ಮಂಗಳೂರು ಜೈಲು ಮೇಲೆ ಪೊಲೀಸ್ ದಾಳಿ: ಮೊಬೈಲ್, ಡ್ರಗ್ಸ್ ಪತ್ತೆ
ಪಶಪಡಿಸಿಕೊಂಡ ವಸ್ತುಗಳನ್ನು ಜೈಲಿಗೆ ಯಾವ ರೀತಿಯ ಕಳ್ಳಸಾಗಣೆ ಮಾಡಲಾಗಿದೆ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಹೇಳಿದ್ದಾರೆ.;
ಮಂಗಳೂರು ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ಗುರುವಾರ ಬೆಳಂಬೆಳಿಗ್ಗೆ ದಾಳಿ ನಡೆಸಿದ್ದು, ವಿಚಾರಣಾಧೀನ ಕೈದಿಗಳಿಂದ 25 ಮೊಬೈಲ್ ಫೋನ್‌ಗಳು, ಒಂದು ಬ್ಲೂಟೂತ್ ಸಾಧನ, ಐದು ಇಯರ್‌ಫೋನ್‌ಗಳು, ಒಂದು ಪೆನ್ ಡ್ರೈವ್, ಐದು ಚಾರ್ಜರ್‌ಗಳು, ಮೂರು ಜೊತೆ ಕತ್ತರಿ, ಮೂರು ಕೇಬಲ್‌ಗಳು, ಗಾಂಜಾ ಪ್ಯಾಕೆಟ್‌ಗಳು ಮತ್ತು ಇತರ ಮಾದಕವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ದಾಳಿಯ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿದ್ದು, ಬೆಳಿಗ್ಗೆ 4 ಗಂಟೆಗೆ ಜಿಲ್ಲಾ ಕಾರಾಗೃಹದ ಮೇಲೆ ದಾಳಿ ಆರಂಭವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ. 2 ಡಿಸಿಪಿಗಳು, 3 ಎಸಿಪಿಗಳು, 15 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಸುಮಾರು 150 ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಏಕಕಾಲದಲ್ಲಿ ಜೈಲಿನ ಎಲ್ಲಾ ಬ್ಲಾಕ್‌ಗಳನ್ನು ಕವರ್ ಮಾಡಲು ಬಹು ತಂಡಗಳನ್ನು ರಚಿಸಲಾಗಿತ್ತು ಎಂದು ಆಯುಕ್ತರು ಮಾಹಿತಿ ನೀಡಿದರು.
ಈ ಕಾರ್ಯಾಚರಣೆಯು ಜೈಲಿನೊಳಗೆ ಭದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಇಲಾಖೆಯ ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಅನುಪಮ್ ಅಗರವಾಲ್ ಹೇಳಿದ್ದಾರೆ. ಇನ್ನು ಜೈಲಿನಿಂದ ವಶಪಡಿಸಿಕೊಳ್ಳಲಾದ ವಸ್ತುಗಳು ಜೈಲಿಗೆ ಹೇಗೆ ಕಳ್ಳಸಾಗಣೆಯಾಗಿವೆ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.