Naxals Surrender | ಜನರ ತೆರಿಗೆ ಹಣ ನುಂಗಿದ ಭ್ರಷ್ಟರಲ್ಲ ನಕ್ಸಲರು; ಸಿಎಂ ತಿರುಗೇಟು

ಛತ್ತೀಸಗಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಖುದ್ದಾಗಿ ಬರಮಾಡಿಕೊಂಡಾಗ ಸುನಿಲ್‌ ಕುಮಾರ್‌ ಯಾಕೆ ಬೆಚ್ಚಿ ಬಿದ್ದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.;

Update: 2025-01-08 15:31 GMT
ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌

ರಾಜ್ಯದಲ್ಲಿ ಆರು ಮಂದಿ ನಕ್ಸಲರು ಶರಣಾಗುತ್ತಿರುವಾಗ ಬಿಜೆಪಿ ಶಾಸಕ ಸುನೀಲ್ ಕುಮಾರ್ ಬೆಚ್ಚಿಬಿದ್ದಂತೆ ಕಾಣುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಕ್ಸಲರನ್ನು ಪುನರ್ವಸತಿ ಪ್ಯಾಕೇಜ್‌ ಅಡಿ ಮುಖ್ಯವಾಹಿನಿಗೆ ಕರೆತರುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ತಿಂಗಳು ಛತ್ತೀಸಗಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಖುದ್ದಾಗಿ ಬರಮಾಡಿಕೊಂಡು ಆನಂದಬಾಷ್ಟ ಸುರಿಸಿದಾಗ ಯಾಕೆ ಬೆಚ್ಚಿ ಬಿದ್ದಿಲ್ಲ. ಶಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸಿಎಂ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್ ದಂಪತಿಗೆ ಅಲ್ಲಿನ ಬಿಜೆಪಿ ಸರ್ಕಾರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 41 ಲಕ್ಷ ರೂ. ನೆರವು ನೀಡಿರುವುದು ಸುನೀಲ್ ಕುಮಾರ್ ಗೊತ್ತಿರಲಿಲ್ಲವೇ?, ಈ ನೆರವನ್ನು ಯಾವ ಮಾನದಂಡದಲ್ಲಿ ನೀಡಿದ್ದೀರಿ ಎಂದು ಕೇಳುವ ಧೈರ್ಯ ಸುನೀಲ್ ಕುಮಾರ್ ಇದೆಯೇ ಎಂದು ಕಿಡಿಕಾರಿದ್ದಾರೆ.

ಶರಣಾಗಿರುವ ನಕ್ಸಲೀಯರು ಅನುಸರಿಸಿದ ಹಿಂಸಾ ಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಆದರೆ, ಇವರಲ್ಲಿ ಯಾರೂ ಜನರ ತೆರಿಗೆ ಹಣ ನುಂಗಿದ ಭ್ರಷ್ಟರೂ ಅಲ್ಲ, ರಾಮ, ಪರಶುರಾಮನ ಮೂರ್ತಿ ನಿರ್ಮಾಣದಲ್ಲಿಯೂ ಮೋ ಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ. ದಾರಿ ತಪ್ಪಿ ಹಿಂಸೆಯ ಮಾರ್ಗ ಹಿಡಿದವರ ಮನವೊಲಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸಿ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತನೆ ಮಾಡುವುದು ಸರ್ಕಾರದ ಕರ್ತವ್ಯ. ಇದೇ ಕರ್ತವ್ಯವನ್ನು ನಮ್ಮ ಸರ್ಕಾರ ಪಾಲಿಸುತ್ತಾ ಬಂದಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಿಎಂ ತಿಳಿಸಿದ್ದಾರೆ.

ಶರಣಾಗುತ್ತಿರುವ ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ  ಪುನರ್ವಸತಿ ಪ್ಯಾಕೇಜ್‌ ಅಡಿಯಲ್ಲಿ ಪರಿಹಾರ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಸರ್ಕಾರ ಯಾವ ಮಾನದಂಡದಲ್ಲಿ ಪರಿಹಾರ ನೀಡುತ್ತಿದೆ ಎಂದು ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಪ್ರಶ್ನಿಸಿದ್ದರು.

Tags:    

Similar News