Save Lalbagh| ಟನಲ್‌ ರಸ್ತೆ ಯೋಜನೆ ವಿರೋಧ; ಬಿಜೆಪಿಯಿಂದ ಲಾಲ್‌ಬಾಗ್‌ನಲ್ಲಿ ಸಹಿ ಸಂಗ್ರಹ ಅಭಿಯಾನ

ಟನಲ್ ಯೋಜನೆ ವಿರೋಧಿಸಿ ಬಿಜೆಪಿ ವತಿಯಿಂದ ಲಾಲ್​ಬಾಗ್​ನಲ್ಲಿ ಜನಜಾಗೃತಿಯ ಜತೆಗೆ ಸಹಿ ಸಂಗ್ರಹ ಅಭಿಯಾನ ನಡೆಸಿತು. ಬೆಂಗಳೂರು ರಕ್ಷಿಸಿ- ಟನಲ್ ರೋಡ್ ನಿಲ್ಲಿಸಿ ಎಂಬ ಘೋಷಣೆಯಡಿ ಅಭಿಯಾನ ನಡೆಸಲಾಯಿತು.

Update: 2025-11-02 12:43 GMT
Click the Play button to listen to article

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಟನಲ್ ಯೋಜನೆ ವಿರೋಧಿಸಿ ರಾಜ್ಯ ಬಿಜೆಪಿ ವತಿಯಿಂದ ಲಾಲ್​ಬಾಗ್​ನಲ್ಲಿ ಭಾನುವಾರ ಬೃಹತ್‌ ಜನಜಾಗೃತಿ ಅಭಿಯಾನದ ಜತೆಗೆ ಸಹಿ ಸಂಗ್ರಹ ಅಭಿಯಾನ ನಡೆಯಿತು. ಬೆಂಗಳೂರು ರಕ್ಷಿಸಿ, ಸುರಂಗ ಮಾರ್ಗ ನಿಲ್ಲಿಸಿ ಎಂಬ ಘೋಷಣೆಯಡಿ ಅಭಿಯಾನ ನಡೆಸಲಾಯಿತು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ಈ ವೇಳೆ ಸಾರ್ವಜನಿಕರೊಂದಿಗೆ ಯೋಜನೆ ಕುರಿತು ಚರ್ಚೆ ನಡೆಸಲಾಯಿತು.

ಲಾಲ್‌ಬಾಗ್ ಗುಡ್ಡದ ಮೇಲೆ ಕುಳಿತು ಅಭಿಯಾನ ಮಡೆಸಿದ ಬಿಜೆಪಿ ನಾಯಕರು, ಟನಲ್‌ ಸುರಂಗ ಮಾರ್ಗದ ಕುರಿತು ಜಂಟಿ ನಿರ್ದೇಶಕ ಜಗದೀಶ್‌ ಬಳಿ ಮಾಹಿತಿ ಪಡೆದರು. ಅಲ್ಲದೇ, ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ಅವರೊಂದಿಗೂ ಮಾತುಕತೆ ನಡೆಸಿದರು. ಟನಲ್‌ ಯೋಜನೆ ಅನುಷ್ಠಾನ ಮಾಡುವುದರಿಂದ ಯಾವೆಲ್ಲಾ ಸಮಸ್ಯೆಯಾಗಲಿದೆ, ಬೆಂಗಳೂರು ಸುರಕ್ಷಿತವಾಗಿರಲು ಲಾಲ್‌ಬಾಗ್‌ ಬಂಡೆ ಎಷ್ಟು ಪ್ರಾಮುಖ್ಯತೆ ವಹಿಸಿದೆ ಎಂಬುದರ ಬಗ್ಗೆಯೂ ವಿವರ ಪಡೆದುಕೊಂಡರು.

ಇದೇ ವೇಳೆ ಬಿಜೆಪಿ ಮುಖಂಡರು ಮೌನ ಪ್ರತಿಭಟನೆ ನಡೆಸಿದರು. ಈ ಯೋಜನೆಯಿಂದ ಸಂಭವನೀಯ ಪರಿಸರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಯೋಜನೆ ನಗರಕ್ಕೆ ದುರಂತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಯೋಜನೆಗಾಗಿ ಲಾಲ್‌ಬಾಗ್‌ನಲ್ಲಿ 6 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಸುರಂಗ ರಸ್ತೆ ಯೋಜನೆಯ ಮೂಲಕ ಸಸ್ಯಕಾಶಿ ಲಾಲ್‌ಬಾಗ್‌ಗೆ ಕಾಂಗ್ರೆಸ್‌ ಸರ್ಕಾರ ಗುಂಡಿ ತೋಡುತ್ತಿದೆ. ಈ ಯೋಜನೆಯಿಂದ ನಗರದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಹೋಗಲಿದೆ ಎಂದು ಆರೋಪಿಸಿದರು.

ಸುರಂಗ ರಸ್ತೆ ಯೋಜನೆ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ. ಪರಿಸರವಾದಿಗಳು, ಲಾಲ್‌ಬಾಗ್‌ ವಿಹಾರಿಗಳು ಇದಕ್ಕೆ ಕೈ ಜೋಡಿಸಿದ್ದು, ನಗರದಲ್ಲಿ ಶೇ.90 ರಷ್ಟು ಜನರು ಮಧ್ಯಮ ವರ್ಗ ಹಾಗೂ ಬಡವರಾಗಿದ್ದಾರೆ. ಈ ವರ್ಗವನ್ನು ಕಡೆಗಣಿಸಿ ಶೇ.10 ರಷ್ಟು ವಿಐಪಿಗಳಿಗಾಗಿ ಸುರಂಗ ರಸ್ತೆ ಯೋಜನೆ ರೂಪಿಸಿ 8 ಸಾವಿರ ಕೋಟಿ ರೂ. ಸಾಲ ಪಡೆಯಲಾಗಿದೆ. ಗುತ್ತಿಗೆದಾರರಿಗೆ ಜಿಬಿಎ 4 ಸಾವಿರ ಕೋಟಿ ರೂ. ಪಾವತಿಸಬೇಕಿದೆ. ಪಾಲಿಕೆಯ ಆದಾಯವೇ 3 ಸಾವಿರ ಕೋಟಿ ರೂ. ಇರುವಾಗ, ಸಾಲ ಮಾಡಿ ಯೋಜನೆ ರೂಪಿಸಿದರೆ ಬೆಂಗಳೂರಿನ ಆರ್ಥಿಕ ಸ್ಥಿತಿ ಪಾತಾಳಕ್ಕೆ ಹೋಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅತಿ ಹಳೆಯ ಶಿಲೆಗಳು ಬೆಂಗಳೂರಿನ ನೆಲದಾಳದಲ್ಲಿದೆ. ಇದರ ಮೇಲೆ ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದಾರೆ. ಈ ಶಿಲೆಗಳು ಇರುವುದರಿಂದಲೇ ಭೂಕಂಪವಾಗಲ್ಲ. ಇದಕ್ಕೆ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದಿಂದ ಅನುಮತಿ ಸಿಕ್ಕಿಲ್ಲ. ಲಾಲ್‌ಬಾಗ್‌ ಸಂರಕ್ಷಿತ ಪ್ರದೇಶ ಎಂದು ಫಲಕ ಇಟ್ಟು, ಸರ್ಕಾರವೇ ಅದನ್ನು ಉಲ್ಲಂಘಿಸುತ್ತಿದೆ. 18 ಕಿ.ಮೀ. ಸುರಂಗ ಕೊರೆದರೆ ಟ್ರಾಫಿಕ್‌ ಕಡಿಮೆಯಾಗುವುದಾದರೆ ನಾವೇ ಅದಕ್ಕೆ ಬೆಂಬಲ ನೀಡುತ್ತೇವೆ. ಶೇ.70 ರಷ್ಟು ದ್ವಿಚಕ್ರ ವಾಹನ ಚಾಲಕರಿರುವಾಗ, ಕಾರಿನ ಚಾಲಕರಿಗಾಗಿ ಸುರಂಗ ರಸ್ತೆ ನಿರ್ಮಿಸಲಾಗುತ್ತಿದೆ. ಈಗಿನ ರಸ್ತೆಗಳ ಮೇಲಿರುವ ಗುಂಡಿಗಳನ್ನು ಮೊದಲು ಸರಿಪಡಿಸಲಿ ಎಂದು ಆಗ್ರಹಿಸಿದರು.

ನಗರದ ರಸ್ತೆ ಗುಂಡಿ ಮುಚ್ಚಲು ಸಿಎಂ ಸಿದ್ದರಾಮಯ್ಯ ಒಂದು ವಾರ ಗಡುವು ನೀಡಿದ್ದರೂ ಅದಕ್ಕೆ ಅಧಿಕಾರಿಗಳು ಸ್ವಲ್ಪವೂ ಬೆಲೆ ನೀಡಿಲ್ಲ. ಈ ಬಗ್ಗೆ ಗಮನ ಕೊಡದೆ ಸುರಂಗ ಯೋಜನೆ ರೂಪಿಸಲಾಗುತ್ತಿದೆ. ಯಾವುದೇ ಯೋಜನೆಗೆ ವರ್ಷಗಟ್ಟಲೆ ಅವಧಿ ಬೇಕಾಗುತ್ತದೆ. ಇನ್ನು ಸುರಂಗ ಮಾಡಲು ಹೊರಟರೆ ಮುಂದಿನ ಪೀಳಿಗೆಗೆ ಆ ಯೋಜನೆ ಸಿಗಬಹುದು. ಒಬ್ಬ ಚಾಲಕ ಒಂದು ವಾರ ಸುರಂಗ ರಸ್ತೆಯಲ್ಲಿ ಹೋದರೆ, 20 ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದರು

ಕೇಂದ್ರ ಸಚಿವರ ಅನುಮತಿ ಕೇವಲ ವದಂತಿ

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕೇಂದ್ರ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಟನಲ್‌ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದರೆ ಸರ್ಕಾರ ಇದರಿಂದ ಹಿಂದೆ ಸರಿಯಲಿದೆಯೇ?, ಟನಲ್‌ ಯೋಜನೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅನುಮತಿ ಕೊಟ್ಟಿದ್ದಾರೆ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಯೋಜನೆ ಕುರಿತು ಖುದ್ದು ನಿತಿನ್‌ ಗಡ್ಕರಿ ಅವರಿಗೆ ಮಾಹಿತಿ ನೀಡಿದಾಗ ಇದಕ್ಕೆ ಅವರು ಆಶ್ಚರ್ಯ ವ್ಯಕ್ತಪಡಿಸಿದರು. ಒಂದು ವೇಳೆ ಅವರು ಅನುಮತಿ ನೀಡದಿದ್ದರೆ ನೀವು ಹಿಂದೆ ಸರಿಯುತ್ತೀರಾ? ಎಂದು ಪ್ರಶ್ನಿಸಿದರು.

ಇದೇ ವೇಳೆ ತೇಜಸ್ವಿ ಸೂರ್ಯ ಅವರು ಗಡ್ಕರಿ ಜೊತೆ ಮಾತುಕತೆ ನಡೆಸಿದ ವಿಡಿಯೊವನ್ನು ಸಾರ್ವಜನಿಕರ ಮುಂದೆ ಪ್ರದರ್ಶನ ಮಾಡಿದರು. ಟನಲ್‌ ರಸ್ತೆಯ ವಿರುದ್ಧ ನಾವು ವಿರೋಧ ಮಾಡಿದ್ದೇವೆ. ಈ ರಸ್ತೆ ಶ್ರೀಮಂತರಿಗೋಸ್ಕರ ಮಾಡಿರುವುದು. ಬೆಂಗಳೂರಿನಲ್ಲಿ ಶೇ.12ರಷ್ಟು ಜನರ ಬಳಿ ಮಾತ್ರ ಕಾರು ಇದೆ. ಟನಲ್‌ ರಸ್ತೆಯ ಪ್ರವೇಶ, ನಿರ್ಗಮನವು ಲಾಲ್‌ಬಾಗ್‌ ಪರಿಸರ ಹಾಳು ಮಾಡಲಿದೆ. ಯಾವ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ. ಈ ಯೋಜನೆ ಮಾಡಿ ಬೆಂಗಳೂರಿನ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಇಳಿಸಲು ಹೊರಟ್ಟಿದ್ದಾರೆ ಎಂದು ದೂರಿದರು.

Tags:    

Similar News