ಬೆಂಗಳೂರು ರಸ್ತೆಗುಂಡಿಗೆ ಡಿಕೆಶಿ ಏಕಾಧಿಪತ್ಯ, ಆಂತರಿಕ ರಾಜಕೀಯವೇ ಕಾರಣವೇ?
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾದ ಬಳಿಕ ಮೇಲೆ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ತಗಾದೆಯ ಮಾತುಗಳು ಕೇಳಿಬಂದವು. ನಗರದ ಜನಪ್ರತಿನಿಧಿಗಳ ನಡುವೆ ಸಾಮರಸ್ಯ ಕೊರತೆ ಇದ್ದು, ಇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.
ಸಿಲಿಕಾನ್ ಸಿಟಿ, ಐಟಿ ಹಬ್, ಉದ್ಯಾನ ನಗರಿ ಎಂದೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರು, ಇದೀಗ ರಸ್ತೆಗುಂಡಿಗಳ ನಗರವೆಂಬ ಅಪಖ್ಯಾತಿಗೆ ಗುರಿಯಾಗುತ್ತಿದೆ. ಕೋಟ್ಯಂತರ ರೂಪಾಯಿಗಳ ಅನುದಾನ ಹರಿದುಬರುತ್ತಿದ್ದರೂ, ನಗರದ ರಸ್ತೆಗಳು ಮಾತ್ರ ಸುಧಾರಣೆ ಕಾಣುತ್ತಿಲ್ಲ. ಐಟಿ ದಿಗ್ಗಜರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲರೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಸಮಸ್ಯೆಯ ಹಿಂದೆ ಕೇವಲ ಕಳಪೆ ಕಾಮಗಾರಿ ಮಾತ್ರವಲ್ಲ, ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ರಾಜಕೀಯ ಮತ್ತು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕಾರ್ಯವೈಖರಿಯೂ ಪ್ರಮುಖ ಕಾರಣವೆಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.
ಸಿಎಂ ಗಡುವು, ಡಿಸಿಎಂ ಮೌನ: ತೆರೆಮರೆಗೆ ಸರಿದ ಸಚಿವರ ಪಾತ್ರ?
ಐಟಿ ದಿಗ್ಗಜರಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಸೇರಿದಂತೆ ಸಾರ್ವಜನಿಕರ ತೀವ್ರ ಟೀಕೆಯ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಅಖಾಡಕ್ಕಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. "ಒಂದು ತಿಂಗಳೊಳಗೆ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಬೇಕು, ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ" ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಸಿಎಂ ಗಡುವು ನೀಡಿದ ನಂತರವೇ ಅಧಿಕಾರಿಗಳು ಎಚ್ಚೆತ್ತುಕೊಂಡು, ದಿನಕ್ಕೆ ಸಾವಿರಾರು ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಿದ್ದಾರೆ. ಆದರೆ, ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರು, ಮುಖ್ಯಮಂತ್ರಿ ಮಧ್ಯಪ್ರವೇಶಿಸುವವರೆಗೂ ಈ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಂಡಿರಲಿಲ್ಲ ಎಂಬ ಆರೋಪಗಳಿವೆ. ಇದು, ನಗರದ ಆಡಳಿತದಲ್ಲಿ ಅವರಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಕಾರ ಸಿಗುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.[1][2]
ಉಸ್ತುವಾರಿಗಾಗಿ ನಡೆದ ಹಗ್ಗಜಗ್ಗಾಟ: ರಾಮಲಿಂಗಾರೆಡ್ಡಿ vs ಡಿಕೆಶಿ
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಹಿರಿಯ ನಾಯಕ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಬಲ ಆಕಾಂಕ್ಷಿಯಾಗಿದ್ದರು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರು ಉಸ್ತುವಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಅವರಿಗೆ, ನಗರದ ಜನಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯವಿತ್ತು. ಬಿಜೆಪಿ, ಜೆಡಿಎಸ್ ಸೇರಿದಂತೆ ವಿಪಕ್ಷ ನಾಯಕರೊಂದಿಗೂ ಸಾಮರಸ್ಯದಿಂದ ಕೆಲಸ ಮಾಡಿ, ನಗರದ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಿದ್ದರು ಎಂಬ ಅಭಿಪ್ರಾಯವಿದೆ.
ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಪ್ರಭಾವ ಬಳಸಿ, ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಅಂದಿನಿಂದಲೇ ನಗರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮೇಲಾಟಗಳು ಆರಂಭವಾದವು ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಇತರ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ತಮ್ಮದೇ ಏಕಾಧಿಪತ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಅಸಮಾಧಾನ ಕಾಂಗ್ರೆಸ್‌ನಲ್ಲೇ ಇದೆ. ಬೆಂಗಳೂರಿನ ಮೇಲೆ ತಮ್ಮ ಸಂಪೂರ್ಣ ಹಿಡಿತ ಸಾಧಿಸುವ ಅವರ ಪ್ರಯತ್ನವೇ, ಅವರಿಗೆ ಸಹಕಾರದ ಕೊರತೆಗೆ ಕಾರಣವಾಗಿದೆ ಎಂದು ಹೆಸರೇಳಲಿಚ್ಛಸದ ಕಾಂಗ್ರೆಸ್ ನಾಯಕರೊಬ್ಬರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
ಕಾಮಗಾರಿ ಮೊತ್ತದಲ್ಲಿ ಹೆಚ್ಚಳ, ಗುಣಮಟ್ಟದಲ್ಲಿ ಕುಸಿತ: ಕಮಿಷನ್ ದಂಧೆಯ ಆರೋಪ
ಡಿ.ಕೆ.ಶಿವಕುಮಾರ್ ಅವರು ಉಸ್ತುವಾರಿ ಸಚಿವರಾದ ನಂತರ, ಕಾಮಗಾರಿಗಳ ಪ್ಯಾಕೇಜ್ ಮೊತ್ತದಲ್ಲಿ ಭಾರೀ ಹೆಚ್ಚಳವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿಂದೆ 10 ರಿಂದ 50 ಕೋಟಿ ರೂ. ಇರುತ್ತಿದ್ದ ಪ್ಯಾಕೇಜ್ ಮೊತ್ತ, ಇದೀಗ ಪ್ರತಿ ಪ್ಯಾಕೇಜ್‌ಗೆ 150 ಕೋಟಿ ರೂ.ಗೆ ಏರಿಕೆಯಾಗಿದೆ. ಇದರಲ್ಲಿ ಭಾರಿ ಪ್ರಮಾಣದ ಕಮಿಷನ್ ಪಡೆಯಲಾಗುತ್ತಿದ್ದು, ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಯಾಗುತ್ತಿದೆ. ಸ್ಥಳೀಯ ಗುತ್ತಿಗೆದಾರರ ಬದಲು, ನೆರೆ ರಾಜ್ಯ ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿರುವುದು ಕೂಡ ಗುಣಮಟ್ಟದ ಕುಸಿತಕ್ಕೆ ಕಾರಣ ಎಂದು ಪಾಲಿಕೆಯ ಮಾಜಿ ಸದಸ್ಯರೊಬ್ಬರು ಆರೋಪಿಸಿದ್ದಾರೆ.
ಮಾನ್ಸೂನ್ ಸಮಯದಲ್ಲಿ ಡಾಂಬರೀಕರಣ ಮಾಡಬಾರದು ಎಂಬ ನಿಯಮವಿದ್ದರೂ, ಅದನ್ನು ಪಾಲಿಸುತ್ತಿಲ್ಲ. ಕಾಮಗಾರಿಗೆ ಬಳಸುವ ಕಚ್ಚಾ ವಸ್ತುಗಳ ಗುಣಮಟ್ಟವನ್ನು ಅಧಿಕಾರಿಗಳು ಪರೀಕ್ಷಿಸುತ್ತಿಲ್ಲ. ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ, ಡಾಂಬರೀಕರಣ ನಡೆದ ಕೆಲವೇ ದಿನಗಳಲ್ಲಿ ರಸ್ತೆಯನ್ನು ಮತ್ತೆ ಅಗೆಯಲಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡುತ್ತಿದೆ.
ಡಿಕೆಶಿ ಬದಲಾವಣೆಗೆ ಪತ್ರ: ಮುಂದುವರಿದ ಅಸಮಾಧಾನ
ಕೆಲ ತಿಂಗಳ ಹಿಂದೆ, ಬಿಜೆಪಿ ಶಾಸಕ ಮುನಿರತ್ನ ಅವರು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮತ್ತು ದ್ವೇಷದ ರಾಜಕಾರಣದ ಆರೋಪ ಮಾಡಿ, ಡಿ.ಕೆ.ಶಿವಕುಮಾರ್ ಅವರನ್ನು ಉಸ್ತುವಾರಿ ಸಚಿವ ಸ್ಥಾನದಿಂದ ಬದಲಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಒಟ್ಟಿನಲ್ಲಿ, ಬೆಂಗಳೂರಿನ ರಸ್ತೆಗುಂಡಿಗಳ ಸಮಸ್ಯೆಯು ಕೇವಲ ಆಡಳಿತಾತ್ಮಕ ವೈಫಲ್ಯವಾಗಿ ಉಳಿದಿಲ್ಲ. ಇದು ಸರ್ಕಾರದೊಳಗಿನ ಅಧಿಕಾರಕ್ಕಾಗಿನ ಹೋರಾಟ, ಸಮನ್ವಯದ ಕೊರತೆ ಮತ್ತು ಭ್ರಷ್ಟಾಚಾರದ ಆರೋಪಗಳ ಸಂಕೀರ್ಣ ಜಾಲವಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿಗಳ ಗಡುವಿನಂತೆ ರಸ್ತೆಗಳು ತಾತ್ಕಾಲಿಕವಾಗಿ ಸುಧಾರಣೆ ಕಾಣಬಹುದಾದರೂ, ಈ ಆಂತರಿಕ ರಾಜಕೀಯ ಕಚ್ಚಾಟಗಳಿಗೆ ಪರಿಹಾರ ಸಿಗದಿದ್ದರೆ, ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದು ಅಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.