ಮೈಸೂರು: ರೈತನ ಕಣ್ಣೆದುರೇ ಹಸುವಿನ ಮೇಲೆ ಹುಲಿ ದಾಳಿ, ಕೂದಲೆಳೆ ಅಂತರದಲ್ಲಿ ಪಾರಾದ ಮಾಲೀಕ
ಸರಗೂರು, ನಂಜನಗೂಡು ಮತ್ತು ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದೆ. ನಂಜನಗೂಡಿನ ಯಾಲೆಹಳ್ಳಿ ಗ್ರಾಮದ ಬಳಿಯೂ ಹಾಡಹಗಲೇ ಜಮೀನಿನಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದಿದೆ.
ಹಸುವನ್ನು ಕೊಂದ ಹುಲಿ
ಜಿಲ್ಲೆಯ ಸರಗೂರು ತಾಲೂಕಿನಲ್ಲಿ ಮತ್ತೆ ಹುಲಿ ದಾಳಿ ನಡೆದಿದ್ದು, ರೈತನೊಬ್ಬರ ಕಣ್ಣ ಮುಂದೆಯೇ ಅವರ ಹಸುವನ್ನು ಹೊತ್ತೊಯ್ದಿದೆ. ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ಹುಲಿ ದಾಳಿಗೆ ರೈತ ರಾಜಶೇಖರ್ ಬಲಿಯಾಗಿದ್ದ ಬೆಣ್ಣೆಗೆರೆ ಗ್ರಾಮದ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಸೋಮವಾರ, ಬೆಣ್ಣೆಗೆರೆ ಗ್ರಾಮದ ರೈತ ಜಯಪ್ಪ ಅವರು ತಮ್ಮ ಜಮೀನಿನಲ್ಲಿ ಹಸುವನ್ನು ಮೇಯಿಸುತ್ತಿದ್ದಾಗ, ಏಕಾಏಕಿ ಹುಲಿ ದಾಳಿ ಮಾಡಿದೆ. ಕ್ಷಣಮಾತ್ರದಲ್ಲಿ ಹಸುವನ್ನು ಕೊಂದ ಹುಲಿ, ಅದನ್ನು ಎಳೆದುಕೊಂಡು ಹೋಗಿದೆ. ಘಟನೆಯಿಂದ ಆಘಾತಕ್ಕೊಳಗಾದ ಜಯಪ್ಪ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಹೆಚ್.ಡಿ. ಕೋಟೆ ಮತ್ತು ಸರಗೂರು ತಾಲೂಕುಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಗೆ ಮೂವರು ಬಲಿಯಾಗಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಗಳ ಆತಂಕ ಮಾಸುವ ಮುನ್ನವೇ ಮತ್ತೊಂದು ದಾಳಿ ನಡೆದಿರುವುದು ಜನರ ನಿದ್ದೆಗೆಡಿಸಿದೆ.
ಹೆಚ್ಚಿದ ಹುಲಿ ಉಪಟಳ, ಅರಣ್ಯ ಇಲಾಖೆ ಕಟ್ಟೆಚ್ಚರ
ಸರಗೂರು, ನಂಜನಗೂಡು ಮತ್ತು ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದೆ. ನಂಜನಗೂಡಿನ ಯಾಲೆಹಳ್ಳಿ ಗ್ರಾಮದ ಬಳಿಯೂ ಹಾಡಹಗಲೇ ಜಮೀನಿನಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಧ್ವನಿವರ್ಧಕಗಳ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತಿದ್ದು, ರಾತ್ರಿ ವೇಳೆ ಒಂಟಿಯಾಗಿ ಓಡಾಡದಂತೆ ಸೂಚಿಸಲಾಗಿದೆ. ಜನರು ಗುಂಪುಗಳಲ್ಲಿ ಸಂಚರಿಸಲು ಮತ್ತು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.