ಅಮೆರಿಕದಲ್ಲಿ 'ನಂದಿನಿ' ಹವಾ: ಫ್ಲೋರಿಡಾದ ನಾವಿಕ ಸಮ್ಮೇಳನದಲ್ಲಿ ಉತ್ಪನ್ನಗಳ ಭರ್ಜರಿ ಬಿಡುಗಡೆ
ಈ ಐತಿಹಾಸಿಕ ಕ್ಷಣಕ್ಕೆ ನಾವಿಕ ಸಂಸ್ಥೆಯ ಶಿವಕುಮಾರ್ ಮತ್ತು ಹರ್ಷಿತ್ ಗೌಡ ಸೇರಿದಂತೆ ಹಲವಾರು ಪದಾಧಿಕಾರಿಗಳು ಸಾಕ್ಷಿಯಾದರು.;
ಕನ್ನಡ ನಾಡಿನ ಹೆಮ್ಮೆಯ ಪ್ರತೀಕ ಮತ್ತು ರೈತರ ಜೀವನಾಡಿಯಾಗಿರುವ ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) 'ನಂದಿನಿ' ಬ್ರ್ಯಾಂಡ್, ಇದೀಗ ಅಮೆರಿಕದ ಮಾರುಕಟ್ಟೆಯಲ್ಲಿ ತನ್ನ ಜೈತ್ರಯಾತ್ರೆಯನ್ನು ಆರಂಭಿಸಿದೆ. ಅಮೆರಿಕದ ಫ್ಲೋರಿಡಾದ ಲೇಕ್ ಲ್ಯಾಂಡ್‌ನಲ್ಲಿ ನಡೆದ ಪ್ರತಿಷ್ಠಿತ 'ನಾವಿಕ' ಸಮ್ಮೇಳನದಲ್ಲಿ, ನಂದಿನಿ ಬ್ರ್ಯಾಂಡ್‌ನ ಎಲ್ಲಾ ಉತ್ಪನ್ನಗಳನ್ನು ಶನಿವಾರ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ. ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಶಾಸಕರಾದ ರವಿ ಗಾಣಿಗ, ಅರವಿಂದ ಬೆಲ್ಲದ್, ನಟಿ ರಮ್ಯಾ, ಹಿರಿಯ ನಟ ಶ್ರೀನಾಥ್, ನಟ ಮತ್ತು ನಿರ್ದೇಶಕ ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಐತಿಹಾಸಿಕ ಕ್ಷಣಕ್ಕೆ ನಾವಿಕ ಸಂಸ್ಥೆಯ ಶಿವಕುಮಾರ್ ಮತ್ತು ಹರ್ಷಿತ್ ಗೌಡ ಸೇರಿದಂತೆ ಹಲವಾರು ಪದಾಧಿಕಾರಿಗಳು ಸಾಕ್ಷಿಯಾದರು. ಈ ಬಿಡುಗಡೆಯ ಮೂಲಕ, ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗರು ಮತ್ತು ಭಾರತೀಯರಿಗೆ ಇನ್ನು ಮುಂದೆ ತಮ್ಮ ನೆಚ್ಚಿನ ನಂದಿನಿ ಉತ್ಪನ್ನಗಳು ಸುಲಭವಾಗಿ ಲಭ್ಯವಾಗಲಿವೆ.
ನಂದಿನಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಸಿಹಿ ತಿಂಡಿಗಳು ಸೇರಿದಂತೆ ಎಲ್ಲಾ ಉತ್ಪನ್ನಗಳನ್ನು ಅಮೆರಿಕದಾದ್ಯಂತ ತಲುಪಿಸುವ ಗುರಿಯನ್ನು ಕೆಎಂಎಫ್ ಹೊಂದಿದೆ. ಈ ಮಹತ್ವದ ಹೆಜ್ಜೆಯು, ಕರ್ನಾಟಕದ ರೈತರ ಆರ್ಥಿಕ ಸಬಲೀಕರಣಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.