Mysore MUDA Scam| ಪಾರ್ವತಿ ಸಿದ್ದರಾಮಯ್ಯ ಭಾವುಕ ಪತ್ರ; ಎಲ್ಲ ನಿವೇಶನಗಳನ್ನು ಮರಳಿಸಲು ನಿರ್ಧಾರ

ನನ್ನ ಪತಿ ರಾಜ್ಯದ ರಾಜಕಾರಣಿಯಾಗಿ 40 ವರ್ಷಗಳಿಂದ ಒಂದೇ ಒಂದು ಕಳಂಕವಿಲ್ಲದೇ ಬದುಕುತ್ತಿದ್ದಾರೆ. ಅವರಿಗೆ ಮುಜುಗರವಾಗಬಾರದು ಎಂದು ಸಾರ್ವಜನಿಕ ಜೀವನದಿಂದ ದೂರವಿದ್ದವಳು ನಾನು. ಅವರ ರಾಜಕೀಯ ಜೀವನಕ್ಕೆ ನನ್ನಿಂದ ಸಣ್ಣ ಕಳಂಕವೂ ಬರಬಾರದು ಎಂದು ಬದುಕಿದವಳು. ಮುಡಾ ಸೈಟು ವಿಚಾರ ನನಗೆ ನೋವುಂಟು ಮಾಡಿದೆ. ನನ್ನ ಸಹೋದರ ಅರಿಶಿನ ಕುಂಕುಮದ ಬಾಬ್ತು ನೀಡಿದ ಸೈಟುಗಳವು. ಇದರಿಂದ ಅನ್ಯಾಯವಾಗಿ ನನ್ನ ಪತಿ ಆರೋಪಗಳನ್ನು ಎದುರಿಸಬೇಕಾಗುತ್ತಿದೆ.- ಪಾರ್ವತಿ ಸಿದ್ದರಾಮಯ್ಯ

Update: 2024-10-01 04:47 GMT

ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯ (ಇಡಿ)ಪ್ರಕರಣ ದಾಖಲಿಸಿದ ಬೆನ್ನಿಗೇ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು ತಮ್ಮ ಹೆಸರಿಗೆ ಮಂಜೂರಾಗಿರುವ ಎಲ್ಲ 14 ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮರಳಿಸಲು ನಿರ್ಧರಿಸಿದ್ದಾರೆ.

ಪಾರ್ವತಿ ಅವರು ತಮಗೆ ಮಂಜೂರಾಗಿರುವ ನಿವೇಶನಗಳನ್ನು ವಾಪಸ್‌ ಪಡಯುವಂತೆ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಪಾರ್ವತಿ ಅವರು ತಮ್ಮ 3 ಎಕರೆ 16 ಗುಂಟೆ ಭೂಮಿಗೆ ಬದಲಾಗಿ ಬೇರೆ ಸ್ಥಳದಲ್ಲಿ ನೀಡಲಾದ 14 ನಿವೇಶನಗಳನ್ನು ವಾಪಸ್‌ ನೀಡಲು ಬಯಸುವುದಾಗಿ ತಿಳಿಸಿದ್ದಾರೆ.

" ನಿವೇಶನಗಳ ಸ್ವಾಧೀನವನ್ನು ಮೈಸೂರು ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ದಯವಿಟ್ಟು ಮುಡಾ ಆದಷ್ಟು ಬೇಗ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು," ಎಂದು ಮನವಿ ಮಾಡಿದ್ದಾರೆ.

 ಮುಡಾ ಪ್ರಕರಣ ಬಯಲಿಗೆ ಬಂದ ಬಳಿಕ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಮೇಲೆ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದರು. ಇದನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದ ಬಳಿಕ ಬೆಂಗಳೂರಿನ ವಿಶೇಷ ನ್ಯಾಯಾಲಯ ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಹಾಗೂ ದೇವರಾಜು ಅವರ ಹೆಸರನ್ನು ಲೋಕಾಯುಕ್ತರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಬಳಿಕ ಖಾಸಗಿ ದೂರಿನ ಆಧಾರದಲ್ಲಿ ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಜಾರಿ ನಿರ್ದೇಶನಾಲಯವೂ (ಇಡಿ) ದೂರು ದಾಖಲಿಸಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ಮರಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಸಿದ್ದರಾಮಯ್ಯ ಏನು ಹೇಳುತ್ತಾರೆ?

"ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ. ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು.

ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ.

ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ. ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ." ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪಾರ್ವತಿ ಅವರ ಭಾವುಕ ಪತ್ರ

"ನಾನು ಯಾವತ್ತೂ ಸೈಟು, ಚಿನ್ನಕ್ಕಾಗಿ ಆಸೆಪಟ್ಟವಳಲ್ಲ. ನನ್ನ ಪತಿಗಿಂತ ಸೈಟು ದೊಡ್ಡದಲ್ಲ," ಎಂದು ಪಾರ್ವತಿ ಪತ್ರದಲ್ಲಿ ಬರೆದಿದ್ದಾರೆ.

ನನ್ನ ಪತಿ ರಾಜ್ಯದ ರಾಜಕಾರಣಿಯಾಗಿ 40 ವರ್ಷಗಳಿಂದ ಒಂದೇ ಒಂದು ಕಳಂಕವಿಲ್ಲದೇ ಬದುಕುತ್ತಿದ್ದಾರೆ. ಅವರಿಗೆ ಮುಜುಗರವಾಗಬಾರದು ಎಂದು ಸಾರ್ವಜನಿಕ ಜೀವನದಿಂದ ದೂರವಿದ್ದವಳು ನಾನು. ಅವರ ರಾಜಕೀಯ ಜೀವನಕ್ಕೆ ನನ್ನಿಂದ ಸಣ್ಣ ಕಳಂಕವೂ ಬರಬಾರದು ಎಂದು ಬದುಕಿದವಳು. ಮುಡಾ ಸೈಟು ವಿಚಾರ ನನಗೆ ನೋವುಂಟು ಮಾಡಿದೆ. ನನ್ನ ಸಹೋದರ ಅರಿಶಿನ ಕುಂಕುಮದ ಬಾಬ್ತು ನೀಡಿದ ಸೈಟುಗಳವು. ಇದರಿಂದ ಅನ್ಯಾಯವಾಗಿ ನನ್ನ ಪತಿ ಆರೋಪಗಳನ್ನು ಎದುರಿಸಬೇಕಾಗುತ್ತಿದೆ. ಈ ಹಿನ್ನಲೆಯಲ್ಲಿ ನನಗೆ ನೀಡಿದ 14 ಸೈಟುಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

 

 

Tags:    

Similar News