ಸಚಿವ ಭೈರತಿ ಸುರೇಶ್ ನಿಕಟವರ್ತಿಗಳಿಂದ ಬೆದರಿಕೆ; ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ದೂರು
ಸಜಿ ಜೋಸೆಫ್ ಹಾಗೂ ಸಿನಿ ಸಜಿ ನಡುವೆ 2016 ರಿಂದಲೂ ಆಸ್ತಿಗೆ ಸಂಬಂಧಿಸಿ ಕೌಟುಂಬಿಕ ಕಲಹ ಏರ್ಪಟ್ಟಿದೆ. ಸಿನಿ ಸಜಿ ಅವರು ಪತಿಯ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಸಾಕಷ್ಟು ದೂರುಗಳನ್ನು ದಾಖಲಿಸಿದ್ದರು.
ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಸುರೇಶ್ ನಿಕಟವರ್ತಿಗಳು ಎಂದು ಹೇಳಿಕೊಂಡಿರುವ ಹೆಣ್ಣೂರು ಗೋಪಿ, ರಮೇಶ್ ಇತರರನ್ನು ಕರೆತಂದು ನನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಪತಿಯೇ ಪತ್ನಿ ವಿರುದ್ಧ ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಜ್ಯೋತಿ ನಗರದ ನಿವಾಸಿ ಸಜಿ ಜೋಸೆಫ್ ಎಂಬುವರು ತಮ್ಮ ಪತ್ನಿ ಸಿನಿ ಸಜಿ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಸಜಿ ಜೋಸೆಫ್ ಹಾಗೂ ಸಿನಿ ಸಜಿ ನಡುವೆ 2016 ರಿಂದಲೂ ಆಸ್ತಿಗೆ ಸಂಬಂಧಿಸಿ ಕೌಟುಂಬಿಕ ಕಲಹ ಏರ್ಪಟ್ಟಿದೆ. ಸಿನಿ ಸಜಿ ಅವರು ಪತಿಯ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಸಾಕಷ್ಟು ದೂರುಗಳನ್ನು ದಾಖಲಿಸಿದ್ದರು.
ನ.1ರಂದು ಪತ್ನಿ ಸಿನಿ ಸಜಿ ಅವರು ಹೆಣ್ಣೂರಿನ ಗೋಪಿ, ರಮೇಶ್, ಇತರೆ 20 ಮಂದಿಯನ್ನು ಕರೆತಂದು ಮನೆಯ ಬಳಿ ಗಲಾಟೆ ಮಾಡಿದ್ದಾರೆ. ಈ ವೇಳೆ ಪ್ರಾಣ ಬೆದರಿಕೆ ಸಹ ಹಾಕಿದ್ದಾರೆ. ಗಲಾಟೆಗೆ ಬಂದವರು ರೌಡಿ ಹಿನ್ನೆಲೆಯ ವ್ಯಕ್ತಿಗಳಾಗಿದ್ದು, ತಾವು ಸಚಿವ ಬೈರತಿ ಸುರೇಶ್ ನಿಕಟವರ್ತಿಗಳು. ನಮಗೆ ಬೆಂಗಳೂರಿನ ರೌಡಿಗಳು, ಪೂರ್ವ ವಲಯದ ಪೊಲೀಸ್ ಅಧಿಕಾರಿಗಳು ಗೊತ್ತಿದ್ದಾರೆ. ಕೂಡಲೇ ಮನೆ ಖಾಲಿ ಮಾಡುವಂತೆ ಧಮಕಿ ಹಾಕಿದ್ದಾರೆ. ಅಲ್ಲದೇ ತಮ್ಮ ಜೊತೆಯಲ್ಲಿ ರಾಟ್ ವೀಲರ್ ನಾಯಿಯನ್ನು ಕರೆತಂದು ದಾಳಿ ಮಾಡಿಸುವ ಬೆದರಿಕೆ ಹಾಕಿದ್ದರು. ಇವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು. ಅಲ್ಲದೇ ಸಿಒಡಿ ಅಥವಾ ಸಿಸಿಬಿ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಿನಿ ಸಜಿ ಅವರನ್ನು ಮದುವೆಯಾದ ವೇಳೆ ನಾನೇ ಸ್ವಂತ ಆಸ್ತಿ ಖರೀದಿ ಮಾಡಿ ಪತ್ನಿಯ ಹೆಸರಲ್ಲಿ ನೋಂದಣಿ ಮಾಡಿಸಿದ್ದೆ. ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟ ಬಳಿಕ ಆ ಆಸ್ತಿ ತನ್ನದು ಎಂದು ಪತ್ನಿ ಹೇಳುತ್ತಿದ್ದಾಳೆ. ಆಸ್ತಿ ಕಲಹ ಸದ್ಯ ನ್ಯಾಯಾಲಯದಲ್ಲಿದೆ. ಹೀಗಿರುವಾಗ ರೌಡಿಗಳನ್ನು ಕರೆತಂದು ಪ್ರಾಣ ಬೆದರಿಕೆ ಹಾಕುತ್ತಿರುವ ಪತ್ನಿ ಹಾಗೂ ಆಕೆ ಕರೆತಂದ ರೌಡಿ ಹಿನ್ನೆಲೆಯ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರುದಾರ ಸಜಿ ಜೋಸೆಫ್ ಒತ್ತಾಯಿಸಿದ್ದಾರೆ.