Mobile APP | ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮೊಬೈಲ್ ಆ್ಯಪ್ ಬಿಡುಗಡೆ

ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್​ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು​​ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು.;

Update: 2025-05-12 09:39 GMT

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹೊಸ ಮೊಬೈಲ್ ಆ್ಯಪ್‌ ಮತ್ತು ಪೋರ್ಟಲ್ ಬಿಡುಗಡೆ ಮಾಡಿದೆ.

ಸೋಮವಾರ ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್​​ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು. 

ಕಾಲೇಜು ಪೋರ್ಟಲ್

ಅಭ್ಯರ್ಥಿಗಳು ಆಪ್ಷನ್ ದಾಖಲಿಸುವುದಕ್ಕೂ ಮುನ್ನ ಕಾಲೇಜು ಆಯ್ಕೆ ಪ್ರಮುಖ ಘಟ್ಟ. ಅಂತಹ ಸಂದರ್ಭದಲ್ಲಿ ಅಲ್ಲಿ- ಇಲ್ಲಿ ಕೇಳಿ ಪಡೆಯುವುದರ ಬದಲು ಕಾಲೇಜು ಪೋರ್ಟಲ್‌ನಲ್ಲೇ ಸಂಬಂಧಪಟ್ಟ ಕಾಲೇಜಿನ ಮಾಹಿತಿ ಲಭ್ಯವಾಗುವ ಹಾಗೆ ಮಾಡಲಾಗಿದೆ. ಇದನ್ನು ಕಾಲೇಜಿನವರೇ ಅಪ್‌ಲೋಡ್‌ ಮಾಡಲು ಅವಕಾಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಕಾಲೇಜುಗಳಲ್ಲಿನ ಮೂಲಸೌಲಭ್ಯ, ಶೈಕ್ಷಣಿಕ ವಾತಾವರಣ, ಪ್ರಯೋಗಾಲಯ, ಗ್ರಂಥಾಲಯ, ಕೊಠಡಿ, ಹಾಸ್ಟೆಲ್, ಕೋರ್ಸ್‌ವಾರು ಶುಲ್ಕದ ವಿವರ, ಅತಿಥಿ ಉಪನ್ಯಾಸಕರು ಸೇರಿದಂತೆ ಕಾಯಂ ಸಿಬ್ಬಂದಿಯ ಮಾಹಿತಿ ಇತ್ಯಾದಿ ಪೂರ್ಣ ವಿವರಗಳು ಪೋರ್ಟಲ್‌ನಲ್ಲಿ ಲಭ್ಯ ಇರುತ್ತವೆ. ಎಷ್ಟೋ ಮಂದಿ ಕಾಲೇಜಿನ ಮಾಹಿತಿ ಇಲ್ಲದೆ, ಆಪ್ಫನ್‌ ದಾಖಲಿಸಿ, ನಂತರ ಸೀಟು ಸಿಕ್ಕಿದ ಮೇಲೆ, ಅಯ್ಯೊ ಅದು ಸರಿ ಇಲ್ಲ; ಮತ್ತೊಂದು ಕಡೆ ಸೀಟು ಕೊಡಿ ಎನ್ನುವುದು ಮಾಮೂಲ. ಹೀಗಾಗಿ ಈ ರೀತಿಯ ಹೊಸ ಉಪಕ್ರಮ ಸೂಕ್ತ ಕಾಲೇಜುಗಳ ಆಯ್ಕೆಗೆ ನೆರವಾಗಲಿದೆ ಎಂದರು.

ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ದೂರು ದಾಖಲಿಸುವುದಕ್ಕೂ ಇದೇ ಪೋರ್ಟಲ್‌ನಲ್ಲಿ ಲಿಂಕ್‌ ನೀಡುವ ಉದ್ದೇಶವೂ ಇದೆ. ನೇರವಾಗಿ ಶುಲ್ಕ ನಿಯಂತ್ರಣ ಸಮಿತಿಗೆ ದೂರು ಹೋಗುವ ಹಾಗೆ ಮಾಡಲಾಗುವುದು ಎಂದು ಅವರು ಹೇಳಿದರು.

ಕೆಇಎ ಮೊಬೈಲ್ ಆ್ಯಪ್ 

ಇದೇ ಮೊದಲ ಬಾರಿಗೆ ಮತ್ತಷ್ಟು ವಿದ್ಯಾರ್ಥಿ ಸ್ನೇಹಿಯಾಗುವ ಉಪಕ್ರಮದ ಭಾಗವಾಗಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಸಾಮಾನ್ಯವಾಗಿ ಯುವಕರು ಆ್ಯಪ್ ಬಳಕೆ ಸ್ನೇಹಿಯಾಗಿರುತ್ತಾರೆ. ಹೀಗಾಗಿ ಈ ಇದನ್ನು ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವೆಬ್ ಸೈಟ್ ನಲ್ಲಿ ಲಭ್ಯವಾಗುವ ಎಲ್ಲ ಮಾಹಿತಿ ಈ ಆ್ಯಪ್ ನಲ್ಲಿ ಲಭ್ಯ ಇರುತ್ತದೆ. ಆ್ಯಪ್ ಮೂಲಕವೇ ಅರ್ಜಿ ಹಾಕುವುದು, ಆಪ್ಷನ್ ದಾಖಲಿಸುವುದು, ಛಾಯ್ಸ್ ಆಯ್ಕೆ, ಶುಲ್ಕ ಪಾವತಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಮಾಡಬಹುದು. ಆ್ಯಪ್ ಡೌನ್‌ಲೋಡ್ ಮಾಡಿಕೊಂಡವರಿಗೆ ಕಾಲಕಾಲಕ್ಕೆ ಅಲರ್ಟ್ ಸಂದೇಶ ಕಳುಹಿಸುವ ವ್ಯವಸ್ಥೆ ಕೂಡ ಇರುತ್ತದೆ. ಗ್ರಾಮೀಣ ಭಾಗದ ಬಹುತೇಕ ಮಕ್ಕಳು ಸಿಇಟಿ ಅರ್ಜಿ ಭರ್ತಿ ಹಾಗೂ ಅನ್ ಲೈನ್ ಸೀಟು ಹಂಚಿಕೆ ಸಂಬಂಧದ ಪ್ರಕ್ರಿಯೆಗೆ ಸೈಬರ್ ಸೆಂಟರ್ ಗಳ ಮೇಲೆ ಹೆಚ್ವು ಅವಲಂಬನೆಯಾಗಿ ಅನೇಕ ತಪ್ಪುಗಳನ್ನು ಮಾಡಿಕೊಂಡು ಪರದಾಡುವ ಪರಿಸ್ಥಿತಿ ಇತ್ತು. ಹೀಗಾಗಿಯೇ ಇದಕ್ಕೊಂದು ಪರಿಹಾರವಾಗಿ ಮೊಬೈಲ್ ಆ್ಯಪ್ ರೂಪಿಸಿದ್ದು, ಬಹುತೇಕ ಎಲ್ಲ ಪ್ರಕ್ರಿಯೆಗಳನ್ನೂ ಅಭ್ಯರ್ಥಿಗಳೇ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಕೆಇಎ ಚಾಟ್ ಬಾಟ್

ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನ ಚಾಟ್ ಬಾಟ್ ವ್ಯವಸ್ಥೆ ಬಳಸಿ ಅಭ್ಯರ್ಥಿಗಳು ತಮ್ಮ ಪ್ರಶ್ನೆ, ಅನುಮಾನಗಳಿಗೆ ನೇರವಾಗಿ ಉತ್ತರ ಪಡೆಯಲು ಸಾಧ್ಯವಾಗುತ್ತದೆ. ಪ್ರಾಯೋಗಿಕವಾಗಿ ಆರಂಭಿಸಿದ ನಂತರ ಇದುವರೆಗೂ 1.35 ಲಕ್ಷ ಅಭ್ಯರ್ಥಿಗಳು ಇದರ ಮೂಲಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿರುವುದು ಇದು ಎಷ್ಟು ಉಪಯುಕ್ತ ಎನ್ನುವುದನ್ನು ತೋರಿಸುತ್ತದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಇಎ ಪ್ರಕಟಿಸುವ ಎಲ್ಲ ಮಾಹಿತಿಯನ್ನು ಚಾಟ್ ಬಾಟ್ ವ್ಯವಸ್ಥೆಗೆ ಅಪ್ ಲೋಡ್ ಮಾಡಲಾಗುತ್ತದೆ. ಅಭ್ಯರ್ಥಿಗಳು ತಾವು ಏನನ್ನು ಕೇಳಬೇಕೋ ಅದನ್ನು ಟೈಪ್ ಮಾಡಿದರೆ, ಅಪ್‌ಲೋಡ್‌ ಮಾಡಲಾಗಿರುವ ಮಾಹಿತಿ ಆಧರಿಸಿ ಚಾಟ್ ಬಾಟ್ ಉತ್ತರ ಒದಗಿಸುತ್ತದೆ. ಇದರಿಂದ ಮಾಹಿತಿಗಾಗಿ ಕೆಇಎ ಕಚೇರಿಗೆ ಖುದ್ದು ಬರುವುದಾಗಲಿ ಅಥವಾ ಇತರ ಕಚೇರಿಗಳಿಗೆ ಅಲೆಯುವುದಾಗಲಿ ತಪ್ಪುತ್ತದೆ. ಕುಳಿತಲ್ಲೇ‌ ಮಾಹಿತಿ ಪಡೆಯಲು ನೆರವಾಗುತ್ತದೆ ಎಂದು ಸಚಿವರು ವಿವರಿಸಿದರು.

ಸದ್ಯ ಈ ಹೊಸ ವ್ಯವಸ್ಥೆ ಕೇವಲ ಇಂಗ್ಲಿಷ್ ನಲ್ಲಿ ಉತ್ತರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಮಾಹಿತಿ ಸಿಗುವ ಹಾಗೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ತಿಂಗಳೊಳಗೆ ಕನ್ನಡದ ಅವತರಣಿಕೆ ಕೂಡ ಆರಂಭಿಸಲಾಗುತ್ತದೆ. ಬಿಎಸ್‌ಎನ್‌ಎಲ್‌ ಇದರ ನಿರ್ವಹಣೆ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸೈಬರ್ ಸೆಂಟರ್​​ನಲ್ಲಿ ತಪ್ಪಾಗಿ ಅರ್ಜಿ ಸಲ್ಲಿಸಿ ಅಭ್ಯರ್ಥಿಗಳು ಪರದಾಡುತ್ತಿದ್ದರು. ಇದೇ ಕಾರಣದಿಂದ ಅರ್ಹರಿಗೆ ಸಿಇಟಿ ಸೀಟ್‌ ಕೈತಪ್ಪಿ ಹೋಗುತ್ತಿತ್ತು.  ಹಾಗಾಗಿ ಕೆಇಎ ಮೊಬೈಲ್ ಆ್ಯಪ್, ಚಾಟ್ ಬಾಟ್ ಮತ್ತು ಪೊರ್ಟಲ್ ಬಿಡುಗಡೆ ಮಾಡಿದೆ.

ಹೊಸ ಮೊಬೈಲ್​ ಆ್ಯಪ್​ನಿಂದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.​​ ಸಿಇಟಿ ಪರೀಕ್ಷೆಯ ಸಮಸ್ಯೆಗಳು, ಕಾಲೇಜುಗಳ ಸಮಗ್ರ ಮಾಹಿತಿ, ಆಯ್ಕೆ ಮಾಡುವ ಎಂಜಿನಿಯರಿಂಗ್‌ ಕಾಲೇಜು, ಶುಲ್ಕದ ವಿವರ, ಆ ಕಾಲೇಜಿನಲ್ಲಿ ವಿದ್ಯಾರ್ಥಿನಿಲಯದ ಶುಲ್ಕ, ಇತರೆ ಸೌಲಭ್ಯಗಳು ಏನಿವೆ ಎಂಬ ಮಾಹಿತಿಯನ್ನು ಆ್ಯಪ್ ಒದಗಿಸಲಿದೆ. ಇದಲ್ಲದೇ ಕೆಇಎ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Tags:    

Similar News