ತೆರೆದ ಕೊಳವೆ ಬಾವಿಗಳ ಸರ್ವೆ ನಡೆಸಲು ಸಚಿವ ಎಂ.ಬಿ ಪಾಟೀಲ್ ಸೂಚನೆ
ಕೊಳವೆ ಬಾವಿಗಳ ಸರ್ವೆಗೆ ಸಚಿವ ಎಂ. ಬಿ ಪಾಟೀಲ್ ನಿರ್ದೇಶನ ನೀಡಿದ್ದಾರೆ. ಬೋರ್‌ವೆಲ್‌ಗಳನ್ನು ಮುಚ್ಚದವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.;
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ 14 ತಿಂಗಳ ಮಗು ಸಾತ್ವಿಕ್ (Satvik ) ಬಿದ್ದ ಘಟನೆ ನಡೆದ ಬೆನ್ನಲ್ಲೇ ಕೊಳವೆ ಬಾವಿಗಳ ಸರ್ವೆ ನಡೆಸುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ನಿರ್ದೇಶನ ನೀಡಿದ್ದಾರೆ.
ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ತೆರೆದಿರುವ ಬೋರ್‌ವೆಲ್‌ಗಳ ಬಗ್ಗೆ ಸಮೀಕ್ಷೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಈಗಾಗಲೇ ಕಾನೂನಿನಲ್ಲಿ ಕೊಳವೆಬಾವಿ (Borewell)ಯನ್ನು ಮುಚ್ಚದಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಇದೆ. ಈ ಕಾನೂನಿನ ಅನ್ವಯ ಬೋರ್‌ವೆಲ್ ಮುಚ್ಚದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಾರ್ಯಾಚರಣೆಗೆ ಮೆಚ್ಚುಗೆ
ಇನ್ನು ಸಾತ್ವಿಕ್ ಎನ್ನುವ ಮಗುವನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ರಕ್ಷಿಸಿದ ತಂಡಗಳ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಮೆಚ್ಚುಗೆ ಸೂಚಿಸಿದ್ದಾರೆ. ಮಗುವನ್ನು ಜೀವಂತವಾಗಿ ರಕ್ಷಿಸಿರುವುದು ತೀವ್ರ ಸಂತಸವನ್ನುಂಟು ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.
ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು: ಸಿ.ಎಂ
ಕೊಳವೆ ಬಾವಿಗೆ ಬಿದಿದ್ದ ಮಗು ಸಾತ್ವಿಕ್‌ನನ್ನು ರಕ್ಷಣೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದ್ದಾರೆ. ಸಾತ್ವಿಕ್‌ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿ ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಗುವಿನ ಕುಟುಂಬದವರ, ನಾಡಿನ ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸಿದೆ. ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ ಮತ್ತೆ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಗಿದೆ. ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ. ಇಂತಹ ಘಟನೆಗಳು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿದ್ದರೂ ಜನ ಎಚ್ಚೆತ್ತುಕೊಳ್ಳದೆ, ನಿರ್ಲಕ್ಷ್ಯ ತೋರುವುದು ಬೇಸರದ ಸಂಗತಿ. ಸಾರ್ವಜನಿಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.