Namma Metro | ಹಳದಿ ಮಾರ್ಗದಲ್ಲಿ ಜೂನ್ ಅಂತ್ಯಕ್ಕೆ ಸಂಚಾರ ಆರಂಭ?
ನಮ್ಮ ಮೆಟ್ರೊ ಹಳದಿ ಮಾರ್ಗದ ಕಾರ್ಯಾಚರಣೆಗೆ ಅಗತ್ಯವಿರುವ ಮೂರನೇ ರೈಲು ಸೆಟ್ ಬೋಗಿಗಳು ಪಶ್ಚಿಮ ಬಂಗಾಳದ ಟಿಟಾಗರ್ ಸಂಸ್ಥೆಯಿಂದ ಮೇ 2ರಂದು ಹೊರಟಿದ್ದು, ಮೇ 15ರ ವೇಳೆಗೆ ಬೆಂಗಳೂರು ಸೇರಲಿವೆ.;
ಬಹುನಿರೀಕ್ಷಿತ ಆರ್.ವಿ.ರಸ್ತೆ- ಬೊಮ್ಮಸಂದ್ರ ನಡುವಿನ ಮೆಟ್ರೋ ಹಳದಿ ಮಾರ್ಗದಲ್ಲಿ ಜೂನ್ ಅಂತ್ಯದೊಳಗೆ ಸಂಚಾರ ಆರಂಭವಾಗಲಿದೆ.
ನಮ್ಮ ಮೆಟ್ರೊ ಹಳದಿ ಮಾರ್ಗದ ಕಾರ್ಯಾಚರಣೆಗೆ ಅಗತ್ಯವಿರುವ ಮೂರನೇ ರೈಲು ಸೆಟ್ ಬೋಗಿಗಳು ಪಶ್ಚಿಮ ಬಂಗಾಳದ ಟಿಟಾಗರ್ ಸಂಸ್ಥೆಯಿಂದ ಮೇ 2ರಂದು ಹೊರಟಿದ್ದು, ಮೇ 15ರ ವೇಳೆಗೆ ಬೆಂಗಳೂರು ಸೇರಲಿವೆ.
ಕೆಲ ದಿನಗಳಲ್ಲೇ ಎಲ್ಲಾ ಆರು ಬೋಗಿಗಳನ್ನು ರೈಲು ಸೆಟ್‌ನಲ್ಲಿ ಜೋಡಿಸುವ ನಿರೀಕ್ಷೆಯಿದೆ. ನಂತರ ರೈಲುಗಳ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ನಿಲ್ದಾಣದಲ್ಲಿ 20 ರಿಂದ 25 ನಿಮಿಷಗಳ ಆವರ್ತನದಲ್ಲಿ ಐದು ನಿಲ್ದಾಣಗಳಲ್ಲಿ ಮಾತ್ರ ಮೆಟ್ರೋ ಸಂಚಾರ ನಡೆಯಲಿದೆ. ಕೇವಲ ಮೂರು ರೈಲುಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸುವ ಬಗ್ಗೆ ಪರಾಮರ್ಶಿಸಲಾಗುತ್ತಿದೆ. ಆರಂಭದಲ್ಲಿ ಜನದಟ್ಟಣೆ ಕಂಡು ಬಂದರೂ ನಮಗೆ ಬೇರೆ ಆಯ್ಕೆಯಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಆರ್.ವಿ.ರಸ್ತೆ ಹಾಗೂ ಬೊಮ್ಮಸಂದ್ರ ಮಾರ್ಗದಲ್ಲಿ ಒಟ್ಟು 15 ರೈಲು ಸೆಟ್‌ಗಳು ಅಗತ್ಯವಾಗಿವೆ. ಸದ್ಯ ಮೂರು ರೈಲು ಸೆಟ್‌ಗಳಿದ್ದು, ಅವುಗಳ ಮೂಲಕವೇ ವಾಣಿಜ್ಯ ಸಂಚಾರ ಆರಂಭಿಸಲು ತೀರ್ಮಾನಿಸಿದ್ದು, ಜೂನ್ ಅಂತ್ಯದೊಳಗೆ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ. ಈಗಾಗಲೇ ಹಳದಿ ಮಾರ್ಗದ ಸಿವಿಲ್ ಕಾಮಗಾರಿಗಳು ಮುಗಿದು ಒಂದು ವರ್ಷವಾಗಿದೆ. ಆದರೆ, ರೈಲುಗಳ ಕೊರತೆಯಿಂದಾಗಿ ಈ ಮಾರ್ಗದ 19.15 ಕಿ.ಮೀ. ಕಾರ್ಯಾಚರಣೆ ವಿಳಂಬವಾಗಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಎಂಆರ್‌ಸಿಎಲ್, 2025ರ ಜನವರಿ ತಿಂಗಳಲ್ಲಿ ವಾಣಿಜ್ಯ ಸಂಚಾರ ಆರಂಭಿಸುವುದಾಗಿ ತಿಳಿಸಿತ್ತು. ಡಿಸೆಂಬರ್ ತಿಂಗಳಲ್ಲಿ ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆ ನಡೆಯಬೇಕಿತ್ತು. ಆದರೆ, ಟಿಟಾಗರ್ ಸಂಸ್ಥೆ ಡಿಸೆಂಬರ್ ವೇಳೆಗೆ ಮೂರು ಸೆಟ್ ರೈಲುಗಳನ್ನು ಬಿಎಂಆರ್‌ಸಿಎಲ್‌ಗೆ ನೀಡಬೇಕಿತ್ತು.
2025ರ ಮಾರ್ಚ್ ತಿಂಗಳಿಂದ ಪ್ರತಿ ತಿಂಗಳು ಎರಡು ಸೆಟ್ ರೈಲುಗಳಂತೆ ಆಗಸ್ಟ್ ವೇಳೆಗೆ ಎಲ್ಲಾ 15 ರೈಲು ಸೆಟ್‌ಗಳನ್ನು ಪೂರೈಸಬೇಕಿತ್ತು. ಆದರೆ, ಈ ವರ್ಷದ ಅಂತ್ಯದವರೆಗೆ 15 ರೈಲು ಸೆಟ್ ಬರುವ ನಿರೀಕ್ಷೆ ಇದೆ. ಹಾಗಾಗಿ ಪೂಣ ಪ್ರಮಾಣದ ಕಾರ್ಯಾಚರಣೆ ಕಷ್ಟಸಾಧ್ಯವಾಗಿದೆ.
ಹಸಿರು, ಗುಲಾಬಿ ಮಾರ್ಗದ ಸಂಪರ್ಕ
ಆರ್.ವಿ ರಸ್ತೆ ನಿಲ್ದಾಣವು ಹಸಿರು ಮಾರ್ಗ ಹಾಗೂ ಜಯದೇವ ಆಸ್ಪತ್ರೆ ನಿಲ್ದಾಣ ಗುಲಾಬಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಿದೆ. ಜಯದೇವ ಆಸ್ಪತ್ರೆ ನಿಲ್ದಾಣ ಬಹುತೇಕ ಕಾಮಗಾರಿ ಪೂರ್ಣವಾಗಿದೆ. ಈ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ 3.13 ಕಿ.ಮೀ ಮೆಟ್ರೊ ಮಾರ್ಗ ಮತ್ತು ರಸ್ತೆ ಮೇಲ್ಸೇತುವೆ ಹೊಂದಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವಾಹನಗಳ ದಟ್ಟಣೆ ಕಡಿಮೆ ಮಾಡಲು ರಸ್ತೆ ಮೇಲ್ಸೇತುವೆ ನಿರ್ಮಿಸಿದ್ದು, ಇದು 5 ಲೂಪ್‌ಗಳು ಮತ್ತು ಇಳಿಜಾರುಗಳನ್ನು ಒಳಗೊಂಡಿದೆ.