Namma Nandini Brand | ತಿರುಪತಿ ತಿಮ್ಮಪ್ಪಗೆ ನಂದಿನಿ ತುಪ್ಪ, ಹೈನುಗಾರರಿಗೆ ಲಾಭದ ಕಪ್ಪ!

ಇತ್ತೀಚೆಗೆ ತಿರುಪತಿ ಲಡ್ಡು ವಿವಾದದ ಬಳಿಕ ಕೆಎಂಎಫ್ ನಂದಿನಿ ತುಪ್ಪಕ್ಕೆ ಈಗ ಭಾರೀ ಬೇಡಿಕೆ ಬಂದಿದೆ. ಎಂದಿನಂತೆ ತುಪ್ಪದ ಲಾಭ ಹೈನುಗಾರರಿಗೆ ಮಾತ್ರ ಎಂಬ ಮಂತ್ರವನ್ನು ಕೆಎಂಎಫ್ ಪಠಿಸುತ್ತಿದೆ.;

Update: 2024-09-23 12:42 GMT

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಿದ ಸುದ್ದಿ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಚಿತ್ತ ಕರ್ನಾಟಕದ ಕೆಎಂಎಫ್ ನಂದಿನಿ ಬ್ರ್ಯಾಂಡ್ ನತ್ತ ನಟ್ಟಿದೆ. ಆ ಮೂಲಕ ನೈಜತೆ, ಪರಿಶುದ್ಧತೆಯೊಂದಿಗೆ ಕೆಎಂಎಫ್ ನಂದಿನಿ ಬ್ರ್ಯಾಂಡ್ ತುಪ್ಪ ಮತ್ತೊಮ್ಮೆ ದೇಶದ ಗಮನ ಸೆಳೆಯುತ್ತಿದೆ.

2020 ರಿಂದ 2024ರವರೆಗೆ ಟೆಂಡರ್ ಪೈಪೋಟಿಯಿಂದಾಗಿ ತಿರುಪತಿಗೆ ನಂದಿನಿ ತುಪ್ಪ ಸರಬರಾಜು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ತಿರುಪತಿ ಲಡ್ಡು ತಯಾರಿಕೆಗೆ ಮೀನಿನ ಎಣ್ಣೆ, ಹಂದಿ ಹಾಗೂ ದನದ ಕೊಬ್ಬು ಬಳಸಿರುವುದು ಪ್ರಯೋಗಾಲಯದ ವರದಿಯಿಂದ ಬಹಿರಂಗವಾದ ಬಳಿಕ ಕೆಎಂಎಫ್ ನಂದಿನಿ ತುಪ್ಪಕ್ಕೆ ಈಗ ಭಾರೀ ಬೇಡಿಕೆ ಬಂದಿದೆ. ಆ ಅವಕಾಶ ಬೆನ್ನಲ್ಲೇ, ಎಂದಿನಂತೆ ತುಪ್ಪದ ಲಾಭ ಹೈನುಗಾರರಿಗೆ ಮಾತ್ರ ಎಂಬ ಮಂತ್ರವನ್ನು ಕೆಎಂಎಫ್ ಪಠಿಸುತ್ತಿದೆ.

ತುಪ್ಪ ಮಾರಾಟದ ಲಾಭ ನೇರ ರೈತರಿಗೆ

ಕೆಎಂಎಫ್ ನಂದಿನಿ ತುಪ್ಪದ ಮಾರಾಟದಿಂದ ಬರುವ ಆದಾಯವನ್ನು ನೇರ ರೈತರಿಗೆ ವರ್ಗಾಯಿಸುವ ಉದ್ಧೇಶದೊಂದಿಗೆ ಕೆಎಂಎಫ್ ಸಂಸ್ಥೆ ತಿರುಪತಿ ತಿರುಮಲ ದೇವಸ್ಥಾನಕ್ಕೆ(ಟಿಟಿಡಿ) ತುಪ್ಪ ಪೂರೈಸಲು ಒಪ್ಪಿಕೊಂಡಿದೆ.

"ತಿರುಪತಿ ದೇವಸ್ಥಾನಕ್ಕೆ ಸದ್ಯ 350 ಮೆಟ್ರಿಕ್ ಟನ್ ತುಪ್ಪವನ್ನು ಪೂರೈಕೆ ಮಾಡಲಾಗಿದೆ. ತುಪ್ಪ ಸಾಗಣೆಯಲ್ಲಿ ಯಾವುದೇ ವ್ಯತ್ಯಾಸ, ಲೋಪ ಆಗದಂತೆ ಸುರಕ್ಷತೆಗೆ ಕೆಎಂಎಫ್ ಒತ್ತು ನೀಡಿದೆ. ತುಪ್ಪ ಸಾಗಿಸುವ ವಾಹನಗಳಿಗೆ ಜಿಪಿಎಸ್, ಎಲೆಕ್ಟ್ರಾನಿಕ್ ಡೋರ್ ಅಳವಡಿಸಲಾಗಿದೆ. ತುಪ್ಪದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇಂದು ದೇಶದ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೇನೆಗೂ ಕೆಎಂಎಫ್ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತಿದೆ. ರೈತರಿಂದ ಪಡೆದ ಹಾಲನ್ನು ಹಾಲು ಉತ್ಪಾದಕ ಸಹಕಾರ ಸಂಘಗಳ ಮೂಲಕ ಡೈರಿಗೆ ಸಾಗಿಸುವವರೆಗೂ ಸುರಕ್ಷತೆಗೆ ಒತ್ತು ನೀಡಲಾಗಿದೆ. ನಂದಿನಿ ತುಪ್ಪದಿಂದ ಬರುವ ಆದಾಯದಲ್ಲಿ ಶೇ.87 ರಷ್ಟು ಪಾಲನ್ನು ನೇರವಾಗಿ ರೈತರಿಗೆ ವರ್ಗಾಯಿಸುವ ಇರಾದೆ ಕೆಎಂಎಫ್ ಸಂಸ್ಥೆಯದ್ದಾಗಿದೆ. ಉಳಿದ ಶೇ.13 ರಷ್ಟು ಆದಾಯವನ್ನು ಆಡಳಿತಾತ್ಮಕ ವೆಚ್ಚಗಳಿಗೆ ಬಳಸಲಾಗುತ್ತದೆ" ಎಂದು ಬಮೂಲ್ ಹಾಗೂ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದಕುಮಾರ್ ʼದಿ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ದಾಸ್ತಾನಿಗೆ ಅಗತ್ಯ ವ್ಯವಸ್ಥೆ

ರಾಜ್ಯದ ಒಟ್ಟು 16 ಜಿಲ್ಲಾ ಒಕ್ಕೂಟಗಳಿಂದ ಸಂಗ್ರಹಿಸುವ ಹಾಲನ್ನು ಮಾರಾಟ ಮಾಡುವುದರ ಜೊತೆಗೆ ತುಪ್ಪ, ಮೊಸರು, ಮಜ್ಜಿಗೆಗೆ ಬಳಸಲಾಗುತ್ತಿದೆ. ಸದ್ಯ ಕೆಎಂಎಫ್ ಒಕ್ಕೂಟದ ಬಳಿ 600 ಮೆಟ್ರಿಕ್ ಟನ್ ತುಪ್ಪ ಸಂಗ್ರಹಿಸಿಡಲು ಗೋದಾಮು ವ್ಯವಸ್ಥೆ ಇದೆ. ಪ್ರತಿ ನಿತ್ಯ 15 ಲಕ್ಷ ಲೀಟರ್ ಹಾಲನ್ನು ತುಪ್ಪ ತಯಾರಿಕೆಗೆ ಬಳಸಲಾಗುತ್ತಿದೆ ಎಂದು ಬಿ.ಸಿ. ಆನಂದ್ ಕುಮಾರ್ ಮಾಹಿತಿ ನೀಡಿದರು.

ಒಟ್ಟಾರೆ ರಾಜ್ಯದಲ್ಲಿ ಹಾಲು ಹಾಗೂ ಅದರ ಉತ್ಪನ್ನಗಳಿಗೆ ಶೇ.25 ರಷ್ಟು ಬೇಡಿಕೆ ಹೆಚ್ಚಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಿದ ಪರಿಣಾಮ ಬೇಡಿಕೆ ಹೆಚ್ಚಾಗುತ್ತಿದೆ. ನಾವು ಗುಣಮಟ್ಟ ಕಾಯ್ದುಕೊಂಡದ್ದರಿಂದಲೇ ಇದು ಸಾಧ್ಯವಾಗಿದೆ. ನಿರ್ವಹಣೆಯಲ್ಲೂ ನಾವು ರಾಜಿಯಾಗಲ್ಲಎಂದರು.

ರಾಜ್ಯದ ಮುಜರಾಯಿ ಇಲಾಖೆಗೆ ಸೇರುವ ಎಲ್ಲ ದೇವಾಲಯಗಳಲ್ಲೂ ಪ್ರಸಾದ ತಯಾರಿಕೆ ಮತ್ತು ದೀಪಕ್ಕೆ ಬಳಸಲು ನಂದಿನಿ ತುಪ್ಪವನ್ನೇ ಬಳಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಹೆಚ್ಚಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲಿನ ದರವನ್ನು 5ರೂ ಹೆಚ್ಚಿಸುವುದಾಗಿ ಘೋಷಣೆ ಮಾಡಿದ್ದು, ಅದೂ ಕೂಡ ನೇರವಾಗಿ ರೈತರಿಗೆ ಸೇರಲಿದೆ. ಹೈನುಗಾರಿಕೆಯಿಂದ ವಿಮುಖರಾಗುತ್ತಿರುವ ಈ ಕಾಲಘಟ್ಟದಲ್ಲಿ ಹೆಚ್ಚೆಚ್ಚು ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಬಿ.ಸಿ.ಆನಂದಕುಮಾರ್ ಮನವಿ ಮಾಡಿದರು.

ಅಮುಲ್ ಗೂ ಜಗ್ಗದ ಬ್ರ್ಯಾಂಡ್ ನಂದಿನಿ

ಗುಜರಾತಿನ ಅಮುಲ್ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದರೂ ನಂದಿನಿ ಬ್ರ್ಯಾಂಡ್‌ ಮುಂದೆ ಅದರ ಪ್ರಭಾವ ಮಂಕಾಗಿದೆ. ಕಳೆದ ಏ.5 ರಂದು ಅಮುಲ್ ಇ-ಕಾಮರ್ಸ್ ಪೋರ್ಟಲ್ಗಳ ಮೂಲಕ ಹಾಲು, ಮೊಸರು ಪೂರೈಸುವ ಪ್ರಯತ್ನಕ್ಕೆ ಕೈಹಾಕಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿನ್ನಡೆ ಅನುಭವಿಸಿತು.

ಆಂಧ್ರಪ್ರದೇಶ, ತಮಿಳುನಾಡು, ಉತ್ತರಭಾರತದ ಕೆಲ ರಾಜ್ಯಗಳು ಸೇರಿದಂತೆ ರಾಜ್ಯದಲ್ಲಿ ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತೃತವಾಗಿದೆ. ಇದಕ್ಕೆ ಹೊಡೆತ ನೀಡುವ ಅಮುಲ್ ಪ್ರಯತ್ನಕ್ಕೆ ಕನ್ನಡಿಗರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.

ಖಾಸಗಿ ಕಂಪನಿಗಳಿಗೂ ಕೆಎಂಎಫ್‌ ಬೆಣ್ಣೆಯೇ ಮೆಚ್ಚು

ದೇಶದಲ್ಲಿರುವ ಸಾಕಷ್ಟು ತುಪ್ಪ ತಯಾರಿಕೆ ಕಂಪನಿಗಳು ಕೆಎಂಎಫ್‌ ನಿಂದಲೇ ಬೆಣ್ಣೆ ಖರೀದಿಸುತ್ತಿವೆ. ಜಿಆರ್‌ಬಿ, ಶ್ರೀಕೃಷ್ಣ, ಪತಂಜಲಿ ಸೇರಿದಂತೆ ವಿವಿಧ ಬ್ರ್ಯಾಂಡ್‌ ಗಳ ಹೆಸರಲ್ಲಿ ಮಾರುಕಟ್ಟೆಯಲ್ಲಿರುವ ತುಪ್ಪ ತಯಾರಿಕಾ ಕಂಪನಿಗಳು ಕೆಎಂಎಫ್‌ ನಿಂದಲೇ ಸಗಟು ರೂಪದಲ್ಲಿ ಬೆಣ್ಣೆ ಖರೀದಿಸುತ್ತಿವೆ. ಗುಣಮಟ್ಟದ ಬೆಣ್ಣೆ ಪೂರೈಸುವುದರಿಂದ ಗುಣಮಟ್ಟದ ತುಪ್ಪವನ್ನೂ ಮಾರುಕಟ್ಟೆಗೆ ಪೂರೈಸುತ್ತಿವೆ ಎಂಬುದು ಕೆಎಂಎಫ್‌ ನಿರ್ದೇಶಕರ ಮಾತು.

ಕೆಎಂಎಫ್ ನುಡಿದಂತೆ ನಡೆಯಲ್ಲ: ರೈತ ಸಂಘ

ಆದರೆ, ಹೆಚ್ಚುವರಿ ತುಪ್ಪ ಮಾರಾಟ ಮತ್ತು ಹಾಲು ಮಾರಾಟದಿಂದ ಬರುವ ಲಾಭಾಂಶವನ್ನು ನೇರವಾಗಿ ರೈತರಿಗೆ ವರ್ಗಾಯಿಸಲಾಗುವುದು ಎಂಬ ಕೆಎಂಎಫ್‌ನ ಮಾತನ್ನು ಹೈನುಗಾರರು ಸಂಪೂರ್ಣವಾಗಿ ನಂಬಲು ಸಿದ್ಧರಿಲ್ಲ.

"ಹೆಚ್ಚುವರಿ ತುಪ್ಪ ಮಾರಾಟದಿಂದ ಬರುವ ಲಾಭವನ್ನು ರೈತರಿಗೆ ವರ್ಗಾಯಿಸುವ ಕೆಎಂಎಫ್ ಆಡಳಿತ ಮಂಡಳಿಯ ಭರವಸೆ ನಂಬಲಾಗದು. ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿರುವ ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹಧನವನ್ನು ತಕ್ಷಣವೇ ಮಂಜೂರು ಮಾಡಬೇಕು. ಕೆಎಂಎಫ್ ಆಡಳಿತ ಮಂಡಳಿಯ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು" ಎಂಬುದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಅಂಬೋಣ.

"ಕೆಎಂಎಫ್ ಇಲ್ಲಿಯವರೆಗೆ ನುಡಿದಂತೆ ನಡೆಯಲ್ಲ. ಪದೇ ಪದೇ ರೈತರಿಗೆ ವಂಚಿಸುತ್ತಿದೆ. ಕೆಎಂಎಫ್‌ಗೆ ಬರುವ ಲಾಭ ನೇರವಾಗಿ ರೈತರಿಗೆ ಸೇರಬೇಕು. ನಂದಿನಿ ತುಪ್ಪ ಮಾರಾಟದಿಂದ ಬರುವ ಆದಾಯವನ್ನು ರೈತರಿಗೆ ವರ್ಗಾಯಿಸುತ್ತೇವೆ ಎಂಬುದು ಬರೀ ಬೋಗಸ್. ಸಂಸ್ಥೆಯ ದುಂದುವೆಚ್ಚ ಹಾಗೂ ನಷ್ಟ ಸರಿದೂಗಿಸಿಕೊಳ್ಳಲು ಇರುವ ಮಾರ್ಗವಷ್ಟೇ ಅದು ಎಂದು ಕೋಡಿಹಳ್ಳಿ ಟೀಕಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಹೇಳಿರುವಂತೆ ತಕ್ಷಣವೇ ಹಾಲಿನ ಬೆಲೆ ಏರಿಕೆ ಹಣವನ್ನು ರೈತರಿಗೆ ನೀಡಬೇಕು. ಆನಂತರ ಕೆಎಂಎಫ್‌ನ ಅನಗತ್ಯ ನೇಮಕಾತಿ, ವಿದೇಶ ಪ್ರವಾಸಗಳಿಗೆ ಕಡಿವಾಣ ಹಾಕಬೇಕು. ಇಲ್ಲಿ ಹಾಲು ಉತ್ಪಾದಕನ ಕ್ಷೇಮ ಮುಖ್ಯ. ಅವರಿಂದಲೇ ಕೆಎಂಎಫ್ ಬೆಳೆದಿದೆ, ಉಳಿದಿದೆ ಎಂಬುದನ್ನು ಮರೆಯಬಾರದು ಎಂದೂ ಅವರು ಕಿವಿಮಾತು ಹೇಳಿದರು.

Tags:    

Similar News