ಬೆಳಗಾವಿಯಲ್ಲಿ ವಿಷ ಸೇವಿಸಿ ತಾಯಿ, ಇಬ್ಬರು ಮಕ್ಕಳು ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಮೂವರು ಮಕ್ಕಳಿಗೂ ಮದುವೆಯಾಗಿರಲಿಲ್ಲ. ಹೀಗಾಗಿ ತಾಯಿ ಜತೆಯಲ್ಲೇ ಎಲ್ಲರೂ ವಾಸವಾಗಿದ್ದರು. ಬುಧವಾರ (ಜು.9) ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.;

Update: 2025-07-09 14:08 GMT
ಸಾಂದರ್ಭಿಕ ಚಿತ್ರ

ಬೆಳಗಾವಿ ನಗರದ ಶಹಾಪುರದಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಒಬ್ಬರ ಸ್ಥಿತಿ ಗಂಭೀರಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮಂಗಳಾ ಕುರಡೇಕರ್‌(70), ಪುತ್ರ ಸಂತೋಷ ಕುರಡೇಕರ್ ( 44) , ಪುತ್ರಿ ಸುವರ್ಣ ಕುರಡೇಕರ್(42) ಮೃತಪಟ್ಟವರು. ಪುತ್ರಿ ಸುನಂದ ಕುರಡೇಕರ್(40) ಅವರ ಸ್ಥಿತಿ ‌ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮೂವರು ಮಕ್ಕಳು ಅವಿವಾಹಿತರಾಗಿದ್ದು, ತಾಯಿ ಜತೆಯಲ್ಲೇ ವಾಸವಾಗಿದ್ದರು. ಬುಧವಾರ(ಜು.9) ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. 

ಡೆತ್‌ ನೋಟ್‌ನಲ್ಲಿ ಏನಿದೆ? 

ಸಂತೋಷ ಕುರಡೇಕರ್ ಡೆತ್ ನೋಟ್ ಬರೆದಿದ್ದು, ಅದು ಮರಾಠಿ ಭಾಷೆಯಲ್ಲಿದೆ. ಅದರಲ್ಲಿ ನಾನು ಬಹಳಷ್ಟು ಜನರ ಬಳಿ ಗೋಲ್ಡ್ ಚೀಟಿ (ಚೀಟ್ ಫಂಡ್ ಮಾದರಿ) ಮಾಡುತ್ತಿದ್ದೆ. ಹಲವರಿಗೆ ಹಣ ನೀಡಬೇಕಾಗಿತ್ತು. ಚಿನ್ನದ ವ್ಯಾಪಾರಿ ಕಿರುಕುಳ ಕೊಟ್ಟಿದ್ದಾರೆ. ನಾನು 500 ಗ್ರಾಂ ಬಂಗಾರ ಕೊಟ್ಟಿದ್ದೇನೆ. ಮರಳಿ ಕೇಳಿದರೆ ಚಿನ್ನದ ವ್ಯಾಪಾರಿ ಹಾಗೂ ಆತನ ಹೆಂಡತಿ ‌ಜೀವ ಬೆದರಿಕೆ ಹಾಕಿದ್ದಾರೆ. ಅದಲ್ಲದೇ ನಾನು ಬಂಗಾರವನ್ನು ತೆಗೆದುಕೊಂಡು ಊರು ಬಿಟ್ಟಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ನನಗೆ ಬದುಕಲು ಕಷ್ಟವಾಗಿದೆ. ಹಲವರು ನನ್ನ ಮನೆಗೆ ಬಂದು ತೊಂದರೆ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಪೊಲೀಸರು ಆ ವ್ಯಕ್ತಿಯಿಂದ ಚಿನ್ನವನ್ನು ಪಡೆದು ನಾನು ಕೊಡಬೇಕಾದ ಜನರಿಗೆ ವಿತರಿಸಬೇಕು. ಅಲ್ಲದೇ ಚಿನ್ನದ ವ್ಯಾಪಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Tags:    

Similar News