Milk Price Hike | ಹೈನುಗಾರರಿಗೆ ದರ ಹೆಚ್ಚಳದ ಲಾಭಾಂಶ; ಗ್ರಾಹಕರಿಗೆ ಹಾಲು ಖರೀದಿ ಸಂಕಷ್ಟ
ರಾಜ್ಯದಲ್ಲಿರುವ ಒಟ್ಟು 16 ಹಾಲು ಒಕ್ಕೂಟಗಳಿಂದ ನಿತ್ಯ 82 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಲಿನ ಪರಿಷ್ಕೃತ ಮಾರಾಟ ದರವನ್ನು ಹೈನುಗಾರರಿಗೆ ನೀಡಲು ಈಗಾಗಲೇ ಜಿಲ್ಲಾ ಹಾಲು ಒಕ್ಕೂಟಗಳು ನಿರ್ಧರಿಸಿವೆ.;
ನಂದಿನಿ ಹಾಲು ಹಾಗೂ ಮೊಸರಿನ ದರ ಹೆಚ್ಚಳ ಮತ್ತು ಆ ಹೆಚ್ಚಳದಿಂದ ಬರುವ ಲಾಭವನ್ನು ಹೈನುಗಾರರಿಗೆ ವರ್ಗಾಯಿಸುವ ಕುರಿತಾದ ಗೊಂದಲಗಳಿಗೆ ಕೆಎಂಎಫ್ ತೆರೆ ಎಳೆದಿದೆ. ಹಾಲು ಹಾಗೂ ಮೊಸರಿನ ಮೇಲೆ 4 ರೂ. ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಏ.1 ರಿಂದ ಹೊಸ ದರಗಳು ಜಾರಿಯಾಗಲಿವೆ.
ಒಂದೇ ವರ್ಷದಲ್ಲಿ ಎರಡು ಬಾರಿ ಹಾಲಿನ ದರ ಏರಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಗ್ರಾಹಕರು ಹಾಗೂ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಬೆಲೆ ಏರಿಕೆ ಕುರಿತು ಕೆಎಂಎಫ್ ಪ್ರಸ್ತಾಪಕ್ಕೆ ಸರ್ಕಾರವೂ ಅಸಮಾಧಾನ ವ್ಯಕ್ತಪಡಿಸಿ, ಹೆಚ್ಚುವರಿ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ತಾಕೀತು ಮಾಡಿ, ಬೆಲೆ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ, ಹೆಚ್ಚುವರಿ ದರ ಪೂರ್ಣ ಲಾಭವನ್ನು ಹೈನುಗಾರರಿಗೆ ವರ್ಗಾಯಿಸಲು ಸೂಚಿಸಿತ್ತು. ಅದರಂತೆ ಕೆಎಂಎಫ್ ಸಿದ್ಧತೆ ಆರಂಭಿಸಿದೆ.
ರಾಜ್ಯದಲ್ಲಿ ಒಟ್ಟು 40 ಲಕ್ಷಕ್ಕೂ ಅಧಿಕ ಹೈನುಗಾರರಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರ ಸಂಖ್ಯೆಯೇ 25ಲಕ್ಷ ಇದೆ. ಪ್ರಸ್ತುತ ಹೈನುಗಾರರಿಂದ ಸಹಕಾರ ಸಂಘಗಳ ಮೂಲಕ ಖರೀದಿಸುವ ಲೀಟರ್ ಹಾಲಿಗೆ 31ರೂ.68ಪೈಸೆ ನೀಡುತ್ತಿದೆ. ಪರಿಷ್ಕೃತ ದರಗಳು ಜಾರಿಯಾದ ನಂತರ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 35ರೂ.68ಪೈಸೆಯನ್ನು ಕೆಎಂಎಫ್ ನೀಡಲಿದೆ.
ರಾಜ್ಯದಲ್ಲಿರುವ ಒಟ್ಟು 16 ಹಾಲು ಒಕ್ಕೂಟಗಳಿಂದ ನಿತ್ಯ 82 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹಾಲಿನ ಪರಿಷ್ಕೃತ ಮಾರಾಟ ದರವನ್ನು ಹೈನುಗಾರರಿಗೆ ನೀಡಲು ಈಗಾಗಲೇ ಜಿಲ್ಲಾ ಹಾಲು ಒಕ್ಕೂಟಗಳು ನಿರ್ಧರಿಸಿವೆ.
"ಹಾಲಿನ ದರ ಹೆಚ್ಚಳದ ಲಾಭವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ, ಹೈನುಗಾರರಿಂದ ಪ್ರತಿ ಲೀಟರ್ ಹಾಲಿಗೆ 31ರೂ. ನೀಡಿ ಖರೀದಿಸಲಾಗುತ್ತಿದೆ. ದರ ಹೆಚ್ಚಳ ಅನುಷ್ಠಾನವಾದ ಬಳಿಕ ಪ್ರತಿ ಲೀಟರ್‌ಗೆ ಸರಾಸರಿ 35ರೂ ಪಾವತಿಸಲಾಗುವುದು. ವಿವಿಧ ಒಕ್ಕೂಟಗಳು ರೈತರಿಗೆ ನೀಡುವ ದರದಲ್ಲಿ ಕೊಂಚ ವ್ಯತ್ಯಾಸ ಇರಲಿದೆ. ಇಂದಿನಿಂದ(ಮಾ.29) ಎರಡು ದಿನಗಳೊಳಗೆ ಎಲ್ಲಾ ಒಕ್ಕೂಟಗಳು ಸಭೆ ನಡೆಸಿ, ಎಷ್ಟು ಪ್ರಮಾಣದ ಹಣವನ್ನು ರೈತರಿಗೆ ಪಾವತಿಸಬೇಕು ಎಂದು ನಿರ್ಧರಿಸಲಿವೆ ಎಂದು ಕೆಎಂಎಫ್ ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಲೀಟರ್ ಬೆಲೆ 50ರೂ.ಗೆ ಹೆಚ್ಚಿಸಲು ಬೇಡಿಕೆ
ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಮೇವಿನ ಸಮಸ್ಯೆ, ಫೀಡ್ ಬೆಲೆ ಹೆಚ್ಚಳದಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಹಾಲಿನ ದರ ಹೆಚ್ಚಳ ಮಾಡಿ, ಅವರ ನೆರವಿಗೆ ಧಾವಿಸಬೇಕು ಎಂದು ರೈತ, ಕಾರ್ಮಿಕ ಸಂಘಟನೆಗಳು ಕೆಎಂಎಫ್ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದವು.
ಹೈನುಗಾರರಿಂದ ಖರೀದಿಸುವ ಲೀಟರ್ ಹಾಲಿಗೆ ಕೆಎಂಎಫ್ ಕನಿಷ್ಠ 50ರೂ. ಪಾವತಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೆಎಂಎಫ್ ಕಚೇರಿಗಳ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು. ಕನಿಷ್ಠ ಬೆಂಬಲ ಬೆಲೆ ಜಾರಿಗೆ ಬರುವವರೆಗೂ ಪ್ರತಿ ಲೀಟರ್‌ಗೆ 10 ರೂ. ಮಧ್ಯಂತರ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿದ್ದರು.
ಹೆಚ್ಚುವರಿ ಹಾಲು, ಹಣ ವಾಪಸ್
2024 ಜೂನ್ 26 ರಿಂದ ಜಾರಿಗೆ ಬಂದಿದ್ದ ಪ್ರತಿ ಅರ್ಧ ಲೀಟರ್ ಹಾಲಿನಲ್ಲಿ 50ಮಿ.ಲೀ ಹೆಚ್ಚಿಸಿ 2 ರೂ. ಏರಿಕೆ ಮಾಡಿದ್ದನ್ನು ಹಿಂಪಡೆಯಲಾಗುತ್ತಿದೆ. ಈ ಹಿಂದಿನಂತೆ 500 ಮಿಲಿ ಮತ್ತು ಒಂದು ಲೀಟರ್ ಹಾಲಿನ ಪಾಕೆಟ್‌ಗಳು ನಾಲ್ಕು ರೂ. ದರ ಪರಿಷ್ಕರಣೆಯೊಂದಿಗೆ ಮಾರುಕಟ್ಟೆಗೆ ಬರಲಿವೆ.
ಸಚಿವ ಸಂಪುಟ ಸಭೆಯಲ್ಲೂ ಹೆಚ್ಚುವರಿ ಹಾಲು ಹಾಗೂ ಹಣ ಹಿಂಪಡೆಯಲು ನಿರ್ಣಯ ತೆಗೆದುಕೊಂಡಿತ್ತು.
ಹಾಲಿನ ಬ್ರ್ಯಾಂಡ್ | ಈಗಿನ ದರ | ಹಿಂದಿನ ದರ |
ನೀಲಿ ಪ್ಯಾಕೆಟ್ | 46 ರೂ. | 44 ರೂ. |
ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) | 47 ರೂ. | 45 ರೂ. |
ಆರೆಂಜ್ ಪ್ಯಾಕೆಟ್ ಹಾಲು | 50 ರೂ. | 48 ರೂ. |
ಆರೆಂಜ್ ಸ್ಪೆಷಲ್ ಹಾಲು | 52 ರೂ. | 50 ರೂ. |
ಶುಭಂ ಹಾಲು | 52 ರೂ. | 50 ರೂ. |
ಸಮೃದ್ದಿ ಹಾಲು | 55 ರೂ. | 53 ರೂ. |
ಶುಭಂ (ಟೋನ್ಡ್ ಹಾಲು) | 53 ರೂ. | 51 ರೂ. |
ಸಂತೃಪ್ತಿ ಹಾಲು | 59 ರೂ. | 57 ರೂ. |
ಶುಭಂ ಗೋಲ್ಡ್ ಹಾಲು | 53 ರೂ. | 51 ರೂ. |
ಶುಭಂ ಡಬಲ್ ಟೋನ್ಡ್ ಹಾಲು | 45 ರೂ. | 43 ರೂ. |
ಹೊರರಾಜ್ಯಗಳಿಗೆ 5 ಲಕ್ಷ ಲೀಟರ್ ಹಾಲು
ನಂದಿನಿ ಬ್ರ್ಯಾಂಡ್‌ನ ಹಾಲಿಗೆ ಕರ್ನಾಟಕವಲ್ಲದೇ ಬೇರೆ ರಾಜ್ಯಗಳಲ್ಲೂ ಭಾರೀ ಬೇಡಿಕೆ ಕಂಡುಬರುತ್ತಿದೆ. ಈಚೆಗೆ ನವದೆಹಲಿಯಲ್ಲಿ ನಂದಿನಿ ಹಾಲು ಮಾರಾಟ ಆರಂಭಿಸಲಾಗಿದೆ. ಈಗ ಹರ್ಯಾಣದಲ್ಲಿ ನಂದಿನಿ ಹಾಲು ಮಾರುಕಟ್ಟೆ ವಿಸ್ತರಣೆಗೆ ಕೆಎಂಎಫ್ ಮುಂದಾಗಿದೆ.
ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಕೆಎಂಎಫ್‌ನಿಂದ ನಿತ್ಯ 5ಲಕ್ಷ ಲೀಟರ್ ಹಾಲು ಪೂರೈಸಲಾಗುತ್ತಿದೆ. ದಿನೇ ದಿನೇ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಕೆಎಂಎಫ್ ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬೇರೆ ರಾಜ್ಯಗಳಲ್ಲಿ ಹಾಲಿನ ದರ ಎಷ್ಟಿದೆ?
ಕರ್ನಾಟಕದಲ್ಲಿ ದೇಶದ ಬೇರೆ ರಾಜ್ಯಗಳಿಗಿಂತ ಕಡಿಮೆ ದರಕ್ಕೆ ಹಾಲು ಮಾರಾಟ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಒಂದು ಲೀಟರ್ ಹಾಲನ್ನು 42 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಗುಜರಾತ್‌ನಲ್ಲಿ ಲೀಟರ್ ಹಾಲು 53 ರೂ. ಇದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಲೀಟರ್ ಹಾಲಿನ ಬೆಲೆ 58 ರೂ., ನವದೆಹಲಿ ಮತ್ತು ಮಹಾರಾಷ್ಟ್ರದಲ್ಲಿ 56 ರೂ., ಕೇರಳದಲ್ಲಿ 54 ರೂ ಇದೆ. ಈ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಗುಣಮಟ್ಟದ ಹಾಲನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಹೈನುಗಾರರ ಪ್ರೋತ್ಸಾಹಧನ ಬಾಕಿ
ಹಾಲು ಉತ್ಪಾದಕರಿಗೆ ಒಟ್ಟು 656.07 ಕೋಟಿ ರೂ. ಸಬ್ಸಿಡಿ ಹಣವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. 9.04 ಲಕ್ಷ ಫಲಾನುಭವಿಗಳಿಗೆ ಪ್ರೋತ್ಸಾಹಧನದ ಹಣ ನೀಡಬೇಕಾಗಿದೆ ಎಂಬ ಮಾಹಿತಿಯನ್ನು ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು.
ಹೈನುಗಾರರಿಗೆ ನೀಡಬೇಕಿರುವ ಬಾಕಿ ಹಣ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆಯನ್ನು ಕೋರಲಾಗಿದೆ ಎಂದು ಹೇಳಿದ್ದರು.
ಕೆಎಂಎಫ್ ಅಡಿ 14,700 ಹಾಲು ಉತ್ಪಾದಕರ ಸಹಕಾರಿ ಸಂಘಗಳು ನೋಂದಣಿಯಾಗಿ ಹಾಲು ಉತ್ಪಾದನೆ ಮಾಡುತ್ತಿವೆ. ಪ್ರತಿ ವರ್ಷ 16 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. 40 ಲಕ್ಷ ಹಾಲು ಉತ್ಪಾದಕ ಸಂಘದ ಸದಸ್ಯರು ಒಕ್ಕೂಟದಲ್ಲಿದ್ದಾರೆ.
ಈ ಹಿಂದೆ 2023 ಆಗಸ್ಟ್ ತಿಂಗಳಲ್ಲಿ ಲೀಟರ್ ಹಾಲಿನ ಮೇಲೆ 3 ರೂ. ಹೆಚ್ಚಿಸಲಾಗಿತ್ತು. ಜೂನ್ 2024 ರಲ್ಲಿ ಮತ್ತೆ 2 ರೂ. ಹೆಚ್ಚಿಸಲಾಗಿತ್ತು.