ದುಬೈನಲ್ಲಿ ಮೆಕಾನ್ ಮತ್ತು ಎನ್‌ಎಂಡಿಸಿ ಕಚೇರಿಗಳನ್ನು ಉದ್ಘಾಟಿಸಿದ ಸಚಿವ ಎಚ್‌.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ. ಹಸಿರು ಉಕ್ಕಿನ ರಾಜತಾಂತ್ರಿಕತೆ ಬಲಪಡಿಸಲು ಮೆಕಾನ್, ಎನ್‌ಎಂಡಿಸಿ ಕಾರ್ಯಾಚರಣೆ.;

Update: 2025-06-30 15:23 GMT

ಉಕ್ಕು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮೆಕಾನ್‌ ಹಾಗೂ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದ ಸಾಗರೋತ್ತರ ಕಚೇರಿಗಳನ್ನು ದುಬೈನಲ್ಲಿ ಕೇಂದ್ರ ಬೃಹತ್‌ ಕೈಗಾರಿಕಾ ಸಚಿ ಎಚ್‌.ಡಿ.ಕುಮಾರಸ್ವಾಮಿ ನೆರವೇರಿಸಿದರು. 

ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ರಾಸ್ ಅಲ್ ಖೈಮಾಹ್‌ ಆಡಳಿತಗಾರ ಶೇಖ್ ಸೌದ್ ಬಿನ್ ಸಕ್ರ್ ಅಲ್ ಖಾಸಿಮಿ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದರು.  ತದನಂತರ ಕೊಲ್ಲಿ ಭಾಗದಲ್ಲಿ ಕಾರ್ಯನಿರ್ವಹಿಸುವ ಎನ್‌ ಎಂಡಿಸಿ  ಮತ್ತು ಮೆಕಾನ್‌ಗಳ ಅಂತಾರಾಷ್ಟ್ರೀಯ ಕಚೇರಿಗಳ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಭಾರತ ಮತ್ತು ಯುಎಇ ನಡುವಿನ ಸಂಬಂಧವು ಸದೃಢವಾಗಿದೆ. ಇದು ಪರಸ್ಪರ ಆರ್ಥಿಕ ಹಿತಾಸಕ್ತಿಗಳು, ಸಾಂಸ್ಕೃತಿಕ ಬಾಂಧವ್ಯಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಮುದಾಯದ ಕೊಡುಗೆಯ ಮೇಲೆ ಅವಲಂಬಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ,ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು. 

ರಾಸ್ ಅಲ್ ಖೈಮಾಹ್‌ʼದಿಂದ ಸುಣ್ಣದ ಕಲ್ಲಿನ ದೀರ್ಘಾವಧಿಯ ಆಮದು, ಭಾರತದಿಂದ ಮೌಲ್ಯವರ್ಧಿತ ಉಕ್ಕಿನ ರಫ್ತುಗಳ ಮೂಲಕ ವ್ಯಾಪಾರ ಪಾಲುದಾರಿಕೆ ವಿಸ್ತರಿಸುವುದು, ಹಸಿರು ಹೈಡ್ರೋಜನ್ ಮತ್ತು ಗ್ರೀನ್‌ ಸ್ಟೀಲ್ ಸಹಯೋಗವನ್ನು ಅನ್ವೇಷಿಸುವುದು‌, ರಾಸ್ ಅಲ್ ಖೈಮಾಹ್‌ʼದಿಂದ ಸ್ಥಳೀಯ ಸುಣ್ಣದ ಕಲ್ಲು ಮತ್ತು ನೈಸರ್ಗಿಕ ಅನಿಲವನ್ನು ಬಳಸಿಕೊಂಡು ಸುಣ್ಣದ ಉತ್ಪಾದನಾ ಘಟಕಗಳ ಸ್ಥಾಪನೆ, ಭಾರತೀಯ ಉಕ್ಕು ಪ್ರಾಧಿಕಾರ , ರಾಷ್ಟ್ರೀಯ ಖನಿಜಾವೃದ್ಧಿ ನಿಗಮ  ಮತ್ತು ಮೆಕಾನ್ ನಂತಹ ‌ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳ ಮೂಲಕ ಹೆಚ್ಚೆಚ್ಚು ಒಪ್ಪಂದಗಳನ್ನು ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು. 

ಭಾರತದ ಅತಿದೊಡ್ಡ ಉಕ್ಕು ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ ಎಸ್‌ಎಐಎಲ್‌, ಪ್ರಸ್ತುತ ರಾಸ್ ಅಲ್ ಖೈಮಾಹ್‌ʼದ ಆಧಾರಿತ ಸ್ಟೀವಿನ್ ರಾಕ್ ನಿಂದ ವಾರ್ಷಿಕವಾಗಿ ಸುಮಾರು 2.5 ದಶಲಕ್ಷ ಟನ್ ಸುಣ್ಣದ ಕಲ್ಲನ್ನು ಆಮದು ಮಾಡಿಕೊಳ್ಳುತ್ತಿದೆ. ಭವಿಷ್ಯದಲ್ಲಿ ವಾರ್ಷಿಕ 20 ರಿಂದ 35 ದಶಲಕ್ಷ ಟನ್‌ಗಳಿಗೆ ಆಮದು ಹೆಚ್ಚಾಗಲಿದೆ. ಮೂಲಸೌಕರ್ಯ ಅಭಿವೃದ್ಧಿ, ಇಂಧನ ಘಟಕಗಳು ಮತ್ತು ಕಚ್ಚಾ ವಸ್ತುಗಳ ಮೌಲ್ಯ ಸರಪಳಿಗಳಲ್ಲಿ ಸಹಯೋಗವನ್ನು ಅನ್ವೇಷಿಸಲು  ರಾಸ್ ಅಲ್ ಖೈಮಾಹ್‌ʼಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು. 

ಭಾರತದ ಹಸಿರು ಪರಿವರ್ತನೆಗಾಗಿ ನಿರ್ಣಾಯಕ ಖನಿಜಗಳ ಸುರಕ್ಷತೆ:

ಇದೇ ವೇಳೆ ದುಬೈನಲ್ಲಿ ಭಾರತದ ಪ್ರಮುಖ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆಯಾದ ಎನ್‌ಎಂಡಿಸಿಯ ಅಂತಾರಾಷ್ಟ್ರೀಯ ಕಚೇರಿಯನ್ನು ಸಚಿವರು ಉದ್ಘಾಟಿಸಿದರು. ಹೊಸ ಕಚೇರಿಯು ಸಂಸ್ಥೆಯ ʼಖನಿಜ ಆಸ್ತಿ ಸ್ವಾಧೀನಗಳನ್ನುʼ ಮುಂದುವರಿಸಲು, ವ್ಯೂಹಾತ್ಮಕ ಜಂಟಿ ಉದ್ಯಮಗಳನ್ನು ರೂಪಿಸಲು ಮತ್ತು ಭಾರತದ ಶುದ್ಧ ಇಂಧನ ಮತ್ತು ಕೈಗಾರಿಕಾ ಉತ್ಪಾದನಾ ವಲಯಗಳಿಗೆ ಅಗತ್ಯವಿರುವ ಉಕ್ಕಿನ ದರ್ಜೆಯ ಸುಣ್ಣದ ಕಲ್ಲು, ಡಾಲಮೈಟ್ ಮತ್ತು ಇತರೆ ನಿರ್ಣಾಯಕ ಖನಿಜಗಳ ಹೆಚ್ಚಿನ ಒಳಹರಿವಿನ ಮೂಲವನ್ನು ಮತ್ತಷ್ಟು ವಿಸ್ತರಿಸಲು ನೆರವಾಗುತ್ತದೆ ಎಂದು ತಿಳಿಸಿದರು. 

ಕೈಗಾರಿಕಾ ಯೋಜನೆಯ ಕಾರ್ಯಗತಗೊಳಿಸುವಿಕೆ ಮತ್ತು ಯೋಜನೆ, ತೈಲ ಮತ್ತು ಅನಿಲ ಮೂಲಸೌಕರ್ಯ ವಿನ್ಯಾಸ, ಉಕ್ಕಿನ ಸ್ಥಾವರ ಕಾರ್ಯಸಾಧ್ಯತೆ ಮತ್ತು ವಿಸ್ತರಣಾ ಸಲಹೆ, ಹಸಿರು ಉಕ್ಕು ಮತ್ತು ಇಂಗಾಲ ರಹಿತೀಕರಣ ತಂತ್ರಗಳು, ಸ್ಮಾರ್ಟ್ ಉತ್ಪಾದನೆ ಮತ್ತು ಡಿಜಿಟಲ್ ಅವಳಿ ತಂತ್ರಜ್ಞಾನಗಳ ಕಾರ್ಯಾಚರಣೆಗಳ ಮೂಲಕ ದುಬೈನಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಕೇಂದ್ರೀಕರಿಸುತ್ತಿದೆ. ಈ ಹಂತವು ರಾಷ್ಟ್ರೀಯ ಉಕ್ಕು ನೀತಿ ಮತ್ತು ಆತ್ಮನಿರ್ಭರ ಭಾರತದ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ. ಇದು ಸುಸ್ಥಿರ, ತಂತ್ರಜ್ಞಾನ ಚಾಲಿತ ಮೂಲಸೌಕರ್ಯದಲ್ಲಿ ಜಾಗತಿಕ ಪರಿಹಾರ ಪೂರೈಕೆದಾರರಾಗಿ ಭಾರತದ ಪಾತ್ರವನ್ನು ಬಲಪಡಿಸುತ್ತದೆ ಎಂದು ತಿಳಿಸಿದರು. 

ಯುಎಇ ನಾಯಕರೊಂದಿಗೆ ಸಂವಾದ:

ಈ ನಡುವೆ, ಯುಎಇಯ ಭಾರತದ ರಾಯಭಾರಿ ಮತ್ತು ರಾಸ್ ಅಲ್ ಖೈಮಾದ ಆಡಳಿತಗಾರರ ಸಲಹೆಗಾರರ ಸಮ್ಮುಖದಲ್ಲಿ ಕೊಲ್ಲಿ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸ್ವಾಮ್ಯದ ಕಂಪನಿಗಳ ಸಿಇಒಗಳು ಮತ್ತು ಎಂಡಿಗಳೊಂದಿಗೆ ಉನ್ನತ ಮಟ್ಟದ ಸಂವಾದ ನಡೆಸಿದರು. ಖನಿಜ ಸಂಸ್ಕರಣೆ ಮತ್ತು ಪ್ರಯೋಜನಕಾರಿ ಪಾಲುದಾರಿಕೆಗಳು, ಹಸಿರು ತಂತ್ರಜ್ಞಾನಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಕೈಗಾರಿಕಾ ಉದ್ಯಮಗಳಲ್ಲಿ ಅನಿವಾಸಿ ಭಾರತೀಯರು ತೊಡಗಿಸಿಕೊಳ್ಳುವಿಕೆಯಂತಹ ಅತಿ ಮುಖ್ಯ ಅಂಶಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಿದರು. 

Tags:    

Similar News