ಮೇಕೆದಾಟು ಯೋಜನೆ| ರಾಜಕೀಯ ಲಾಭಕ್ಕಾಗಿ ತಮಿಳುನಾಡು ಕ್ಯಾತೆ: ಸಿದ್ದರಾಮಯ್ಯ ಕಿಡಿ

ಜತೆಗೆ, ಕಾವೇರಿ ವಿವಾದವು ನಾಲ್ಕು ರಾಜ್ಯಗಳಿಗೆ (ತಮಿಳುನಾಡು, ಕರ್ನಾಟಕ, ಕೇರಳ, ಪಾಂಡಿಚೆರಿ) ಸಂಬಂಧಿಸಿದೆ. ಆದರೆ, ತಮಿಳುನಾಡಿನವರು ಮಾತ್ರ ಮೇಕೆದಾಟು ಯೋಜನೆಯ ಕುರಿತು ರಾಜಕೀಯ ಲಾಭಕ್ಕಾಗಿ ಕ್ಯಾತೆ ತೆಗೆಯುತ್ತಲೇ ಇರುತ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.;

Update: 2024-07-29 14:07 GMT

ʻʻಕಾವೇರಿ ವಿವಾದವು ನಾಲ್ಕು ರಾಜ್ಯಗಳಿಗೆ (ತಮಿಳುನಾಡು, ಕರ್ನಾಟಕ, ಕೇರಳ, ಪಾಂಡಿಚೆರಿ) ಸಂಬಂಧಿಸಿದೆ. ಆದರೆ, ತಮಿಳುನಾಡಿನವರು ಮಾತ್ರ ಮೇಕೆದಾಟು ಯೋಜನೆಯ ಕುರಿತು ರಾಜಕೀಯ ಲಾಭಕ್ಕಾಗಿ ಕ್ಯಾತೆ ತೆಗೆಯುತ್ತಲೇ ಇರುತ್ತಾರೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸೋಮವಾರ ಕೆಆರ್‌ಎಸ್‌ಗೆ ಬಾಗಿನ ಅರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ʻʻಈ ಕಾವೇರಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ತೀರ್ಮಾನವಾಗಿದ್ದು, ಸಾಧಾರಣ ವರ್ಷದಲ್ಲಿ ಜಲಾಶಯಗಳು ತುಂಬಿದ ಸಂದರ್ಭದಲ್ಲಿ 177.25 ಟಿಎಂಸಿ ನೀರನ್ನು ಕೊಡಬೇಕೆಂದಿದೆ. 2022-2023ರಲ್ಲಿ ಸುಮಾರು 665 ಟಿಎಂಸಿ ನೀರು ಹರಿದಿದೆ. ಈ ವರ್ಷವೂ ಕೂಡ ಹೆಚ್ಚು ಹೋಗುವ ಸಾಧ್ಯತೆಯಿದೆ. ಈಗಾಗಲೇ 83 ಟಿಎಂಸಿ ಗೂ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗಿದೆ. ಸಂಕಷ್ಟದ ವರ್ಷದಲ್ಲಿ ಅಷ್ಟು ನೀರನ್ನು ಕೊಡಲು ಸಾಧ್ಯವಿಲ್ಲ. ಈ ವರ್ಷ ಹೆಚ್ಚು ನೀರನ್ನು ಕೊಡಲಾಗುವುದು. ಸಮುದ್ರಕ್ಕೆ ಸೇರುವ ಹೆಚ್ಚುವರಿ ನೀರನ್ನು ತಡೆಹಿಡಿಯಲು ಬ್ಯಾಲೆಂನ್ಸಿಂಗ್ ರಿಸರ್ವಾಯರ್ ಕಟ್ಟಿದರೆ ನಮಗಿಂತ ಜಾಸ್ತಿ ತಮಿಳುನಾಡಿಗೆ ಅನುಕೂಲವಾಗುತ್ತದೆʼʼ ಎಂದು ಸಲಹೆ ನೀಡಿದರು.

ʻʻಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಮಂಜೂರಾತಿಯನ್ನು ಕೊಟ್ಟಿಲ್ಲ. ಮಂಜೂರಾತಿ ಕೊಡಿ ಎಂದರೆ ವಿರೋಧ ಪಕ್ಷದವರು ಇದನ್ನು ವಿರೋಧಿಸುತ್ತಾರೆ. ಮಂಡ್ಯ ಲೋಕಸಭಾ ಸದಸ್ಯರು ಒಪ್ಪಿಗೆ ಕೊಡಿಸುವ ಕೆಲಸ ಮಾಡಿದರೆ ಸುಮಾರು 65 ಟಿಎಂಸಿ ನೀರನ್ನು ಹಿಡಿದಿಡಲು ಹಾಗೂ ವಿದ್ಯುತ್ ಉತ್ಪಾಸದಿಲು ಸಾಧ್ಯವಾಗಲಿದೆ," ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೆ ಅವರಿಗೆ ಪರೋಕ್ಷವಾಗಿ ಸವಾಲು ಹಾಕಿದರು. 

ಬೆಂಗಳೂರಿಗೆ ಕುಡಿಯುವ ನೀರು ಹಾಗೂ ನೀರು ಹಿಡಿದಿರುವುದರಿಂದ ಮಳೆ ಬಾರದೇ ಜಲಾಶಯಗಳು ತುಂಬದೇ ಹೋದ ಸಂದರ್ಭಗಳಲ್ಲಿ ತಮಿಳುನಾಡಿಗೆ ನೀರು ಕೊಡಲೂ ಸಾಧ್ಯವಾಗಲಿದೆ. ನಾವು ಈ ಬಗ್ಗೆ ಪಾದಯಾತ್ರೆಯನ್ನೂ ಮಾಡಿದ್ದೇವೆ. ನಮ್ಮ ಮೇಲೆ ಪ್ರಕರಣವನ್ನೂ ದಾಖಲಿಸಿದ್ದಾರೆ. ಮಳೆ ಸರಿಯಾಗಿ ಆದಾಗ ಮಾತ್ರ ತಮಿಳುನಾಡು 177.25 ನೀರನ್ನು ಪಡೆಯಲು ಸಾಧ್ಯವಾಗುತ್ತದೆ, ಕೊರತೆಯಾದರೆ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದು ನಮ್ಮ ಹಕ್ಕು. ಇದನ್ನು ನ್ಯಾಯಮಂಡಲಿ ಹಾಗೂ ಸರ್ವೋಚ್ಛ ನ್ಯಾಯಾಲಯವೂ ಹೇಳಿದೆ. ಇದಕ್ಕೆ ತಮಿಳುನಾಡು ಅನಗತ್ಯವಾಗಿ ತಕರಾರು ಮಾಡುತ್ತಿದ್ದಾರೆ. ಇದರ ಬಗ್ಗೆ ಕರ್ನಾಟಕದ ಲೋಕಸಭಾ ಸದಸ್ಯರು ಒಂದು ದಿನವೂ ಮಾತನಾಡುವುದಿಲ್ಲ. ಆಗಿರುವ ಅನ್ಯಾಯವನ್ನು ಬಿಟ್ಟು ಕೆಲಸಕ್ಕೆ ಬಾರದ ವಿಚಾರಗಳನ್ನು ಮಾತನಾಡುತ್ತಾರೆʼʼ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.

ʻʻಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದು ರೂಪಾಯಿಯನ್ನು ಕೊಟ್ಟಿಲ್ಲ. ಏನೂ ಅನ್ಯಾಯವಾಗಿಲ್ಲ ಎಂದು ಜನರಿಗೆ ತಪ್ಪು ಮಾಹಿತಿ, ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 10 ದಿನ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ 8 ದಿನ ಕಾಲಹರಣ ಮಾಡಿದರು. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ಪ್ರವಾಹ, ಕೃಷಿ, ನೀರಾವರಿ, ಮೇಕೆದಾಟು, ಮಹದಾಯಿ, ಕೃಷ್ಣಾ, ರಾಜ್ಯಕ್ಕೆ ಬರಬೇಕಾದ ಅನುದಾನಗಳ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ರಾಜ್ಯಕ್ಕೆ ಸಂಬಂಧಧವಿಲ್ಲದ ಸುಳ್ಳು ಹೇಳಿಕೊಂಡು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ರಾಜ್ಯದ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದು, ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವ ಶಕ್ತಿ ಅವರಿಗಿದೆʼʼ ಎಂದರು.

ʻʻಜನರ ಆಶೀರ್ವಾದಿಂದ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ. ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ನಮ್ಮ ಸರ್ಕಾರವನ್ನು ದುರ್ಬಲಗೊಳಿಸಲು ಕ್ಷುಲ್ಲಕ ವಿಚಾರಗಳನ್ನು ಇಟ್ಟುಕೊಂಡು, ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಮಾಡಿದಂತೆ ಇಲ್ಲಿಯೂ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಜನರು ಸುಳ್ಳಿಗೆ ಮಾರು ಹೋಗುವುದಿಲ್ಲ ಎಂದು ನಂಬಿದ್ದೇವೆʼʼ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Tags:    

Similar News