ಪುನರ್ವಸು ಅಬ್ಬರ | ಕರಾವಳಿ, ಮಳೆನಾಡಿನಲ್ಲಿ ಮಳೆ, ಪ್ರವಾಹ; ಏಳು ಸಾವು
ಕಳೆದ ಮೂರು ದಿನಗಳಿಂದ ರಾಜ್ಯದ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಉಡುಪಿ, ಚಿಕ್ಕಮಗಳೂರು, ಮಡಿಕೇರಿ, ಶಿವಮೊಗ್ಗ, ಉತ್ತರಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡ್ಡುಕುಸಿತ, ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದೆ.
ರಾಜ್ಯದ ಘಟ್ಟ ಪ್ರದೇಶದಲ್ಲಿ ಮುಂಗಾರು ಬಿರುಸಾಗಿದ್ದು, ಭಾರೀ ಮಳೆ ಮತ್ತು ಗಾಳಿಯಿಂದಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆ ಹಾನಿ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಭಾನುವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಉತ್ತರಕನ್ನಡದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 40ಕ್ಕೂ ಹೆಚ್ಚು ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ 70ರಿಂದ 80ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ವರದಾ ನದಿ ಬಯಲಿನಲ್ಲಿ ನೂರಾರು ಹೆಕ್ಟೇರ್ ಜಮೀನು ಜಲಾವೃತವಾಗಿದೆ. ತುಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಬಾಳೆಬರೆ ಘಾಟಿ, ಆಗುಂಬೆ ಘಾಟಿಗಳಲ್ಲಿ ಅಲ್ಲಲ್ಲಿ ಗುಡ್ಡುಕುಸಿತ, ಸೇತುವೆ ಜಲಾವೃತವಾಗಿರುವ ವರದಿಗಳಿವೆ.
ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾಸನ, ಕೊಡಗು, ಮೈಸೂರಿನಲ್ಲಿ ಕೂಡ ಮಳೆಯಾಗುತ್ತಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮತ್ತು ನಿರಂತರ ಮಳೆ ಸುರಿಯುತ್ತಿರುವುದರಿಂದ, ಹವಾಮಾನ ಇಲಾಖೆ ಜು.16 ರಂದು ರಾಜ್ಯದ ದಕ್ಷಿಣ ಒಳಭಾಗ ಮತ್ತು ಕರಾವಳಿ ಭಾಗಗಳಿಗೆ ರೆಡ್ ಅಲರ್ಟ್ ಮುಂದುವರಿಸಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ; ಏಳು ಮಂದಿ ಸಾವು
ಉತ್ತರಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು 9 ಮಂದಿ ಮಣ್ಣಿನಡಿ ಸಿಲುಕಿದ್ದರು. ಆ ಪೈಕಿ ಏಳು ಮಂದಿ ಮಣ್ಣಿನರಾಶಿಯಡಿ ಜೀವಂತ ಸಮಾಧಿಯಾಗಿದ್ದಾರೆ.
ಮೃತರಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಐವರು ಇದ್ದಾರೆ ಎನ್ನಲಾಗಿದೆ. ಜೊತೆಗೆ ಗುಡ್ಡದ ತಳದಲ್ಲಿದ್ದ ಚಹಾ ಅಂಗಡಿಸಹಿತ ಉಳಿದವರು ಸಜೀವ ಸಮಾಧಿಯಾಗಿದ್ದಾರೆ. ಈ ಘಟನೆಯಲ್ಲಿ ಟ್ಯಾಂಕರ್ ಒಂದು ಕೂಡ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಎನ್ಡಿಆರ್ಎಫ್ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಮತ್ತೊಂದು ಕಡೆ ಶಿರಸಿ- ಕುಮಟಾ ಹೆದ್ದಾರಿಯಲ್ಲಿ ಪ್ರವಾಹ ಉಂಟಾಗಿದ್ದು, ಸೋಮವಾರ ಸಂಜೆಯಿಂದಲೇ ಈ ಮಾರ್ಗದ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಶಿವಮೊಗ್ಗದಲ್ಲಿ ದಾಖಲೆಯ ಮಳೆ
ಶಿವಮೊಗ್ಗದಲ್ಲೂ ಭಾರೀ ಮಳೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ 20 ಸೆಂಟಿ ಮೀಟರ್‌ಗಿಂತಲೂ ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಕೂಡ ರೆಡ್ ಆಲರ್ಟ್ ಮುಂದುವರೆದಿದೆ.
ಜು.15ರ ಬೆಳಗ್ಗೆ 8.30ರಿಂದ ಜು.16ರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಸರಾಸರಿ 8.26 ಸೆಂ.ಮೀ ಮಳೆಯಾಗಿದೆ. ಹೊಸನಗರ ತಾಲೂಕಿನಲ್ಲಿ ಅತ್ಯಧಿಕ ಮಳೆಯಾಗಿದ್ದು, ದಕ್ಷಿಣದ ಚಿರಾಪುಂಜಿ ಎಂದೇ ಹೆಸರಾಗಿರುವ ಮಾಸ್ತಿಕಟ್ಟೆಯಲ್ಲಿ 24.7 ಸೆಂ.ಮೀ ಮಳೆಯಾಗಿದೆ. ಹುಲಿಕಲ್‌ನಲ್ಲಿ 24.5 ಸೆಂ.ಮೀ, ಮಾಣಿಯಲ್ಲಿ 24 ಸೆಂ.ಮೀ,, ಯಡೂರಿಯಲ್ಲಿ 22.9 ಸೆಂ.ಮೀ,, ಸಾವೇಹಕ್ಲುವಿನಲ್ಲಿ 21.0 ಸೆಂ.ಮೀ ಮಳೆಯಾಗಿದೆ.
ಹೊಸನಗರದಲ್ಲಿ 13.36 ಸೆಂ.ಮೀ, ಸಾಗರದಲ್ಲಿ 12.91 ಸೆಂ.ಮೀ, ತೀರ್ಥಹಳ್ಳಿಯಲ್ಲಿ 12.09 ಸೆಂ.ಮೀ ಮಳೆಯಾಗಿದೆ. ಇನ್ನು, ಶಿವಮೊಗ್ಗದಲ್ಲಿ 5.2 ಸೆಂ.ಮೀ, ಭದ್ರಾವತಿಯಲ್ಲಿ 2.64 ಸೆಂ.ಮೀ, ಶಿಕಾರಿಪುರದಲ್ಲಿ 5.79 ಸೆಂ.ಮೀ, ಸೊರಬದಲ್ಲಿ 5.85 ಸೆಂ.ಮೀ ಮಳೆಯಾಗಿದೆ.
ದ.ಕ- ಉಡುಪಿಯಲ್ಲೂ ಮುಂದುವರಿದ ಮಳೆ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿದೆ. ಜುಲೈ 16, 17 ಮತ್ತು 18 ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಜು.19 ಮತ್ತು 20 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆ ಮುಂದುವರಿದಿರುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮಂಗಳವಾರವೂ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲಾದ್ಯಂತ ಹಾಗೂ ಹಾಸನದ 4 ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆ
ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ. ಯಾತ್ರಾರ್ಥಿಗಳು ಸ್ನಾನಕ್ಕಾಗಿ ನದಿಗೆ ಇಳಿಯುವುದನ್ನು ನಿಷೇಧಿಸಲಾಗಿದ್ದು, ದಡದಲ್ಲಿ ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿ ಭಕ್ತರಿಗೆ ತೀರ್ಥ ಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಬಿರುಗಾಳಿಗೆ ಕಡಬ ತಾಲೂಕಿನ ಬಲ್ಯ ಸರ್ಕಾರಿ ಶಾಲೆಯ ಮೇಲ್ಛಾವಣಿ ಹಾಳಾಗಿದ್ದು, ತರಗತಿ ಕೊಠಡಿಗಳು ನೀರಿನಿಂದ ತುಂಬಿವೆ. ಈ ಪ್ರದೇಶದಲ್ಲಿ ಅಡಿಕೆ ಮರಗಳು, ರಬ್ಬರ್, ಬಾಳೆ ಗಿಡಗಳೂ ನೆಲಕಚ್ಚಿವೆ.
ತುಂಬಿ ಹರಿಯುತ್ತಿರುವ ನದಿಗಳು
ಮಳೆನಾಡು ಚಿಕ್ಕಮಗಳೂರಿನಲ್ಲೂ ಭಾರೀ ಮಳೆಯಾಗುತ್ತಿದ್ದು, ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಕೊಟ್ಟಿಗೆಹಾರ ಮತ್ತು ಚಾರ್ಮಾಡಿಯಲ್ಲಿ ಭಾರೀ ಮಂಜು ಕವಿದಿದೆ. ಕಳಸ, ಕೊಟ್ಟಿಗೆಹಾರ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಆಲ್ದೂರು, ಬಾಳೆಹೊನ್ನೂರಿನಲ್ಲೂ ಭಾರೀ ಮಳೆಯಾಗುತ್ತಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ 13 ಸೆಂ.ಮೀ ಮಳೆ ದಾಖಲಾಗಿದ್ದರೆ, ಕಿಗ್ಗದಲ್ಲಿ 10 ಸೆಂ.ಮೀ ಮಳೆಯಾಗಿದೆ. ಚಂದ್ರದ್ರೋಣ ಬೆಟ್ಟದಲ್ಲಿರುವ ಜಲಪಾತಗಳು ಈಗ ವೈಭವಯುತವಾಗಿ ಕಾಣುತ್ತಿವೆ. ಹೇಮಾವತಿ, ತುಂಗಾ, ಭದ್ರಾ, ವೇದಾವತಿ ಮತ್ತು ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿವೆ.
ಅಪಾಯಮಟ್ಟ ಮೀರಿ ಹರಿಯುತ್ತಿದೆ ನೇತ್ರಾವತಿ ನದಿ
ಕೊಡಗಿನಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳು
ಜಿಲ್ಲೆಯ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕಾವೇರಿ ನೀರಿನ ಮಟ್ಟ ಅಪಾಯದ ಮಿತಿಯನ್ನು ಮೀರಿದೆ. ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದ ಪರಿಣಾಮ ಸಂಚಾರ ಅಸಾಧ್ಯವಾಗಿದೆ.
ಜಲಾವೃತಗೊಂಡ ಕೃಷಿ ಭೂಮಿ
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಕದಂಬ ನೌಕಾನೆಲೆಯಲ್ಲಿ ಬ್ಯಾರಿಕೇಡ್ ನಿರ್ಮಾಣದಿಂದಾಗಿ ಸುತ್ತಮುತ್ತಲಿನ ಗ್ರಾಮಗಳು ಜಲಾವೃತಗೊಂಡಿವೆ. ಇಲ್ಲಿನ ಆರಗ, ಚೆಂಡಿಯಾ, ಇಡೂರು, ತೋಡೂರು ಸೇರಿದಂತೆ ಹಲವು ಗ್ರಾಮಗಳು ಮುಳುಗಡೆಯಾಗಿವೆ. 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇಲ್ಲಿನ 40ಕ್ಕೂ ಹೆಚ್ಚು ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು 10 ಹೆಕ್ಟೇರ್ ಕೃಷಿ ಭೂಮಿ ಕೂಡ ಜಲಾವೃತಗೊಂಡು ಬೆಳೆದು ನಿಂತ ಬೆಳೆಗಳಿಗೆ ಹಾನಿಯಾಗಿದೆ. ಕದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚುತ್ತಿದ್ದು, ಕಾಳಿ ನದಿ ತೀರದುದ್ದಕ್ಕೂ ಪ್ರವಾಹದ ಆತಂಕ ಮನೆಮಾಡಿದೆ.
ಇನ್ನು ಬೆಂಗಳೂರಿನಲ್ಲಿಯೂ ಸೋಮವಾರ ಬೆಳ್ಳಂ ಬೆಳ್ಳಗ್ಗೆಯಿಂದಲೇ ಮಳೆ ಶುರುವಾಗಿತ್ತು. ಬೆಂಗಳೂರಿನಲ್ಲಿ ಮುಂಜಾನೆ ಮೋಡ ಕವಿದ ವಾತಾವರಣ, ತುಂತುರು ಮಳೆಯಾಯಿತು. ಜಿಟಿ, ಜಟಿ ಮಳೆಗೆ ವಾಹನ ಸವಾರರು ರೋಸಿ ಹೋಗಿದ್ದು, ನಗರದ ರಸ್ತೆಗಳಲ್ಲಿ ನೀರು ಕೂಡ ತುಂಬಿದ್ದರಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರ ಮಿಶನ್ ರಸ್ತೆ, ಕೋರಮಂಗಲ ರಸ್ತೆಯಲ್ಲಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.