಾಸ್ ಜ್ಞಾನದೇವ್, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಚೆನ್ನಮ್ಮ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕನ್ಯಾಕುಮಾರಿ ಶರಣಾಗಿದ್ದರು.
2025 ಜನವರಿ 08
ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ ನೇತ್ರಾವತಿ ತಂಡದ ಸದಸ್ಯರಾದ ಸುಂದರಿ, ವಸಂತ್, ಜಯಣ್ಣ, ಜಿಶಾ, ವನಜಾಕ್ಷಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾಗಿದ್ದಾರೆ.
ಸೆರೆ ಸಿಕ್ಕ ನಕ್ಸಲರು
2021 ನವೆಂಬರ್ 09
ಶೃಂಗೇರಿ ತಾಲೂಕಿನ ಬುಕಡಿಬೈಲು ಗ್ರಾಮದ ಬಿ.ಜಿ ಕೃಷ್ಣಮೂರ್ತಿ ಮತ್ತು ಮೂಡಿಗೆರೆ ತಾಲೂಕಿನ ಮಾವಿನಕೆರೆ ಗ್ರಾಮದ ಸಾವಿತ್ರಿ ಅವರನ್ನು ಕೇರಳದ ಕಾಸಗೋಡಿನಲ್ಲಿ ಬಂಧಿಸಲಾಗಿತ್ತು. ಬಂಧನಕ್ಕೊಳಗಾದ ಸಾವಿತ್ರಿ ಈಚೆಗೆ ಎನ್ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡನ ಪತ್ನಿ ಎಂದು ಹೇಳಲಾಗಿದೆ.
ಬಿ.ಜಿ. ಕೃಷ್ಣಮೂರ್ತಿ ತಂಡದ ಲತಾ
ಶರಣಾಗುತ್ತಿರುವ ಮುಂಡಗಾರು ಲತಾ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ತಂಡದಲ್ಲಿ ಗುರುತಿಸಿಕೊಂಡಿದ್ದರು. ಬಿ.ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನದ ಬಳಿಕ ನಕ್ಸಲ್ ಹೋರಾಟದ ನಾಯಕತ್ವವನ್ನು ವಿಕ್ರಂಗೌಡ ಅವರಿಗೆ ವಹಿಸಲಾಗಿತ್ತು. ವಿಕ್ರಂ ಗೌಡ ಎನ್‌ಕೌಂಟರ್ ಬಳಿಕ ಸರಿಯಾದ ನಾಯಕನಿಲ್ಲದೇ ಸಾಗುತ್ತಿದ್ದ ನಕ್ಸಲ್ ಹೋರಾಟವನ್ನು ಮುಂಡಗಾರು ಲತಾ ಮುನ್ನಡೆಸುತ್ತಿದ್ದರು.
ಸುಂದರಿ ತಮ್ಮ ಕೂಡ ನಕ್ಸಲ್
ಸುಂದರಿ ಕುತ್ಲೂರು ಸಹೋದರ ವಸಂತ ಗೌಡ್ಲು ಕೂಡ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ತಮ್ಮನ ಹಾದಿಯಲ್ಲೇ ಸಾಗಿದ್ದ ಸುಂದರಿ 2007 ರಲ್ಲಿ ಬಂದೂಕು ಹಿಡಿದಿದ್ದಳು. ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿ ಎಂಬಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗೆ ವಸಂತ ಗೌಡ್ಲು ಅಲಿಯಾಸ್ ಆನಂದ ಮೃತಪಟ್ಟಿದ್ದ.