ವಿಧಾನ ಪರಿಷತ್ ಚುನಾವಣೆ | ಬಿಜೆಪಿ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಸಿಎಂ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಹಾಲಿ ಸಚಿವ ಎನ್.ಎಸ್.ಭೋಸರಾಜು ಸೇರಿ 8 ಮಂದಿಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಸಿಎಂ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿ ಒಟ್ಟು ಏಳು ಮಂದಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಚಿವ ಎನ್.ಎಸ್. ಬೋಸರಾಜು, ವಸಂತ ಕುಮಾರ್, ಯತೀಂದ್ರ ಸಿದ್ದರಾಮಯ್ಯ, ಕೆ.ಗೋವಿಂದರಾಜು, ಐವನ್ ಡಿಸೋಜಾ, ಬಿಲ್ಕಿಸ್ ಬಾನೋ, ಜಗದೇವ ಗುತ್ತೇದಾರ್ ಸೇರಿ ಏಳು ಅಭ್ಯರ್ಥಿಗಳು ಇದ್ದಾರೆ.
ಹಾಗೆಯೇ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಪರಿಷತ್ ಸ್ಥಾನಕ್ಕೆ ಬಸನಗೌಡ ಬಾದರ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ (ಜೂ.3) ಕೊನೆಯ ದಿನವಾಗಿದ್ದು, ಈ ಹಿನ್ನೆಯಲ್ಲಿ ಇಂದೇ 8 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಇನ್ನು ಜೂನ್ 13ರಂದು ವಿಧಾನಪರಿಷತ್‌ನ 11 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಸಮುದಾಯಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಒಕ್ಕಲಿಗ ಸಮುದಾಯದಿಂದ ಈಗಿರುವ ಗೋವಿಂದರಾಜ್ ಅವರನ್ನೇ ಮತ್ತೊಂದು ಅವಧಿಗೆ ಮುಂದುವರಿಸಿದೆ. ಒಬಿಸಿ ಸಮುದಾಯದಿಂದ ಯತೀಂದ್ರ ಸಿದ್ದರಾಮಯ್ಯ, ಪರಿಶಿಷ್ಟ ಜಾತಿ ಸಮುದಾಯದಿಂದ ವಸಂತಕುಮಾರ್, ರೆಡ್ಡಿ ಸಮುದಾಯದಿಂದ ಹಾಲಿ ಸಚಿವ ಎನ್ಎಸ್ ಬೋಸರಾಜು, ಜಗದೇವ್ ಗುತ್ತೇದಾರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಇನ್ನು ಏಳು ಸ್ಥಾನಗಳಿಗೆ ನೂರಾರು ಮಂದಿ ಆಕಾಂಕ್ಷಿಗಳು ಇದ್ದರು. ಕಾಂಗ್ರೆಸ್‌ಗೆ ಲಭಿಸುವ ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾದ ಹಿನ್ನೆಲೆಯಲ್ಲಿ ಶಾರ್ಟ್ ಲಿಸ್ಟ್ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿ, ಹೈ ಕಮಾಂಡ್ ನಾಯಕರೊಂದಿಗೆ ಚರ್ಚಿಸಿದ್ದರು. ಇದೀಗ ಕಾಂಗ್ರೆಸ್ ಹೈಕಮಾಂಡ್ 7 ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.