Namma Metro Fare Hike | ಹುತ್ತವ ಬಡಿಯುವ ವಾಕ್ಸಮರ ಅಬ್ಬರ: ಸಮಸ್ಯೆಯ ಮೂಲಕ್ಕೆ ಕೈಹಾಕದ ಮೇಲಾಟ!

ನಮ್ಮ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಮುಖಂಡರು ಈ ಕಾಯ್ದೆಯ ಲೋಪಗಳ ಕುರಿತು ದನಿ ಎತ್ತುವ ಮೂಲಕ ಸಮಸ್ಯೆಯ ಮೂಲಕ್ಕೆ ಮದ್ದು ಅರೆಯುವುದನ್ನು ಬಿಟ್ಟು ಹುತ್ತವ ಬಡಿವ ಬಡಿವಾರದ ಮೂಲಕ ಜನರನ್ನೇ ದಿಕ್ಕುತಪ್ಪಿಸುವ ಮೇಲಾಟದಲ್ಲಿ ಮುಳುಗಿದ್ದಾರೆ!;

Update: 2025-02-12 11:46 GMT
bengaluru namma metro

ಬೆಂಗಳೂರಿನ ಬಿಡುವಿಲ್ಲದ ಧಾವಂತದ ಬದುಕಿನ ಜೀವನಾಡಿಯಾಗಿರುವ ʼನಮ್ಮ ಮೆಟ್ರೋʼದ ಪ್ರಯಾಣ ದರವನ್ನು ಏಕಾಏಕಿ ಶೇ.50 ರಿಂದ ಶೇ.100ರಷ್ಟು ಹೆಚ್ಚಳ ಮಾಡಿರುವ ಸರ್ಕಾರಗಳ ಕ್ರಮ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಯಾಣಿಕರು, ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ದರ ಏರಿಕೆಯ ವಿರುದ್ಧ ಬೇರೆ ಬೇರೆ ರೀತಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿವೆ. ದರ ಇಳಿಸಿ, ದರ ಏರಿಕೆ ಕೈಬಿಡಿ ಎಂಬ ಘೋಷಣೆಗಳನ್ನು ಒಳಗೊಂಡ ಪ್ಲೆಕಾರ್ಡ್, ಪೋಸ್ಟರ್ ಹಿಡಿದು ಪ್ರಯಾಣಿಕರು ವ್ಯಕ್ತಿಗತ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರೆ, ವಿವಿಧ ರಾಜಕೀಯ ಮತ್ತು ನಾಗರಿಕ ಸಂಘಟನೆಗಳು ಮೆಟ್ರೋ ನಿಲ್ದಾಣಗಳು ಮತ್ತು ಕಚೇರಿಗಳ ಎದುರು ಘೋಷಣೆ ಕೂಗಿ, ಭಿತ್ತಿಪತ್ರ ಪ್ರದರ್ಶಿಸಿ ಪ್ರತಿರೋಧ ತೋರುತ್ತಿವೆ.

ಈ ನಡುವೆ, ಉಳಿದೆಲ್ಲಾ ವಿಷಯಗಳಂತೆಯೇ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುವ ಈ ಮೆಟ್ರೋ ದರ ಏರಿಕೆಯ ವಿಷಯದಲ್ಲೂ ರಾಜ್ಯದ ಆಡಳಿತರೂಢ ಮತ್ತು ಪ್ರತಿಪಕ್ಷಗಳು ಕ್ಷುಲ್ಲಕ ರಾಜಕೀಯ ಮೇಲಾಟದಲ್ಲಿ ತೊಡಗಿವೆ.

ಆಡಳಿತ- ಪ್ರತಿಪಕ್ಷ ರಾಜಕೀಯ ಮೇಲಾಟ

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಅಧಿಕೃತ ಹೇಳಿಕೆಯಲ್ಲಿ ʼಮೆಟ್ರೋ ದರ ಏರಿಕೆಗೆ ತಮ್ಮ ರಾಜ್ಯ ಸರ್ಕಾರ ಕಾರಣವಲ್ಲ; ರಾಜ್ಯ ಸರ್ಕಾರದ ಪಾತ್ರ ಅದರಲ್ಲಿಏನೂ ಇಲ್ಲ. ಕೇಂದ್ರ ಸರ್ಕಾರ ನೇಮಕ ಮಾಡಿದ ದರ ನಿಗದಿ ಸಮಿತಿಯ ವರದಿಯಂತೆ ಬಿಎಂಆರ್ಸಿಎಲ್ ದರ ಹೆಚ್ಚಳ ಮಾಡಿದೆ. ಬಿಎಂಆರ್ಸಿಎಲ್ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು ಮತ್ತು ದರ ನಿಗದಿ ಸಮಿತಿಯನ್ನು ಕೂಡ ಕೇಂದ್ರ ಸರ್ಕಾರವೇ ನೇಮಕ ಮಾಡುತ್ತದೆ. ಹಾಗಾಗಿ ರಾಜ್ಯ ಸರ್ಕಾರದ ಪಾತ್ರ ಇದರಲ್ಲಿ ಎಳಷ್ಟೂ ಇಲ್ಲʼ ಎಂಬರ್ಥದ ಹೇಳಿಕೆ ನೀಡುವ ಮೂಲಕ ದರ ಹೆಚ್ಚಳದ ಸಂಪೂರ್ಣ ಹೊಣೆಗಾರಿಕೆಯನ್ನು ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಹೆಗಲಿಗೆ ಹಾಕಿದ್ದಾರೆ.

ನಿರೀಕ್ಷೆಯಂತೆ ಬಿಜೆಪಿ ವಲಯದಿಂದ ಸಿಎಂ ಅವರ ಹೇಳಿಕೆಗೆ ತಿರುಗೇಟು ಬಿದ್ದಿದೆ. ಸಂಸದ ತೇಜಸ್ವಿ ಸೂರ್ಯ ಅವರು, ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರದ ಸಲಹೆ ಮೇರೆಗೇ ಬಿಎಂಆರ್ಸಿಎಲ್ ದರ ಪರಿಷ್ಕರಣೆ ಮಾಡಿದೆ. ದರ ಪರಿಷ್ಕರಣೆಗೆ ಕೋರಿ ದರ ನಿಗದಿ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಬಿಎಂಆರ್ಸಿಎಲ್ ಕೋರಿದ್ದು ರಾಜ್ಯ ಸರ್ಕಾರದ ತಾಕೀತಿನ ಮೇಲೆಯೇ ಎಂದು ಹೇಳಿದ್ದಾರೆ.

ದರ ಹೆಚ್ಚಳದ ಕಾರಣ ಕೇಳದ ನಾಯಕರು!

ದರ ಏರಿಕೆಯಾಗಿ ನಿತ್ಯದ ಮೆಟ್ರೋ ಪ್ರಯಾಣಿಕರು ದುಪ್ಪಟ್ಟು ವೆಚ್ಚ ಭರಿಸುತ್ತಾ ಸರ್ಕಾರಗಳಿಗೆ ಹಿಡಿ ಶಾಪ ಹಾಕುತ್ತಿದ್ದರೆ, ಮನಸೋ ಇಚ್ಛೆ ದರ ಹೆಚ್ಚಳದ ಹಿಂದಿನ ಅವೈಜ್ಞಾನಿಕತೆ, ಭಾಗಿದಾರರಾದ ಪ್ರಯಾಣಿಕರ ಅಭಿಪ್ರಾಯಕ್ಕೆ ಅವಕಾಶವೇ ಇಲ್ಲದಂತೆ ದರ ಹೆಚ್ಚಳ ಮಾಡಿರುವ ಬಿಎಂಆರ್ಸಿಎಲ್ನ ಸರ್ವಾಧಿಕಾರಿ ಧೋರಣೆ, ಯಾವ ಮಧ್ಯವರ್ತಿ ನಿರ್ವಹಣಾ ವ್ಯವಸ್ಥೆಯೇ ಇಲ್ಲದೆ ಕೇವಲ ಮೂರು ಮಂದಿಯನ್ನು ಒಳಗೊಂಡ ದರ ನಿಗದಿ ಸಮಿತಿಗೆ ದರ ನಿಗದಿಯ ಸೂಪರ್ ಪವರ್ ನೀಡಿರುವ 2002ರ ಮೆಟ್ರೋ ಕಾಯ್ದೆಯ ಪ್ರಜಾತಾಂತ್ರಿಕ ವಿರೋಧಿ ಕಲಂಗಳು, ಇದ್ಯಾವುದರ ಬಗ್ಗೆಯೂ ಜನರನ್ನು ಪ್ರತಿನಿಧಿಸುವ ರಾಜಕಾರಣಿಗಳು ಪ್ರಶ್ನೆ ಎತ್ತುತ್ತಲೇ ಇಲ್ಲ ಎಂಬ ಆಕ್ರೋಶ ಕೂಡ ಸಾರ್ವಜನಿಕ ವಲಯದಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯ ಸೆಕ್ಷನ್ 37ರ ಪ್ರಕಾರ ದರ ನಿಗದಿ ಸಮಿತಿ ದರ ಪರಿಷ್ಕರಣೆ ಮಾಡಿದೆ ಎಂದಿದ್ದಾರೆ. ಹಾಗಾದರೆ, ವಾಸ್ತವವಾಗಿ ಮೆಟ್ರೋ ರೈಲ್ವೆ ಕಾಯ್ದೆಯಲ್ಲಿ ಏನು ಹೇಳಲಾಗಿದೆ ಎಂದು ಪರಿಶೀಲಿಸಿದರೆ, ಕಾಯ್ದೆ ಕೇವಲ ದರ ಪರಿಷ್ಕರಣೆಗೆ ಸಮಿತಿ ರಚಿಸುವುದು ಹೇಗೆ, ಯಾರೆಲ್ಲಾ ಸಮಿತಿಯಲ್ಲಿ ಇರಬೇಕು ಎಂಬುದನ್ನು ಮಾತ್ರ ಹೇಳಿದೆ ವಿನಃ, ಅದರಲ್ಲಿ ದರ ನಿಗದಿಯ ಮಾನದಂಡವೇನು? ದರ ನಿಗದಿಯ ಪ್ರಕ್ರಿಯೆಗಳೇನು? ಎಂಬ ಬಗ್ಗೆ ಹೆಚ್ಚಿನ ವಿವರಗಳೇ ಇಲ್ಲ.

ಅಲ್ಲದೆ; ದರ ನಿಗದಿ ಸಮಿತಿಯು ದರ ಪರಿಷ್ಕರಣೆಗೆ ಶಿಫಾರಸು ಮಾಡಿ ವರದಿಯನ್ನು ಮೆಟ್ರೋ ನಿರ್ಹವಣಾ ಸಂಸ್ಥೆ(ಇಲ್ಲಿ ಬಿಎಂಆರ್ಸಿಎಲ್)ಗೆ ಮೂರು ತಿಂಗಳ ಕಾಲಮಿತಿಯಲ್ಲಿ ಸಲ್ಲಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಉಳಿದಂತೆ ದರ ನಿಗದಿ, ದರ ನಿಗದಿಯಲ್ಲಿ ಪರಿಗಣಿಸಬೇಕಾದ ಅಂಶಗಳು, ಮಾನದಂಡಗಳು, ಅಭಿಪ್ರಾಯಗಳ ಕುರಿತು ಕಾಯ್ದೆಯಲ್ಲಿ ಯಾವುದೇ ವಿವರಗಳಿಲ್ಲ.


ಮೆಟ್ರೋ ಕಾಯ್ದೆ-2002 ರ ದರ ನಿಗದಿ ಕುರಿತ ನಿಬಂಧನೆಗಳು

ದರ ಪರಿಷ್ಕರಣೆಗೆ ವೈಜ್ಞಾನಿಕ ಮಾದರಿ ಏನು?

ಆದರೆ, ಸಾರ್ವಜನಿಕ ವಲಯದಲ್ಲಿ ಸಾರ್ವಜನಿಕ ಮೂಲಸೌಕರ್ಯ ಸೇವೆಯ ಭಾಗವಾಗಿ ಕಾರ್ಯನಿರ್ವಹಿಸುವ ಸಾರ್ವಜನಿಕ ಸಹಭಾಗಿತ್ವದ ಸಂಸ್ಥೆಗಳಲ್ಲಿ ದರ ನಿಗದಿ ಮತ್ತು ಪರಿಷ್ಕರಣೆಗೆ ಕರ್ನಾಟಕದ ಮಟ್ಟಿಗಂತೂ ಒಂದು ಮಾದರಿ ಇದೆ. ಇರುವುದರಲ್ಲೇ ಪ್ರಜಾಸತ್ತಾತ್ಮಕ ಎನ್ನಬಹುದಾದ ಅಂತಹ ಅತ್ಯುತ್ತಮ ಮಾದರಿ ಎಂದರೆ ಅದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ(ಕೆಇಆರ್ಸಿ). ರಾಜ್ಯದ ಬೆಸ್ಕಾಂ, ಮೆಸ್ಕಾ, ಚೆಸ್ಕಾಂ ಸೇರಿದಂತೆ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ಕಾಲಕಾಲಕ್ಕೆ ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್ಸಿಗೆ ಹೆಚ್ಚಳದ ಅನಿವಾರ್ಯತೆ, ಕಾರಣ, ಮಾನದಂಡ ಮುಂತಾದ ಎಲ್ಲ ವಿವರಗಳನ್ನು ಒಳಗೊಂಡ ವೈಜ್ಞಾನಿಕ ಪ್ರಸ್ತಾವನೆ ಸಲ್ಲಿಸುತ್ತವೆ. ಬಳಿಕ ಕೆಇಆರ್ಸಿ ಆ ಪ್ರಸ್ತಾವನೆಯನ್ನು ಪತ್ರಿಕಾಮಾಧ್ಯಮದಲ್ಲಿ ಪ್ರಕಟಿಸುವ ಮೂಲಕ ಬಳಕೆದಾರರಾದ ಸಾರ್ವಜನಿಕರ ಗಮನಕ್ಕೆ ತಂದು, ಆಕ್ಷೇಪ, ಸಲಹೆಗಳನ್ನು ಆಹ್ವಾನಿಸುತ್ತದೆ. ಭಾಗಿದಾರರಾದ ಬಳಕೆದಾರರು ಮತ್ತು ಅವರನ್ನು ಪ್ರತಿನಿಧಿಸುವ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಸಲಹೆ, ಆಕ್ಷೇಪಗಳನ್ನೂ ಪರಿಗಣಿಸಿ ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ ಸಮಾಲೋಚನೆ ನಡೆಸಿ, ಎರಡೂ ಕಡೆಯವರಿಗೆ ಒಪ್ಪಿತವಾಗುವಂತಹ ಒಂದು ದರವನ್ನು ಅಂತಿಮಗೊಳಿಸಿ ಮತ್ತೆ ಸಾರ್ವಜನಿಕ ಪ್ರಕಟಣೆ ಹೊರಡಿಸುತ್ತದೆ.

ಇದು ಯಾವುದೇ ಸಾರ್ವಜನಿಕ ವಲಯದ ಸಂಸ್ಥೆಗಳು ತಮ್ಮ ಬಳಕೆದಾರರಾದ ಸಾರ್ವಜನಿಕರೊಂದಿಗೆ ವ್ಯವಹರಿಸುವ ಪ್ರಜಾಸತ್ತಾತ್ಮಕ ಮಾದರಿ.

ಕೇವಲ ವಿದ್ಯುತ್ ದರ ಮಾತ್ರವಲ್ಲದೆ, ಸಾರ್ವಜನಿಕ ಅಗತ್ಯ ವಸ್ತುವಾದ ಹಾಲು(ಸಾರ್ವಜನಿಕ ವಲಯದ ಕೆಎಂಎಫ್), ಬಸ್ ಪ್ರಯಾಣದ ದರ(ಕೆಎಸ್ಆರ್ಟಿಸಿ)ಗಳ ವಿಷಯದಲ್ಲಿ ಕೂಡ ರಾಜ್ಯದಲ್ಲಿ ಒಂದು ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಹುತ್ತವ ಬಡಿಯುವ ಬಡಿವಾರ!

ಆದರೆ, ಬಿಎಂಆರ್ಸಿಎಲ್ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯಲ್ಲಿ ದರ ನಿಗದಿ ಅಥವಾ ಪರಿಷ್ಕರಣೆಗೆ ಸಂಬಂಧಿಸಿದ ಕಾನೂನು ಅಂಶಗಳಲ್ಲಿ ಅಂತಹ ಯಾವುದೇ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಉಲ್ಲೇಖವೇ ಇಲ್ಲ!

ಅಂದರೆ, ಏಕಾಏಕಿ ಎರಡು, ಮೂರು ಪಟ್ಟು ದರ ಏರಿಕೆ ಮಾಡಿ ಪ್ರಯಾಣಿಕರ ಸುಲಿಗೆಗೆ ಇಳಿದಿರುವ ಬಿಎಂಆರ್‌ಸಿಎಲ್‌ನ ಸರ್ವಾಧಿಕಾರಿ ನಿರಂಕುಶ ನಿರ್ಧಾರಗಳಿಗೆ ಕುಮ್ಮಕ್ಕು ಸಿಕ್ಕಿರುವುದು ಅಪ್ರಜಾಸತ್ತಾತ್ಮಕವಾಗಿರುವ ಜನವಿರೋಧಿ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯಲ್ಲಿ. ಆದರೆ, ನಮ್ಮ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಮುಖಂಡರು ಈ ಕಾಯ್ದೆಯ ಲೋಪಗಳ ಕುರಿತು ದನಿ ಎತ್ತುವ ಮೂಲಕ ಸಮಸ್ಯೆಯ ಮೂಲಕ್ಕೆ ಮದ್ದು ಅರೆಯುವುದನ್ನು ಬಿಟ್ಟು ಹುತ್ತವ ಬಡಿವ ಬಡಿವಾರದ ಮೂಲಕ ಜನರನ್ನೇ ದಿಕ್ಕುತಪ್ಪಿಸುವ ಮೇಲಾಟದಲ್ಲಿ ಮುಳುಗಿದ್ದಾರೆ.

ಆದರೆ, ನಿಜವಾಗಿಯೂ ಆಗಬೇಕಿರುವುದು ದರ ನಿಗದಿ ಸಮಿತಿಗೆ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯ ನಿಬಂಧನೆಗಳನ್ನು ಹಾಕುವ ಮೂಲಕ ಮೆಟ್ರೋವನ್ನು ಜನಸ್ನೇಹಿಯಾಗಿಸುವುದು. 

ಅದಕ್ಕಾಗಿ ದರ ನಿಗದಿ ಸಮಿತಿಯು ಮೆಟ್ರೋ ದರ ನಿಗದಿಗೆ ಮುನ್ನ ಮೆಟ್ರೋ ಬಳಕೆದಾರರಾದ ಪ್ರಯಾಣಿಕರೊಂದಿಗೆ ಕಡ್ಡಾಯವಾಗಿ ಸಮಾಲೋಚನೆ ಮಾಡಬೇಕು. ಸಮಾಲೋಚನೆಯ ವಿವರಗಳನ್ನೂ ಒಳಗೊಂಡಂತೆ ಬಿಎಂಆರ್‌ಸಿಎಲ್‌ಗೆ ತಾನು ಶಿಫಾರಸು ಮಾಡಿರುವ ದರದ ಕುರಿತ ಸಂಪೂರ್ಣ ಹಂತವಾರು ಮಾಹಿತಿಯನ್ನು ಸಾರ್ವಜನಿಕ ಪ್ರಕಟಣೆ ಮೂಲಕ ಬಹಿರಂಗಪಡಿಸಬೇಕು. ಆ ಮೂಲಕ ಸಾರ್ವಜನಿಕ ಆಕ್ಷೇಪ ಮತ್ತು ಸಲಹೆಗಳಿಗೆ ಆವಕಾಶ ನೀಡಬೇಕು. ಆ ನಂತರವಷ್ಟೇ ಅಂತಿಮ ದರ ನಿಗದಿ ಮಾಡಿ, ಅದನ್ನೂ ಕನಿಷ್ಟ ದರ ಜಾರಿಗೆ ಒಂದು ತಿಂಗಳ ಮುನ್ನ ಸಾರ್ವಜನಿಕ ಪ್ರಕಟಣೆಯ ಮೂಲಕ ಚರ್ಚೆಗೆ ಒಳಪಡಿಸಬೇಕು. ಇದು ಪ್ರಜಾಸತ್ತಾತ್ಮಕ ಮಾದರಿ.

ಆದರೆ, ಈಗ ಬಿಎಂಆರ್‌ಸಿಎಲ್‌ ಮಾಡಿರುವ ದರ ಹೆಚ್ಚಳದಲ್ಲಿ ಈ ಯಾವ ಪ್ರಕ್ರಿಯೆಯನ್ನೂ ಪಾಲಿಸಿಲ್ಲ. ಏಕೆಂದರೆ, ಮೂಲ ಮೆಟ್ರೋ ಕಾಯ್ದೆಯಲ್ಲೇ ಅಂತಹ ನಿಬಂಧನೆಗಳನ್ನು ಹಾಕಿಲ್ಲ! ಹಾಗಾಗಿ ಪ್ರಯಾಣಿಕರು ಈಗ ಅವೈಜ್ಞಾನಿಕ ದರ ಹೆಚ್ಚಳ ಮತ್ತು ಸರ್ವಾಧಿಕಾರಿ ಧೋರಣೆಯ ಏಕಪಕ್ಷೀಯ ದರ ನಿಗದಿಯ ಬಿಎಂಆರ್‌ಸಿಎಲ್‌ ವರಸೆಯನ್ನು ಪ್ರಶ್ನಿಸುವ ಜೊತೆಗೇ ಬಿಎಂಆರ್‌ಸಿಎಲ್‌ಗೆ ಅಂತಹ ಕಡಿವಾಣರಹಿತ ಅಧಿಕಾರವನ್ನು ನೀಡಿರುವ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆಯ ತಿದ್ದುಪಡಿಗೂ ಆಗ್ರಹಿಸಬೇಕಿದೆ. ಆ ಮೂಲಕ ಸಾರ್ವಜನಿಕರ ತೆರಿಗೆ ಹಣದಲ್ಲಿ ಮತ್ತು ಅವರ ಟಿಕೆಟ್‌ ಹಣದಲ್ಲಿ ನಡೆಯುವ ಬಿಎಂಆರ್‌ಸಿಎಲ್‌ ನಂತಹ ಮೆಟ್ರೋ ವ್ಯವಸ್ಥೆ ಜನರಿಗೆ ಉತ್ತರದಾಯಿಯಾಗಿರುವಂತೆ ರೂಪಿಸಬೇಕಿದೆ.

Tags:    

Similar News