ನಮ್ಮ ಮೆಟ್ರೋ ಹಳದಿ ಮಾರ್ಗದ 5ನೇ ರೈಲು: ಅಕ್ಟೋಬರ್ ಅಂತ್ಯಕ್ಕೆ ಸಂಚಾರ, ಕಾಯುವಿಕೆ ಅವಧಿ 15 ನಿಮಿಷಕ್ಕೆ ಇಳಿಕೆ
ಬೆಂಗಳೂರಿನ ಬಹುನಿರೀಕ್ಷಿತ 'ನಮ್ಮ ಮೆಟ್ರೋ' ಹಳದಿ ಮಾರ್ಗಕ್ಕೆ (ಆರ್.ವಿ. ರಸ್ತೆ-ಬೊಮ್ಮಸಂದ್ರ) 5ನೇ ರೈಲಿನ ಎಲ್ಲ ಆರು ಬೋಗಿಗಳು ನಗರವನ್ನು ತಲುಪಿವೆ.
ನಮ್ಮ ಮೆಟ್ರೋ
ಶುಕ್ರವಾರ ಹೆಬ್ಬಗೋಡಿ ಡಿಪೋಗೆ ಆಗಮಿಸಿದ ಹೊಸ ಬೋಗಿಗಳನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ವೀಕ್ಷಿಸಿ, ಆದ್ಯತೆ ಮೇರೆಗೆ ರೈಲನ್ನು ಸೇವೆಗೆ ಸೇರ್ಪಡೆಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಬಹುನಿರೀಕ್ಷಿತ 'ನಮ್ಮ ಮೆಟ್ರೋ' ಹಳದಿ ಮಾರ್ಗಕ್ಕೆ (ಆರ್.ವಿ. ರಸ್ತೆ-ಬೊಮ್ಮಸಂದ್ರ) 5ನೇ ರೈಲಿನ ಎಲ್ಲ ಆರು ಬೋಗಿಗಳು ನಗರವನ್ನು ತಲುಪಿವೆ. ಈ ರೈಲು ಅಕ್ಟೋಬರ್ ಕೊನೆಯ ವಾರದಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆಯಿದ್ದು, ಇದು ಕಾರ್ಯಾರಂಭಗೊಂಡರೆ ಪ್ರಯಾಣಿಕರ ಕಾಯುವಿಕೆ ಅವಧಿ ಸುಮಾರು 15 ನಿಮಿಷಕ್ಕೆ ಇಳಿಕೆಯಾಗಲಿದೆ.
ಶುಕ್ರವಾರ ಹೆಬ್ಬಗೋಡಿ ಡಿಪೋಗೆ ಆಗಮಿಸಿದ ಹೊಸ ಬೋಗಿಗಳನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ವೀಕ್ಷಿಸಿ, ಆದ್ಯತೆ ಮೇರೆಗೆ ರೈಲನ್ನು ಸೇವೆಗೆ ಸೇರ್ಪಡೆಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸದ್ಯದಲ್ಲೇ ಈ ಆರು ಬೋಗಿಗಳನ್ನು ಜೋಡಿಸಿ, ಇನ್‌ಸ್ಪೆಕ್ಷನ್ ಬೇ ಲೈನ್‌ನಲ್ಲಿ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಲಾಗುವುದು. ಬಳಿಕ, ಸುಮಾರು ಎರಡು ವಾರಗಳ ಕಾಲ ರಾತ್ರಿ ಸಮಯದಲ್ಲಿ ವಾಣಿಜ್ಯ ಮಾರ್ಗದಲ್ಲಿ ಲೋಡ್ ಟೆಸ್ಟ್ ಸೇರಿದಂತೆ ವಿವಿಧ ಪರೀಕ್ಷಾರ್ಥ ಸಂಚಾರಗಳು ನಡೆಯಲಿವೆ.‘
ಹಿಂದಿನ ಸವಾಲುಗಳು ಮತ್ತು ಬೆಳವಣಿಗೆಗಳು
ಹಳದಿ ಮಾರ್ಗವು ಹಲವು ವರ್ಷಗಳಿಂದ ತಾಂತ್ರಿಕ ಮತ್ತು ಪೂರೈಕೆದಾರರ ಸಮಸ್ಯೆಯಿಂದಾಗಿ ಸಾಕಷ್ಟು ವಿಳಂಬವನ್ನು ಎದುರಿಸಿತ್ತು. ಚೀನಾದ ಕಂಪನಿಯ ಗುತ್ತಿಗೆ ರದ್ದಾದ ಬಳಿಕ, 'ಮೇಕ್ ಇನ್ ಇಂಡಿಯಾ' ಅಡಿ ಕೋಲ್ಕತ್ತ ಮೂಲದ ಟಿಟಾಗಢ ರೈಲ್ ಸಿಸ್ಟಮ್ಸ್ ಲಿಮಿಟೆಡ್‌ಗೆ (ಟಿಆರ್‌ಎಸ್‌ಎಲ್) ಗುತ್ತಿಗೆ ನೀಡಲಾಯಿತು. ಈ ವರ್ಷದ ಫೆಬ್ರವರಿಯಲ್ಲಿ ಬಂದ ಮೊದಲ ಪ್ರೊಟೊಟೈಪ್ ರೈಲಿನ ಸಿಗ್ನಲಿಂಗ್ ಮತ್ತು ಸಾಫ್ಟ್‌ವೇರ್ ಹೊಂದಾಣಿಕೆಯಲ್ಲಿನ ತಾಂತ್ರಿಕ ದೋಷಗಳಿಂದ ಪರೀಕ್ಷಾರ್ಥ ಸಂಚಾರ ಹಲವು ತಿಂಗಳು ವಿಳಂಬವಾಗಿತ್ತು.
ಎಲ್ಲಾ ಸವಾಲುಗಳನ್ನು ಬಗೆಹರಿಸಿ ಆಗಸ್ಟ್ 10 ರಂದು ಪ್ರಧಾನಿ ಮೋದಿಯವರು ಮೂರು ರೈಲುಗಳೊಂದಿಗೆ ಈ ಮಾರ್ಗಕ್ಕೆ ಚಾಲನೆ ನೀಡಿದ್ದರು. ಆಗ ಪ್ರತಿ 25 ನಿಮಿಷಕ್ಕೊಂದು ರೈಲು ಸಂಚರಿಸುತ್ತಿತ್ತು. ಸೆಪ್ಟೆಂಬರ್‌ನಲ್ಲಿ ನಾಲ್ಕನೇ ರೈಲು ಸೇರ್ಪಡೆಯಾದ ನಂತರ, ಕಾಯುವಿಕೆಯ ಅವಧಿ 19 ನಿಮಿಷಕ್ಕೆ ಇಳಿದಿತ್ತು.
ಪ್ರಯಾಣಿಕರಿಗೆ ಅನುಕೂಲ
ಪ್ರಸ್ತುತ ದಿನಕ್ಕೆ 85,000ಕ್ಕೂ ಹೆಚ್ಚು ಜನರು ಸಂಚರಿಸುವ ಈ ಮಾರ್ಗದಲ್ಲಿ 5ನೇ ರೈಲಿನ ಸೇರ್ಪಡೆಯಿಂದ ದಟ್ಟಣೆ ಮತ್ತಷ್ಟು ಕಡಿಮೆಯಾಗಲಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಲ್ಲ 15 ರೈಲುಗಳು ಹಳಿಗಿಳಿದರೆ, ಪ್ರತಿ 3 ನಿಮಿಷಕ್ಕೊಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಈ ಮಧ್ಯೆ, ಹಳದಿ ಮಾರ್ಗವನ್ನು ಅತ್ತಿಬೆಲೆ ಮತ್ತು ಸೂರ್ಯ ಸಿಟಿವರೆಗೂ ವಿಸ್ತರಿಸುವ ಪ್ರಸ್ತಾವನೆಗೂ ಸರ್ಕಾರ ಚಾಲನೆ ನೀಡಿದೆ.