ಶಾಸಕ ವೀರೇಂದ್ರ ಪಪ್ಪಿಯ ಅಕ್ರಮ ಬೆಟ್ಟಿಂಗ್ ಪ್ರಕರಣ: ವಕೀಲ ಅನಿಲ್ ಗೌಡ ವಿರುದ್ಧದ ಇ.ಡಿ ಸಮನ್ಸ್‌ಗೆ ತಡೆ
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ, ಅನಿಲ್ ಗೌಡ ಅವರಿಗೆ ಮಧ್ಯಂತರ ರಕ್ಷಣೆ ನೀಡಿ ಈ ಆದೇಶ ಹೊರಡಿಸಿದೆ.;
ಕರ್ನಾಟಕ ಹೈಕೋರ್ಟ್
ಆನ್‌ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ವಕೀಲ ಎಚ್. ಅನಿಲ್ ಗೌಡ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಜಾರಿಗೊಳಿಸಿದ್ದ ಸಮನ್ಸ್‌ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ. ಅಲ್ಲದೆ, ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ರಕ್ಷಣೆ ನೀಡಿದೆ.
ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರ ಗೆಳೆಯ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರರಾಗಿರುವ ವಕೀಲ ಅನಿಲ್ ಗೌಡ ಅವರು, ತಮಗೆ ಇ.ಡಿ ಜಾರಿಗೊಳಿಸಿದ್ದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ, ಅನಿಲ್ ಗೌಡ ಅವರಿಗೆ ಮಧ್ಯಂತರ ರಕ್ಷಣೆ ನೀಡಿ ಈ ಆದೇಶ ಹೊರಡಿಸಿದೆ.
ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದ
ಅನಿಲ್ ಗೌಡ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಪಹ್ವಾ, "ಅನಿಲ್ ಗೌಡ ವೃತ್ತಿಯಲ್ಲಿ ವಕೀಲರಾಗಿದ್ದು, ತಮ್ಮ ಕಕ್ಷಿದಾರ ಕೆ.ಸಿ. ವೀರೇಂದ್ರ ಅವರಿಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ವೀರೇಂದ್ರ ಅವರ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆಯೇ ಹೊರತು, ಕಂಪನಿಯ ದೈನಂದಿನ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲ. ಆದರೆ, ಇ.ಡಿ ರಾಜಕೀಯ ಪ್ರೇರಿತವಾಗಿ ಮತ್ತು ದುರುದ್ದೇಶದಿಂದ ಸಮನ್ಸ್ ಜಾರಿ ಮಾಡಿದೆ," ಎಂದು ವಾದಿಸಿದರು.
ಜಾರಿ ನಿರ್ದೇಶನಾಲಯವು ತನ್ನ ವಾದವನ್ನು ಮಂಡಿಸುತ್ತಾ, "ಅನಿಲ್ ಗೌಡ ಅವರಿಗೆ ವಕೀಲರಾಗಿದ್ದಕ್ಕಾಗಿ ಸಮನ್ಸ್ ನೀಡಿಲ್ಲ, ಬದಲಿಗೆ ಉದ್ಯಮದಲ್ಲಿ ಪಾಲುದಾರರಾಗಿದ್ದರಿಂದ ಅವರ ಹೇಳಿಕೆ ದಾಖಲಿಸಲು ಕರೆಯಲಾಗಿದೆ. 'ಕ್ಯಾಸಲ್ ರಾಕ್' ಸಂಸ್ಥೆಯಲ್ಲಿ ವೀರೇಂದ್ರ ಅವರು ಶೇ. 35ರಷ್ಟು ಮತ್ತು ಅನಿಲ್ ಗೌಡ ಅವರು ಶೇ. 15ರಷ್ಟು ಷೇರು ಹೊಂದಿದ್ದಾರೆ. ಅನಿಲ್ ಗೌಡರಿಂದ ವಶಪಡಿಸಿಕೊಂಡ ಲ್ಯಾಪ್‌ಟಾಪ್‌ನಲ್ಲಿ, ಶೇ. 5ರಷ್ಟು ಲಾಭಾಂಶ ಅಂದರೆ 29 ಕೋಟಿ ರೂಪಾಯಿ ಪಡೆದಿರುವ ಬಗ್ಗೆ ಮಾಹಿತಿ ಇದೆ," ಎಂದು ನ್ಯಾಯಾಲಯಕ್ಕೆ ತಿಳಿಸಿತು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ, "ವಕೀಲರಿಗೆ ಸಮನ್ಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಈ ಹಿನ್ನೆಲೆಯಲ್ಲಿ, ಅನಿಲ್ ಗೌಡ ಅವರು ಮಧ್ಯಂತರ ರಕ್ಷಣೆಗೆ ಅರ್ಹರಾಗಿದ್ದಾರೆ," ಎಂದು ಅಭಿಪ್ರಾಯಪಟ್ಟಿತು.
"ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರವು ನಿರ್ಧಾರವಾಗುವವರೆಗೆ, ಜಾರಿ ನಿರ್ದೇಶನಾಲಯವು ಅನಿಲ್ ಗೌಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 50 ಅನ್ನು ಅನ್ವಯಿಸಬಾರದು ಮತ್ತು ಯಾವುದೇ ಬಲವಂತದ ಕ್ರಮಗಳಿಂದ ದೂರವಿರಬೇಕು," ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.