ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ | ಕಾಂಗ್ರೆಸ್ ಸೇರುವ ಸಾಧ್ಯತೆ

ಸಂಗಣ್ಣ ಕರಡಿ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ಕೊಡದೇ ಹೊಸ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದರಿಂದ ಆರಂಭದಿಂದಲೂ ಅಸಮಾಧಾನಗೊಂಡಿದ್ದ ಅವರು, ಲೋಕಸಭಾ ಟಿಕೆಟ್‌ ಅನ್ನು ಪುನಃ ಬದಲಾಯಿಸಿ ತಮಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು.;

Update: 2024-04-16 14:54 GMT

ಈ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದೇ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅದನ್ನು ಅಂಗೀಕಾರ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇ-ಮೇಲ್‌ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಸಂಗಣ್ಣ ಕರಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ನಾಳೆ ಅಥವಾ ಶೀಘ್ರದಲ್ಲಿಯೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಗಣ್ಣ ಕರಡಿ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ಕೊಡದೇ ಹೊಸ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದರಿಂದ ಆರಂಭದಿಂದಲೂ ಅಸಮಾಧಾನಗೊಂಡಿದ್ದ ಅವರು, ಲೋಕಸಭಾ ಟಿಕೆಟ್‌ ಅನ್ನು ಪುನಃ ಬದಲಾಯಿಸಿ ತಮಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದರು. ಇದ್ಯಾವುದಕ್ಕೂ ಬಿಜೆಪಿ ಹೈಕಮಾಂಡ್ ಆಗಲೀ ಅಥವಾ ರಾಜ್ಯ ಬಿಜೆಪಿ ನಾಯಕರಾಗಲೀ ಸೊಪ್ಪು ಹಾಕಿರಲಿಲ್ಲ. ಇದರಿಂದಾಗಿ ಮನನೊಂದ ಸಂಸದ ಕರಡಿ ಸಂಗಣ್ಣ, ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಂಗಣ್ಣ ಕರಡಿ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸತತ ಎರಡು ಬಾರಿ ಸಂಸದರಾಗಿದ್ದಾರೆ. ಆದರೆ ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡದೇ ಹೊಸಮುಖಕ್ಕೆ ಮಣೆ ಹಾಕಿದೆ. ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದ್ದ ಕರಡಿಯವರಿಗೆ ನಿರಾಸೆಯುಂಟಾಗಿದೆ. ಇದರಿಂದ ಸಂಗಣ್ಣ ಅವರ ಅಭಿಮಾನಿಗಳು ಡಾ. ಬಸವರಾಜ್ ಕ್ಯಾವಟರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ, ಕೊಪ್ಪಳದ ಬಿಜೆಪಿ ಜಿಲ್ಲಾ ಕಚೇರಿಗೂ ಹಾನಿಯನ್ನುಂಟು ಮಾಡಿದ್ದರು. ನಂತರ, ಸಂಸದ ಸಂಗಣ್ಣ ಕರಡಿ ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ಮಾಡಿ, ಬಿಜೆಪಿ ಹೈಕಮಾಂಡ್‌ಗೆ ಮತ್ತೊಮ್ಮೆ ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಅವರ ಯಾವ ಪ್ರಯತ್ನವೂ ಕೂಡ ಫಲಿಸಲಿಲ್ಲ. ಇದರಿಂದ ತಾವು ಪಕ್ಷದಲ್ಲಿರುವುದೇ ಬೇಡ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಶಪಥ ಮಾಡಿ ಬಿಜೆಪಿ ಸ್ಥಾನಕ್ಕೆ ಹಾಗೂ ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಇನ್ನು ಕೆಲವು ದಿನಗಳವರೆಗೆ ಸಂಸದ ಸ್ಥಾನ ಇರುತ್ತಿದ್ದರೂ ಅದನ್ನೂ ಉಳಿಸಿಕೊಳ್ಳದೇ ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇ-ಮೇಲ್‌ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಕಾಂಗ್ರೆಸ್‌ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿಯೇ ಸಂಗಣ್ಣ ಕರಡಿ ಅವರು ಸಂಸದ ಸ್ಥಾನ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಶಾಸಕ ಲಕ್ಷ್ಮಣ ಸವದಿ ಅವರು ನಿನ್ನೆ ಕರಡಿ ಸಂಗಣ್ಣ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಚರ್ಚಿಸಿದ್ದರು. ಮಂಗಳವಾರ ಬೆಳಗ್ಗೆ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರು ಕರಡಿ ಸಂಗಣ್ಣ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದರು. ಈಗ ಬಿಜೆಪಿ ತೊರೆದಿರುವ ಕರಡಿ ಸಂಗಣ್ಣ, ನಾಳೆ ಕಾಂಗ್ರೆಸ್‌ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ.

Tags:    

Similar News