ಕುಡಿಯುವ ನೀರಿನ ದುರ್ಬಳಕೆ | ಲಕ್ಷ ರೂ. ದಂಡ ಸಂಗ್ರಹಿಸಿದ ಜಲ ಮಂಡಳಿ

ಯೋಗ್ಯ ನೀರನ್ನು ಪೋಲು ಮಾಡಿ ನಿಯಮವನ್ನು ಉಲ್ಲಂಘಿಸಿದಕ್ಕಾಗಿ 22 ಮನೆಗಳಿಂದ ರೂ 1.1 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ.

Update: 2024-03-25 14:06 GMT
ನಿಯಮವನ್ನು ಉಲ್ಲಂಘಿಸಿದಕ್ಕಾಗಿ 22 ಮನೆಗಳಿಂದ ರೂ 1.1 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ.
Click the Play button to listen to article

ಬೆಂಗಳೂರು: ನಗರದಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸುವುದಕ್ಕೆ ನಿರ್ಬಂಧ ವಿಧಿಸಿರುವ ಹೊರತಾಗಿಯೂ ಯೋಗ್ಯ ನೀರನ್ನು ಕಾರು ತೊಳೆಯಲು, ಗಿಡಗಳಿಗೆ ಬಳಸಿ ನಿಯಮವನ್ನು ಉಲ್ಲಂಘಿಸಿದಕ್ಕಾಗಿ 22 ಮನೆಗಳಿಂದ ರೂ 1.1 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆ ತಿಳಿಸಿದೆ.

ನಗರದಲ್ಲಿ ವಾಹನಗಳ ತೊಳೆಯಲು, ತೋಟಗಾರಿಕೆಗಾಗಿ, ಕಟ್ಟಡ ನಿರ್ಮಾಣಕ್ಕಾಗಿ, ಕಾರಂಜಿಗಳಿಗೆ, ಮನರಂಜನಾ ಉದ್ದೇಶಗಳಿಗಾಗಿ, ಸಿನಿಮಾ ಹಾಲ್‌ಗಳು ಮತ್ತು ಮಾಲ್‌ಗಳಲ್ಲಿ ಕುಡಿಯುವ ನೀರಿನ ಬಳಕೆಗೆ ಮತ್ತು ರಸ್ತೆ ನಿರ್ಮಾಣ ಮತ್ತು ರಸ್ತೆ ಸ್ವಚ್ಛತೆಗೆ ನೀರನ್ನು ಬಳಸುವುದನ್ನು ಜಲ ಮಂಡಳಿಯು ಮಾರ್ಚ್ 7 ರಂದು ಹೊರಡಿಸಿದ್ದ ಆದೇಶದಲ್ಲಿ ನಿಷೇಧಿಸಿತ್ತು. ಶುದ್ಧೀಕರಿಸಿದ ನೀರನ್ನು ಬಳಸಲು ಬಿಲ್ಡರ್‌ಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು.

ಕಳೆದ ಶುಕ್ರವಾರ (ಮಾರ್ಚ್ 22), ಶನಿವಾರ (ಮಾರ್ಚ್ 23) ಹಾಗೂ ಭಾನುವಾರ (ಮಾರ್ಚ್ 24) ಮೂರು ದಿನಗಳಲ್ಲಿ ನೀರನ್ನು ದುರ್ಬಳಕೆ ಮಾಡಿಕೊಂಡಿರುವವರನ್ನು ಗುರುತಿಸಿ 22 ಪ್ರಕರಣಗಳನ್ನು ದಾಖಲಸಿಕೊಂಡಿದ್ದು, ದಂಡವನ್ನು ವಿಧಿಸಲಾಗಿದೆ. 22 ಕುಟುಂಬಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 5,000 ರೂ. ದಂಡ ವಿಧಿಸಿರುವುದಾಗಿ ವರದಿಯಾಗಿದೆ.

ಟೋಲ್-ಫ್ರೀ ಸಂಖ್ಯೆ

ನಗರದಲ್ಲಿ ನೀರಿನ ದುರ್ಬಳಕೆಯ ಬಗ್ಗೆ ದೂರು ನೀಡಲು ಮಂಡಳಿಯು ಕಾಲ್ ಸೆಂಟರ್ (ಟೋಲ್-ಫ್ರೀ ಸಂಖ್ಯೆ 1916) ಸಹ ಸ್ಥಾಪಿಸಿದೆ. ಕೆರೆಗಳಲ್ಲಿ ನೀರು ಇಲ್ಲದಿರುವುದು ಕೂಡ ಅಂತರ್ಜಲದ ಕುಸಿತಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟ ನಂತರ ಮಂಡಳಿಯು ಸಂಸ್ಕರಿಸಿದ ನೀರಿನಿಂದ ಕೆರೆಗಳನ್ನು ತುಂಬುವ ಕೆಲಸವನ್ನೂ ಆರಂಭಿಸಿದೆ.

ನಗರದಲ್ಲಿ ಕಡಿಮೆ ಮಳೆ ಮತ್ತು ಅತಿಯಾದ ಕಾಂಕ್ರಿಟೀಕರಣವು ಅಂತರ್ಜಲವನ್ನು ಗಣನೀಯವಾಗಿ ಕ್ಷೀಣಿಸಿದೆ. ಬೆಂಗಳೂರು ಪ್ರಸ್ತುತ 110 ಗ್ರಾಮಗಳಲ್ಲಿ ಅದರಲ್ಲೂ ವಿಶೇಷವಾಗಿ ವರ್ತೂರು, ಬೆಳ್ಳಂದೂರು, ಹೂಡಿ ಮತ್ತು ಮಾರತ್ತಹಳ್ಳಿಯಂತಹ ಪೂರ್ವ ಪ್ರದೇಶಗಳಲ್ಲಿ ಅಂತರ್ಜಲ ಪೂರೈಕೆಯ ಕೊರತೆಯನ್ನು ಎದುರಿಸುತ್ತಿದೆ.

Tags:    

Similar News