Namma Metro| ಜನವರಿ ಅಂತ್ಯಕ್ಕೆ ನಮ್ಮ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ
18.82 ಕಿ. ಮೀ. ಮಾರ್ಗದಲ್ಲಿ 18 ನಿಲ್ದಾಣಗಳಿವೆ. ಮಾರ್ಗದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ರೈಲುಗಳ ಕೊರತೆಯೇ ಸಂಚಾರ ಆರಂಭಿಸಲು ತೊಡಕಾಗಿದೆ ಎಂದು ಹೇಳಲಾಗುತ್ತಿದ್ದು, ಜನವರಿ ಅಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ.;
ಜನವರಿ ಅಂತ್ಯಕ್ಕೆ ಆರ್. ವಿ. ರಸ್ತೆ-ಬೊಮ್ಮಸಂದ್ರವನ್ನು ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ನಮ್ಮ ಮೆಟ್ರೋ ಯೋಜನೆಯ ಬಹು ನಿರೀಕ್ಷಿತ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರವನ್ನು ಸಂಪರ್ಕಿಸುತ್ತದೆ. ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ 2024ರ ಡಿಸೆಂಬರ್‌ಗೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ಮಾರ್ಗದಲ್ಲಿ ಜನವರಿ ಅಂತ್ಯಕ್ಕೆ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಸುಮಾರು 3 ಲಕ್ಷಕ್ಕೂ ಅಧಿಕ ಜನರಿಗೆ ಅನುಕೂಲವಾಗುವ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ ಎಂದು ಅಂದಾಜಿಸಲಾಗಿದೆ. 18.82 ಕಿ. ಮೀ. ಮಾರ್ಗದಲ್ಲಿ 18 ನಿಲ್ದಾಣಗಳಿವೆ. ಮಾರ್ಗದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ರೈಲುಗಳ ಕೊರತೆಯೇ ಸಂಚಾರ ಆರಂಭಿಸಲು ತೊಡಕಾಗಿದೆ ಎಂದು ಹೇಳಲಾಗುತ್ತಿದ್ದು, ಜನವರಿ ಅಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನವರಿ ೧೦ಕ್ಕೆ ಬರಲಿವೆ ರೈಲುಗಳು
ಜನವರಿ 10ರ ವೇಳೆಗೆ ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ ರೈಲಿನ ಮಾದರಿ ಪೀಣ್ಯದ ಡಿಪೋಗೆ ಆಗಮಿಸಲಿದೆ. ಡಿಜಿಟಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಡಿಪೋದಲ್ಲಿ ಈ ರೈಲನ್ನು ಜೋಡಣೆ ಮಾಡಲಾಗುತ್ತದೆ. ಮುಖ್ಯ ಮಾರ್ಗದಕ್ಕೆ ರೈಲು ನಿಯೋಜನೆ ಮಾಡುವ ಮುನ್ನ ಹಲವು ಪರೀಕ್ಷೆಗಳು ನಡೆಯಬೇಕಿದೆ. ಮೊದಲು ರಾತ್ರಿ ವೇಳೆ ಪ್ರಾಯೋಗಿಕ ಸಂಚಾರ ನಡೆಯಲಿದೆ. ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರವನ್ನು ವೀಕ್ಷಣೆ ಮಾಡಿ ಒಪ್ಪಿಗೆ ನೀಡಬೇಕಿದೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ ಬಳಿಕ ರೈಲುಗಳ ಸಂಚಾರ ಆರಂಭವಾಗಲಿದೆ.
ಆಗಸ್ಟ್ 2023ರಲ್ಲಿಯೇ ಬರಬೇಕಿದ್ದ ಈ ಬೋಗಿಗಳು ತಡವಾಗಿದ್ದು, ಈಗ ಜನವರಿಗೆ ಬೆಂಗಳೂರಿಗೆ ಬರಲಿವೆ. ಟಿಆರ್‌ಎಸ್‌ಎಸ್‌ಎಲ್ ಜನವರಿ 15ರಂದು ಹೆಬ್ಬಗೋಡಿ ಡಿಪೋಗೆ ತನ್ನ 2ನೇ ಬ್ಯಾಚ್ ರೈಲುಗಳನ್ನು ನೀಡಲಿದೆ. ಈಗಾಗಲೇ ಈ ಡಿಪೋಗೆ ಚೀನಾದಿಂದ ಮೊದಲ ರೈಲು ಆಗಮಿಸಿದೆ. ಸದ್ಯ ಎರಡು ರೈಲು ಸೇರಿಸಿ ಹಳದಿ ಮಾರ್ಗದಲ್ಲಿ 10 ಅಥವ 13 ನಿಮಿಷಕ್ಕೊಂದು ರೈಲು ಓಡಿಸುವ ಯೋಜನೆಯಲ್ಲಿ ಬಿಎಂಆರ್‌ಸಿಎಲ್ ಇದೆ. ಹಳದಿ ಮಾರ್ಗದಲ್ಲಿ ಸಿಗ್ನಲಿಂಗ್, ಸಿವಿಲ್ ಕಾಮಗಾರಿಗಳು ಮುಕ್ತಾಯವಾಗಿದೆ. ಈ ಮಾರ್ಗದಲ್ಲಿ ರೈಲು ಓಡಿಸಲು ಇರುವ ಪ್ರಮುಖ ತೊಂದರೆ ಸದ್ಯಕ್ಕೆ ರೈಲುಗಳ ಕೊರತೆ. 2025ರ ಆಗಸ್ಟ್ ವೇಳೆಗೆ ಟಿಆರ್‌ಎಸ್‌ಎಸ್‌ಎಲ್ 15 ಆರು ಬೋಗಿಯ ರೈಲುಗಳನ್ನು ನೀಡುವ ನಿರೀಕ್ಷೆ ಇದ್ದು, ಬಳಿಕ ಹಳದಿ ಮಾರ್ಗದಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮಟ್ರೋ ರೈಲುಗಳನ್ನು ಓಡಿಸಲು ಸಹ ಬಿಎಂಆರ್‌ಸಿಎಲ್ ಮುಂದಾಗಿದೆ. ಆದರೆ ಅದಕ್ಕೆ ಇನ್ನೂ ಸಹ ಒಪ್ಪಿಗೆ ಸಿಕ್ಕಿಲ್ಲ. ಮೊದಲು ರೈಲು ಬೋಗಿಗಳು ಬಂದು ಅವುಗಳ ಜೋಡಣೆ ಬಳಿಕ ಮುಂದಿನ ಕಾರ್ಯತಂತ್ರದ ಕುರಿತು ಬಿಎಂಆರ್‌ಸಿಎಲ್ ತೀರ್ಮಾನ ಮಾಡಲಿದೆ.
ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ
ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಇನ್ನಷ್ಟು ವಿಳಂಬವಾಗುತ್ತಿರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ನಿಮಗೆಲ್ಲರಿಗೂ ತಿಳಿದಿರುವಂತೆ, ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆಯ ಪ್ರಾರಂಭವು BMRCL ನೀಡಿದ ಎಲ್ಲಾ ಗಡುವನ್ನು ಪೂರೈಸುವಲ್ಲಿ ವಿಫಲವಾಗಿದೆ. ಇದು ನಮ್ಮೆಲ್ಲರನ್ನು ನಿರಾಶೆಗೊಳಿಸಿದೆ. ರೈಲುಗಳ ಅಲಭ್ಯತೆಯೇ ಕಾರ್ಯಾಚರಣೆ ವಿಳಂಬಕ್ಕೆ ಪ್ರಮುಖ ಕಾರಣ. ಇದೀಗ ಕೆಲವು ಒಳ್ಳೆಯ ಸುದ್ದಿಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ, ಉತ್ಪಾದನೆಯನ್ನು ತ್ವರಿತಗೊಳಿಸಲು ನಾನು ರೈಲು ತಯಾರಕರಾದ ತೀತಗಢ್ ರೈಲ್ ಸಿಸ್ಟಮ್ಸ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಎಂಜಿನಿಯರ್‌ಗಳಿಗೆ ವೀಸಾ ಸೇರಿದಂತೆ ಹಲವು ರಸ್ತೆ ತಡೆಗಳನ್ನು ಪರಿಹರಿಸಲಾಗಿದೆ. ಈಗ ಜನವರಿ 6 ರಂದು ಬೆಂಗಳೂರಿಗೆ ಕಳುಹಿಸಲು ಮೊದಲ ರೈಲು ಸಿದ್ಧವಾಗಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲನ್ನು ಮತ್ತು ಏಪ್ರಿಲ್‌ನಲ್ಲಿ ಮೂರನೇ ರೈಲನ್ನು ತಲುಪಿಸುವುದಾಗಿ ತೀತಗಢ್ ತಿಳಿಸಿದೆ. ಅದಾದ ಬಳಿಕ, ತಿಂಗಳಿಗೆ 1 ರೈಲನ್ನು ಸರಬರಾಜು ಮಾಡುವುದಾಗಿ ಹೇಳಿದೆ. ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ 2 ರೈಲುಗಳಿಗೆ ಇದು ಹೆಚ್ಚಾಗುತ್ತದೆ. ಎಲ್ಲಾ CMRS ಅನುಮೋದನೆಗಳನ್ನು ಪಡೆಯಲು ಸರಿಯಾಗಿ ಕೆಲಸ ಮಾಡಲು ನಾನು BMRCLಗೆ ತಿಳಿಸಿದ್ದೇನೆ.
ಕೇಂದ್ರದ ನಗರಾಭಿವೃದ್ಧಿ ಇಲಾಖೆ ಸಚಿವರಿಗೂ ಜನವರಿ 6 ರಂದು ತೀತಗಢಕ್ಕೆ ತೆರಳಿ ಪರಿಶೀಲಿಸಲು ಮನವಿ ಮಾಡಿಕೊಂಡಿದ್ದೇನೆ. ಇನ್ಮುಂದೆ ಯಾವುದೇ ರೀತಿಯ ಅಡ್ಡಿಗಳು ಬರದಂತೆ ನೋಡಿಕೊಳ್ಳುತ್ತೇವೆ. ಶೀಘ್ರದಲ್ಲೇ ಹಳದಿ ಮೆಟ್ರೋ ಮಾರ್ಗ ಕಾರ್ಯಾಚರಣೆ ಆಗಲಿದೆ ಎಂದು ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.