ಹಿರಿಯ ಮುತ್ಸದ್ಧಿ, ಸಂಸದ ಶ್ರೀನಿವಾಸ ಪ್ರಸಾದ್‌ ನಿಧನ

ಸಮಾಜವಾದಿ ಹಿನ್ನೆಲೆಯಿಂದ ಬಂದ ಶ್ರೀನಿವಾಸ್‌ ಪ್ರಸಾದ್‌ ಅವರು, ಜನಪರ ಕಾಳಜಿಯ ರಾಜಕಾರಣಿಯಾಗಿ, ದಲಿತ ಪರ ದನಿಯಾಗಿ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರು. ಕೇಂದ್ರ ಸಚಿವರಾಗಿ, ರಾಜ್ಯ ಸಂಪುಟದಲ್ಲೂ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು ರಾಜ್ಯ ಕಂಡ ಮುತ್ಸದ್ಧಿಗಳಲ್ಲಿ ಒಬ್ಬರಾಗಿದ್ದರು.;

Update: 2024-04-29 02:38 GMT

ಹಿರಿಯ ಮುತ್ಸದ್ಧಿ, ಮಾಜಿ ಕೇಂದ್ರ ಸಚಿವ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್ (76) ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

ಮೂತ್ರಕೋಶದ ಸೋಂಕು ಮತ್ತಿತರ ಸಮಸ್ಯೆಗಳ ಚಿಕಿತ್ಸೆಗಾಗಿ ಅವರನ್ನು ಏ. 22ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಅವರಿಗೆ ಪತ್ನಿ ಭಾಗ್ಯಲಕ್ಷ್ಮಿ, ಪುತ್ರಿಯರಾದ ಪ್ರತಿಮಾ, ಪೂರ್ಣಿಮಾ, ಪೂನಂ ಇದ್ದಾರೆ. ಅವರ ಪಾರ್ಥೀವ ಶರೀರವನ್ನು ಮೈಸೂರಿನ ಜಯಲಕ್ಷ್ಮಿಪುರಂನ ಅವರ ನಿವಾಸಕ್ಕೆ ತರಲಾಗುತ್ತಿದ್ದು, ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲು ಕುಟುಂಬ ನಿರ್ಧರಿಸಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ವಿದ್ಯಾರ್ಥಿ ದೆಸೆಯಿಂದಲೇ ಜನಸಂಘ ಮತ್ತು ಆರ್‌ ಎಸ್‌ ಎಸ್‌ನ ಕಾರ್ಯಕರ್ತರಾಗಿದ್ದ ಅವರು, 1974ರಲ್ಲಿ ಕೆ.ಆರ್. ಕ್ಷೇತ್ರದ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ರಾಜಕಾರಣ ಪ್ರವೇಶಿಸಿದ್ದರು. ಸುದೀರ್ಘ ಅರ್ಧ ಶತಮಾನದ ತಮ್ಮ ರಾಜಕೀಯ ಬದುಕಿನಲ್ಲಿ ಆರು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು.‌ ಒಂದು ಅವಧಿಗೆ ಕೇಂದ್ರ ಸಚಿವರಾಗಿದ್ದ ಅವರು, ರಾಜ್ಯ ಸಚಿವ ಸಂಪುಟದಲ್ಲೂ ಸಚಿವರಾಗಿದ್ದರು. 1999ರಿಂದ 2004ರವರೆಗೆ ಕೇಂದ್ರದಲ್ಲಿ ಆಹಾರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದ ಅವರು, 2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಮಾಜವಾದಿ ರಾಜಕಾರಣಿಯಾಗಿ ಹಾಗೂ ದಲಿತ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು ಹಳೇ ಮೈಸೂರು ಭಾಗದಲ್ಲಿ ಸಾಕಷ್ಟು ಪ್ರಭಾವಿ ನಾಯಕರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದು ಕಾಲದ ಆಪ್ತರಾಗಿದ್ದ ವಿ ಶ್ರೀನಿವಾಸ ಪ್ರಸಾದ್‌,  ಅವರಿಂದ ದೂರವಾಗಿ ಬಿಜೆಪಿ ತೆಕ್ಕೆಗೆ ಸೇರಿಕೊಂಡಿದ್ದರು. 2019ರಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದ ಅವರು ಇತ್ತೀಚೆಗೆ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ್‌ ಪ್ರಸಾದ್‌ ಅವರ ಮೈಸೂರು ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದರು. ಬಳಿಕ ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರೂ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಬೂಸಾ ಚಳವಳಿ, ದಲಿತ ಹೋರಾಟ, ತುರ್ತುಪರಿಸ್ಥಿತಿ ವಿರುದ್ಧ ಹೋರಾಟಗಳ ಮೂಲಕ ರಾಜಕೀಯ ಮುನ್ನೆಲೆಗೆ ಬಂದಿದ್ದ ಅವರು, ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ತಮ್ಮ ದಲಿತ ಪರ ಕಾಳಜಿ ಮತ್ತು ಸಂವಿಧಾನದ ಅರಿವಿನ ಮೂಲಕ ರಾಜ್ಯದ ದಲಿತ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅಪರೂಪದ ನಾಯಕ ವಿ ಶ್ರೀನಿವಾಸ ಪ್ರಸಾದ್.

Tags:    

Similar News