ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ ಪರವಾಗಿ ರದ್ದು: ಸಚಿವ ತಂಗಡಗಿ ಎಚ್ಚರಿಕೆ
ರಸಗೊಬ್ಬರ ಪೂರೈಕೆ ಬಗ್ಗೆ ರೈತರು ಆತಂಕ ಪಡಬೇಕಾಗಿಲ್ಲ. ತಮ್ಮ ಅವಶ್ಯಕತೆ ತಕ್ಕಂತೆ ರಸಗೊಬ್ಬರ ತೆಗೆದುಕೊಳ್ಳಬೇಕು. ಆತಂಕಕ್ಕೆ ಒಳಗಾಗಿ ಮೊದಲೆ ರಸಗೊಬ್ಬರ ಸಂಗ್ರಹಕ್ಕೆ ಮುಂದಾಗುವ ಅಗತ್ಯವಿಲ್ಲ.;
ಸಚಿವ ಶಿವರಾಜ ತಂಗಡಗಿ
ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ ಅಂಗಡಿಗಳ ಪರವಾನಗಿ ರದ್ದುಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್. ತಂಗಡಗಿ ಎಚ್ಚರಿಕೆ ನೀಡಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಸಗೊಬ್ಬರ ಮಾರಾಟಗಾರರು ಅನಧಿಕೃತವಾಗಿ ರಸಗೊಬ್ಬರವನ್ನು ದಾಸ್ತಾನು ಮಾಡಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದು ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಅಂಗಡಿಗಳ ಮುಂದೆ ರೈತರು ಸಾಲುಗಟ್ಟಿ ನಿಲ್ಲುವಂತೆ ಮಾಡಿ ಬೇಡಿಕೆ ಹೆಚ್ಚಾಗಿದೆ ಎನ್ನುವಂತೆ ಬಿಂಬಿಸುವ ಕೆಲಸ ಮಾಡುವುದನ್ನು ಸಹಿಸುವುದಿಲ್ಲ ಎಂದರು.
ಜಿಲ್ಲೆಯಲ್ಲಿ ರಸಗೊಬ್ಬರ ಸುಸೂತ್ರವಾಗಿ ವಿತರಣೆಯಾಗುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿಗಾವಹಿಸಲಿದ್ದು, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌ಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನೊಳಗೊಂಡು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ರಸಗೊಬ್ಬರ ಪೂರೈಕೆ ಬಗ್ಗೆ ರೈತರು ಆತಂಕ ಪಡಬೇಕಾಗಿಲ್ಲ. ತಮ್ಮ ಅವಶ್ಯಕತೆ ತಕ್ಕಂತೆ ರಸಗೊಬ್ಬರ ತೆಗೆದುಕೊಳ್ಳಬೇಕು. ಆತಂಕಕ್ಕೆ ಒಳಗಾಗಿ ಮೊದಲೆ ರಸಗೊಬ್ಬರ ಸಂಗ್ರಹಕ್ಕೆ ಮುಂದಾಗುವ ಅಗತ್ಯವಿಲ್ಲ. ಜುಲೈ 31 ರವರೆಗೆ 800 ಮೆಟ್ರಿಕ್ ಟನ್ ಹಾಗೂ ಆಗಸ್ಟ್ 1ರಿಂದ 3ರವರೆಗೆ 1200 ಮೆಟ್ರಿಕ್ ಟನ್ ರಸಗೊಬ್ಬರ ಜಿಲ್ಲೆಗೆ ಬರಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ನಕಲಿ ಗೊಬ್ಬರ ಮಾರಾಟ ಮಾಡಿದರೆ ಸಹಿಸುವುದಿಲ್ಲ. ಈಗಾಗಲೇ ಒಂದು ನಕಲಿ ಗೊಬ್ಬರ ಮಾರಾಟ ಪ್ಯಾಕ್ಟರಿ ಬಂದ್ ಮಾಡಲಾಗಿದೆ. ರೈತರಿಗೆ ಹಾನಿಯಾದರೆ ನಾವು ಸಹಿಸಿಕೊಳ್ಳುವುದಿಲ್ಲ. ರೈತರು ಯಾರು ಜಿಲ್ಲೆಯಲ್ಲಿ ಆತಂಕ ಪಡಬೇಕಿಲ್ಲ. ಆಗಸ್ಟ್ ತಿಂಗಳಲ್ಲಿ ನಮಗೆ ಸಾಕಾಗುವಷ್ಟು ರಸಗೊಬ್ಬರ ಜಿಲ್ಲೆಗೆ ಬರಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.