ತನಿಖಾ ವರದಿ ಬರುವವರೆಗೂ ಮುಡಾ ನಿವೇಶನ ನಮ್ಮದಲ್ಲ: ಯತೀಂದ್ರ ಸಿದ್ದರಾಮಯ್ಯ

Update: 2024-08-09 06:59 GMT

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ʻಮೈಸೂರು ಚಲೋʼ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿವೆ. ಈ ಮಧ್ಯೆ, ಮುಡಾ ನಿವೇಶನ ಹಂಚಿಕೆ ಸಂಬಂಧ ತನಿಖೆ ನಡೆದು ವರದಿ ಬರುವವರೆಗೂ ಆ ನಿವೇಶನಗಳು ನಮ್ಮದಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುತ್ರ, ಎಂಎಲ್‌ಸಿ ಡಾ. ಯತೀಂದ್ರ ಹೇಳಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ʻʻಮುಡಾ ನಿವೇಶನ ಹಂಚಿಕೆ ಸಂಬಂಧ ನ್ಯಾಯಾಂಗ ತನಿಖೆ ಆಗುತ್ತಿದೆ. ಈಗಾಗಲೇ ಮುಡಾ ಸೈಟ್​​ ವಾಪಸ್ ಕೊಡುವ ಬಗ್ಗೆ ಹೇಳಾಗಿದೆ. 2005ರಿಂದ ಯಾರಿಗೆಲ್ಲಾ ನಿವೇಶನ ಕೊಟ್ಟಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ಅರ್ಥ ನಮಗೆ ಕೊಟ್ಟಿರುವ ನಿವೇಶನವೂ ರದ್ದಾಗಿದೆ ಎಂದೇ. ಈಗ ಆ ನಿವೇಶನಗಳು ನಮ್ಮ ಸುಪರ್ದಿಗೆ ಬರುವುದಿಲ್ಲʼʼ ಎಂದು ಹೇಳಿದ್ದಾರೆ.

ನ್ಯಾಯಾಂಗ ತನಿಖೆ ನಡೆದು ವರದಿ ಬರುವವರೆಗೂ ಸೈಟ್ ನಮ್ಮದಲ್ಲ. ತನಿಖೆ ಮಾಡಿ ನಮ್ಮದು ಎಂದರೆ ನಿವೇಶನ ನಮಗೆ ಕೊಡುತ್ತಾರೆ. ಇಲ್ಲದಿದ್ದರೆ ಕುಟುಂಬದವರು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮ್ಮ ತಂದೆ ಭ್ರಷ್ಟಾಚಾರ ಮಾಡಿದ್ದಾರೆಂದು ಬಿಂಬಿಸುವುದು ಸರಿಯಲ್ಲ ಎಂದು ಯತೀಂದ್ರ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಪಾದಯಾತ್ರೆ 7ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಪಕ್ಷಗಳ ಈ ಪಾದಯಾತ್ರೆಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಪಕ್ಷ ಬೃಹತ್ ಜನಾಂದೋಲನ ಸಮಾವೇಶ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವರು, ಶಾಸಕರು, ಮಾಜಿ ಶಾಸಕರು, ಲೋಕಸಭಾ ಸದಸ್ಯರು, ಮಾಜಿ ಸಂಸದರು, ಎಲ್ಲಾ ಜಿಲ್ಲಾ, ನಗರ ಸಮಿತಿ ಅಧ್ಯಕ್ಷರು ಹಾಗೂ ಇನ್ನಿತರ ಕಾಂಗ್ರೆಸ್ ಪದಾಧಿಕಾರಿಗಳನ್ನು ಒಳಗೊಂಡಂತೆ 300ಕ್ಕೂ ಹೆಚ್ಚು ಗಣ್ಯರು ಪಾಲ್ಗೊಂಡಿದ್ದಾರೆ. 

Tags:    

Similar News