Mysore MUDA Scam | ಹಗರಣಕ್ಕೆ ಸಂಬಂಧಿಸಿದ ಕಡತ ಸಾಗಣೆ; ಸಚಿವರ ವಿರುದ್ಧ ದೂರು ದಾಖಲು

ಮುಡಾ ಹಗರಣಕ್ಕೆ ಸಂಬಂಧಿಸಿದ ಮಹತ್ವದ ಕಡತಗಳು ಮತ್ತು ದಾಖಲೆಗಳನ್ನು ವರ್ಗಾಯಿಸಿದ ಆರೋಪದ ಮೇಲೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸೋಮವಾರ ದೂರು ದಾಖಲಿಸಿದ್ದಾರೆ.;

Update: 2024-10-07 11:17 GMT
ಸಚಿವ ಭೈರತಿ ಸುರೇಶ್‌

ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಮುಡಾ ಹಗರಣಕ್ಕೆ ಸಂಬಂಧಿಸಿದ ಮಹತ್ವದ ಕಡತಗಳು ಮತ್ತು ದಾಖಲೆಗಳನ್ನು ವರ್ಗಾಯಿಸಿದ ಆರೋಪದ ಮೇಲೆ  ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಮೈಸೂರು‌ ಲೋಕಾಯುಕ್ತ ಎಸ್ಪಿಯಾಗಿದ್ದ ಸುಜೀತ್ ವಿರುದ್ಧ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸೋಮವಾರ ದೂರು ದಾಖಲಿಸಿದ್ದಾರೆ. 

ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಸಲ್ಲಿಸಿದ ದೂರಿನಲ್ಲಿ, ಮೈಸೂರಿನ ಲೋಕಾಯುಕ್ತ ಮಾಜಿ ಎಸ್ಪಿ ಸುಜೀತ್ ಅವರು ಜುಲೈನಲ್ಲಿ ಕಡತಗಳನ್ನು ಸ್ಥಳಾಂತರಿಸುವಲ್ಲಿ ಸಚಿವರೊಂದಿಗೆ ʼಕುತಂತ್ರʼ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸುವಂತೆ ಭಾನುವಾರ ಡಿಜಿಪಿಗೆ ದೂರು ಪ್ರತಿಯನ್ನು ಮೇಲ್ ಮಾಡಲಾಗಿದೆ. ಮುಡಾ ಹಗರಣ ಬೆಳಕಿಗೆ ಬಂದಾಗ ನಗರಾಭಿವೃದ್ಧಿ ಸಚಿವರು ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಿ ಹಗರಣಕ್ಕೆ ಸಂಬಂಧಿಸಿದ ಮಹತ್ವದ ಕಡತಗಳು ಮತ್ತು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ಅಂದಿನ ಮೈಸೂರು ಲೋಕಾಯುಕ್ತ ಎಸ್ಪಿ ಸುಜೀತ್ ಸಹಕರಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಆರೋಪಿಸಿದ್ದಾರೆ.

ಸಚಿವರಿಗೆ ಈ ಕಡತಗಳನ್ನು ವರ್ಗಾವಣೆ ಮಾಡಲು ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಸುಜೀತ್ ಸಹಾಯ ಮಾಡಿದ್ದರು ಎನ್ನಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇತ್ತೀಚೆಗೆ, ಜಾರಿ ನಿರ್ದೇಶನಾಲಯವು ರಾಜ್ಯ ಲೋಕಾಯುಕ್ತ ಎಫ್‌ಐಆರ್ ಅನ್ನು ಗಮನದಲ್ಲಿಟ್ಟುಕೊಂಡು, ಮುಡಾ ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಮತ್ತು ಇತರ ಕೆಲವರ ವಿರುದ್ಧ ದೂರು ದಾಖಲಿಸಿದೆ.

Tags:    

Similar News