Mysore MUDA Scam | ನಮ್ಮ ಕಡೆಯಿಂದಲೂ ತಪ್ಪಾಗಿದೆ: ಸಿಎಂ ಸಿದ್ದರಾಮಯ್ಯ

ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣದ ವಿಷಯದಲ್ಲಿ ಇದೇ ಮೊದಲ ಬಾರಿಗೆ ತಪ್ಪಾಗಿದೆ ಎಂದು ಒಪ್ಪಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ನಮ್ಮ ಕಾಲದಲ್ಲೂ ತಪ್ಪುಗಳು ಆಗಿವೆ. ಆದರೆ, ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪುಗಳಾಗಿವೆ” ಎಂದು ಹೇಳಿದ್ದಾರೆ.;

Update: 2024-07-11 08:57 GMT

cm siddaramaiah

ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣದ ವಿಷಯದಲ್ಲಿ ಇದೇ ಮೊದಲ ಬಾರಿಗೆ ತಪ್ಪಾಗಿದೆ ಎಂದು ಒಪ್ಪಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ನಮ್ಮ ಕಾಲದಲ್ಲೂ ತಪ್ಪುಗಳು ಆಗಿವೆ. ಆದರೆ, ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪುಗಳಾಗಿವೆ” ಎಂದು ಹೇಳಿದ್ದಾರೆ.

ಗುರುವಾರ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಮುಡಾ ಮೊದಲಿನಿಂದಲೂ ಗಬ್ಬೆದ್ದುಹೋಗಿದೆ. ಅದನ್ನು ಸ್ವಚ್ಚಗೊಳಿಸುವ ಕೆಲಸ ಮಾಡುತ್ತೇನೆ. ಆದರೆ, ಮುಡಾ ಸರಿಪಡಿಸುವುದನ್ನು ಬಿಟ್ಟು ನನ್ನ ಪತ್ನಿಯ ಬದಲಿ ನಿವೇಶನ ವಿಷಯದಲ್ಲಿ ಬಿಜೆಪಿ ರಾಜಕೀಯ ಮುಂದುವರಿಸಿದರೆ ನಾವೂ ರಾಜಕೀಯವಾಗಿಯೇ ಮುಂದುವರಿಯುತ್ತೇವೆ. ಅವರಿಗೆ ಹೇಗೆ ಎದುರೇಟು ಕೊಡಬೇಕು ಎಂಬುದು ಗೊತ್ತಿದೆ” ಎಂದು ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

“ನಾವೂ ಕಾನೂನು ರೀತಿಯಲ್ಲೇ ನಿವೇಶನ ಪಡೆದಿದ್ದೇವೆ. ಕಾನೂನುಬಾಹಿರವಾಗಿದ್ದರೆ ಅದನ್ನು ಬಿಜೆಪಿ ತೋರಿಸಿಕೊಡಲಿ” ಎಂದು ಸವಾಲು ಹಾಕಿದ ಸಿಎಂ, “ಹಗರಣದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆ ಸಮಿತಿ ವರದಿ ನೀಡಲಿ, ಆ ಬಳಿಕ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ 50-50 ಅನುಪಾತದ ನಿವೇಶನ ಹಂಚಿಕೆ ವಿಷಯದಲ್ಲಿ ಆಯುಕ್ತರೂ ಸೇರಿದಂತೆ ಯಾರೊಬ್ಬರೂ ದುಪಯೋಗಪಡಿಸಿಕೊಳ್ಳಲು ಅವಕಾಶವಾಗದಂತೆ ಎಲ್ಲವನ್ನೂ ಸರಿ ಮಾಡುತ್ತೇವೆ” ಎಂದೂ ಹೇಳಿದ್ದಾರೆ.

“ನನ್ನ ಪತ್ನಿಗೆ ನಿವೇಶನ ನೀಡಿದಾಗ ನಾನು ವಿರೋಧ ಪಕ್ಷದಲ್ಲಿದ್ದೆ. ವಿರೋಧ ಪಕ್ಷದ ನಾಯಕನಾಗಿದ್ದ ನನ್ನನ್ನು ಕೇಳಿ ಬಿಜೆಪಿಯವರು ಕೆಲಸ ಮಾಡುತ್ತಿದ್ದರಾ? ಈಗ ನಾನು ಕೂಡ ವಿರೋಧ ಪಕ್ಷದ ನಾಯಕರನ್ನು ಕೇಳಿಕೊಂಡು ನಿರ್ಧಾರ ಕೈಗೊಳ್ಳುತ್ತೇನಾ? 2021ರಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಅವರ ಕಾಲದಲ್ಲೇ ನಿವೇಶನ ಕೊಟ್ಟಿದ್ದಾರೆ. ಆಗ ಮುಡಾ ತಪ್ಪು ಮಾಡಿದ್ದರೆ ಅದಕ್ಕೆ ಯಾರು ಹೊಣೆ?” ಎಂದು ಬಿಜೆಪಿಗೆ ಪ್ರಶ್ನೆ ಹಾಕಿದ ಸಿದ್ದರಾಮಯ್ಯ, “ಒಂದು ವೇಳೆ ನಿವೇಶನ ವಾಪಸ್ ಪಡೆಯುವುದಾದರೆ ಭೂಸ್ವಾಧೀನ ಕಾನೂನಿನಂತೆ ನನಗೆ ಕೊಡಬೇಕಾದ ಪರಿಹಾರ ಕೊಡಲಿ. ಜಮೀನು ಮೌಲ್ಯದ ಮೂರು ಪಟ್ಟು ಪರಿಹಾರ ಎಂದರೆ 57 ಕೋಟಿ ಆಗುತ್ತದೆ. ಅದಕ್ಕೆ ಬಡ್ಡಿ ಸೇರಿದರೆ 62 ಕೋಟಿ ಆಗುತ್ತದೆ. ಬೇಕಿದ್ದರೆ ನಿವೇಶನ ವಾಪಸ್ ಪಡೆದು ಈ ಹಣ ಕೊಡಲಿ” ಎಂದೂ ಹೇಳಿದರು.

ಹಿಂದುಳಿದ ನಾಯಕ ಎಂದು ತುಳಿಯಲು ಯತ್ನ

“ನಾನೊಬ್ಬ ಹಿಂದುಳಿದ ವರ್ಗದ ನಾಯಕನಾಗಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವುದಕ್ಕೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಆ ಹೊಟ್ಟೆಕಿಚ್ಚಿನಿಂದಲೇ ಕೆಲವರು ಷಢ್ಯಂತ್ರ ನಡೆಸುತ್ತಿದ್ದಾರೆ. ನನ್ನ ಮೇಲೆ ದೂರಲು ಅವರಿಗೆ ಬೇರೇನೂ ಸಿಗುತ್ತಿಲ್ಲ. ಹಾಗಾಗಿ ಈ ನಿವೇಶನದ ವಿಷಯದ ಹಿಡಿದುಕೊಂಡು ಜಗ್ಗಾಡುತ್ತಿದ್ದಾರೆ. ಕಾನೂನು ರೀತಿಯಲ್ಲೇ ನಡೆದಿರುವುದನ್ನು ಅಕ್ರಮ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇಂತಹ ಆರೋಪಗಳಿಗೆ ನಾನು ಹೆದರುತ್ತೇನಾ? ಎಂದೂ ಸಿಎಂ ತಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

Tags:    

Similar News