Naxal Surrender | ಶರಣಾಗತಿಗೂ ಮುನ್ನ ಸರ್ಕಾರಕ್ಕೆ ಪತ್ರ ಬರೆದ ನಕ್ಸಲರು!
ಸರ್ಕಾರದ ಸೂಚನೆಯಂತೆ ಶರಣಾಗತಿಗೆ ಆರು ಮಂದಿ ನಕ್ಸಲರು ನಿರ್ಧರಿಸಿದ್ದಾರೆ. ಆದರೆ ನಕ್ಸಲರು ಶರಣಾಗುವ ಮುನ್ನ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.;
ಸರ್ಕಾರದ ಸೂಚನೆಯಂತೆ ಶರಣಾಗತಿಗೆ ನಿರ್ಧರಿಸಿರುವ ಆರು ಮಂದಿ ನಕ್ಸಲರು ಶರಣಾಗುವ ಮುನ್ನ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟಿದ್ದು, ಈ ತಮ್ಮ ಬೇಡಿಕೆಗಳನ್ನು ಸಿ.ಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ನಕ್ಸಲ್ ಸಂಘಟನೆಯ ನಾಯಕತ್ವ ವಹಿಸಿಕೊಂಡಿದ್ದ ವಿಕ್ರಂ ಗೌಡ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತೆಬೈಲ್ ಅರಣ್ಯದಲ್ಲಿ ಎನ್ಕೌಂಟರ್ಗೆ ಬಲಿಯಾಗಿದ್ದರು. ವಿಕ್ರಂ ಗೌಡ ಎನ್‌ಕೌಂಟರ್ ಬಳಿಕ ರಾಜ್ಯದ ನಕ್ಸಲ್ ಹೋರಾಟ ದಿಕ್ಕು ತಪ್ಪಿದಂತಾಗಿದೆ ಎನ್ನಲಾಗಿದೆ.
ವಿಕ್ರಂಗೌಡ ಎನ್‌ಕೌಂಟರ್ ಬಳಿಕ ರಾಜ್ಯದಲ್ಲಿ ಸಕ್ರಿಯವಾಗಿರುವ ನಕ್ಸಲ್ ಸಂಘಟನೆಯ ಪ್ರಮುಖ ಆರು ನಕ್ಸಲರು ಶರಣಾಗಲು ಸಮ್ಮತಿ ಸೂಚಿಸಿದ್ದಾರೆ. ಆದರೆ ಶರಣಾಗತಿಗೆ ಮುನ್ನ ಸರ್ಕಾರದ ಮುಂದೆ ಹಲವು ಬೇಡಿಕೆ ಇಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ನಕ್ಸಲರು ಬರೆದ ಪತ್ರದಲ್ಲಿ ಏನಿದೆ?
“ಆರು ಜನರಾದ ನಾವು ಸಂಪೂರ್ಣ ಸಮ್ಮತಿ ಮತ್ತು ಏಕ ಅಭಿಪ್ರಾಯದ ಮೇರೆಗೆ ಈ ಪತ್ರವನ್ನು ತಮಗೂ ಆ ಮೂಲಕ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಸರ್ಕಾರಗಳಿಗೂ ಬರೆಯುತ್ತಿದ್ದೇವೆ. ದೇಶದ ಇಂದಿನ ಸಂದರ್ಭ, ಚಳುವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯ ಎಲವನ್ನು ಗಮನದಲ್ಲಿ ಇಟ್ಟುಕೊಂಡು ಸಶಸ್ತ್ರ ಹೋರಾಟದ ಮಾರ್ಗವನ್ನು ಬದಲಾಯಿಸಿ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಒಳ್ಳೆಯದು ಮತ್ತು ಅದಕ್ಕೆ ಸಾಧ್ಯತೆ ಇದೆ ಎಂದು ಮನವರಿಕೆಯಾಗಿದೆ. ನಾವು ಯಾವುದೇ ಒತ್ತಡವಿಲ್ಲದೆ. ಸ್ವ-ಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಬಯಸುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ಕೆಲವು ಖಚಿತ ಸ್ಪಷ್ಟೀಕರಣವನ್ನು ಸರ್ಕಾರ ಮತ್ತು ಸಂಬಂಧಿತ ಸಮಿತಿಯಿಂದ ಬಯಸುತ್ತಿದ್ದೇವೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ನಕ್ಸಲರು ಕೋರಿರುವ ಸ್ಪಷ್ಟೀಕರಣ ಏನು?
- ನಾವು ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಘನತೆಯುತವಾಗಿ ನಡೆಯಬೇಕು. ನಮ್ಮ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗದ ಯಾವುದೇ ರೀತಿಯ ಒತ್ತಡ ಹೇರಬಾರದು.
- ನಾವು ಹೋರಾಟದ ಮಾರ್ಗವನ್ನು ಬದಲಾಯಿಸಿದ್ದೇವೆ. ಆದರೆ, ಜನಪರ ಹೋರಾಟವನ್ನು ಕೈ ಬಿಡುತ್ತಿಲ್ಲ. ಹೀಗಾಗಿ ಪ್ರಜಾತಾಂತ್ರಿಕ ಚಳುವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ತಡೆ ಒಡ್ಡಬಾರದು. ನಮ್ಮ ಬದುಕನ್ನು ಜನತೆಗೆ ಮುಡುಪಿಟ್ಟಿದ್ದೇವೆ. ಜನ ಹಿತಕ್ಕಾಗಿಯೇ ಬದುಕಲು ಬಯಸುತ್ತೇವೆ.
- ನಾವು ಇಲ್ಲಿಂದ ಹೊರ ಬಂದು ಜೈಲುಗಳಲ್ಲಿ ಕೊಳೆಯುವ ಮನಸ್ಥಿತಿ ಎದುರಾಗಬಾರದು. ನಮ್ಮ ಮೇಲೆ ಹಾಕಿರುವ ಹೆಚ್ಚಿನ ಪಾಲು ಕೇಸುಗಳು ಯಾವುದೇ ಅನುಮಾನವಿಲ್ಲದೆ ಸುಳ್ಳು ಕೇಸುಗಳಾಗಿವೆ. ಜಾವು ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲದ ಪ್ರಕರಣಗಳಲ್ಲಿ ನಮ್ಮ ಹೆಸರುಗಳನ್ನು ಸೇರಿಸಲಾಗಿದೆ. ಈ ಕೇಸುಗಳ ಜಾಲದಿಂದ ನಮಗೆ ಮುಕ್ತಿ ಸಿಗಬೇಕು.
- ಮುಖ್ಯವಾಹಿನಿಗೆ ಬಂದ ನಂತರ ಬೇಗನೆ ಜಾಮೀನಿನ ಮೇಲೆ ಹೊರ ಬರಲು ಸಹಕರಿಸಬೇಕು.
- ಎಲ್ಲ ಮೊಕದ್ದಮೆಗಳನ್ನು ಒಂದೇ ನ್ಯಾಯಾಲಯದ ಅಡಿ ತಂದು ತ್ವರಿತ ವಿಚಾರಣೆ ನಡೆಯುವಂತೆ ಮಾಡಬೇಕು.
- ಕೇಸುಗಳನ್ನು ನಡೆಸಲು ಕಾನೂನು ಹಾಗೂ ಆರ್ಥಿಕ ನೆರವು ಒದಗಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು.
- ಈಗಾಗಲೇ ಮುಖ್ಯವಾಹಿನಿಗೆ ಬಂದ ಹಲವರ ಬದುಕು ಅತಂತ್ರವಾಗಿದೆ. ಅವರ ಕೇಸುಗಳ ಇತ್ಯರ್ಥಕ್ಕೆ ಹಾಗೂ ಬದುಕಿನ ಭದ್ರತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು.
- ಬೇರೆ ಬೇರೆ ಜೈಲುಗಳಲ್ಲಿರುವ ಸಂಗಾತಿಗಳಿಗೂ (ಅವರು ಬಂಧನಕ್ಕೊಳಗಾಗಿದ್ದರೂ ಸಹ) ಈ ಪ್ಯಾಕೇಜ್ ಅನ್ವಯ ಆಗುವಂತೆ ಮಾಡಿ ಅವರ ಬಿಡುಗಡೆಗೆ ಸಹಕರಿಸಬೇಕು.
- ಹೊರ ಬಂದ ನಂತರ ನಮ್ಮ ಜೀವನಕ್ಕೆ ದಾರಿ ಏನು ಎಂಬ ಸ್ಪಷ್ಟತೆ ಬೇಕು.
- ವಿಕ್ರಮಗೌಡ ಅವರ ಎನ್‌ಕೌಂಟರ್ ಹತ್ಯೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶ ಮಾಡಬೇಕು.
ಶರಣಾಗಲು ನಿರ್ಧರಿಸಿರುವ ನಕ್ಸಲರು ಯಾರು?
ಒಟ್ಟು 6 ಮಂದಿ ನಕ್ಸಲರು ಸರ್ಕಾರದ ಮುಂದೆ ಶರಣಾಗಲು ನಿರ್ಧಿರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್ ನಾಯಕಿ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ ಮತ್ತು ಆಂಧ್ರಪ್ರದೇಶದ ಮಾರೆಪ್ಪ ಅರೋಲಿ ಸೇರಿದಂತೆ ಒಟ್ಟು ಆರು ಜನ ನಕ್ಸಲರು ಶರಣಾಗಲಿದ್ದಾರೆ.
6 ಮಂದಿ ಮೇಲೆ ಹಲವು ರಾಜ್ಯಗಳಲ್ಲಿ ಪ್ರಕರಣ
ಶರಣಾಗಲಿರುವ ಈ 6 ಮಂದಿ ಮೇಲೆ ಹಲವು ಪ್ರಕರಣಗಳಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಡಗಾರು ಲತಾ ಮೇಲೆ 27 ಕೇಸ್, ವನಜಾಕ್ಷಿ ಮೇಲೆ 11 ಕೇಸ್ ಹಾಗೂ ಸುಂದರಿ ಮೇಲೆ 1 ಪ್ರಕರಣ ಇವೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲರು ಇವರಾಗಿದ್ದಾರೆ.
ನಕ್ಸಲರ ಶರಣಾಗತಿ ಬಗ್ಗೆ ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ನಕ್ಸಲರಿಗೆ ಶರಣಾಗಿ ಎಂದು ನಾನೇ ಕರೆ ಕೊಟ್ಟಿದ್ದೇನೆ. ಅವರ ಮನಸ್ಸು ಪರಿವರ್ತನೆ ಆಗಬಹುದು ಎಂದು ಹೇಳಿದ್ದರು. ಅಲ್ಲದೆ, ನಕ್ಸಲರ ಬೇಡಿಕೆಯಂತೆ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದಾಗಿಯೂ ಮುಖ್ಯಮಂತ್ರಿ ಭರವಸೆ ನೀಡಿದ್ದರು.