ಮೇಕೆದಾಟು ಯೋಜನೆ | ಕೇಂದ್ರ ಪರಿಸರ ಸಚಿವಾಲಯಕ್ಕೆ ಮತ್ತೆ ಅರ್ಜಿ ಸಲ್ಲಿಸಿದ ಕರ್ನಾಟಕ
ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸುವ ವಿಚಾರವಾಗಿ ಚರ್ಚೆ ಮತ್ತೆ ಮುನ್ನೆಲೆಗೆ ಬರುವ ಎಲ್ಲ ಸಾಧ್ಯತೆಗಳಿವೆ. ಮೇಕೆದಾಟು ಯೋಜನೆಯನ್ನು ಪರಿಶೀಲಿಸುವಂತೆ ಕೋರಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಮತ್ತೆ ಅರ್ಜಿ ಸಲ್ಲಿಸಿದೆ.;
ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸುವ ವಿಚಾರ ಮತ್ತೆ ಮುನ್ನೆಲೆಗೆ ಬರುವ ಎಲ್ಲ ಸಾಧ್ಯತೆಗಳಿದ್ದು, ಮೇಕೆದಾಟು ಯೋಜನೆಯನ್ನು ಪುನರ್ ಪರಿಶೀಲಿಸುವಂತೆ ಕೋರಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಮತ್ತೆ ಅರ್ಜಿ ಸಲ್ಲಿಸಿದೆ.
ಕಾವೇರಿ ನೀರಾವರಿ ನಿಗಮ ನಿಯಮಿತದ (ನೀರಾವರಿ ದಕ್ಷಿಣ ವಲಯ) ಮುಖ್ಯ ಎಂಜಿನಿಯರ್ ಮೇ 30 ರಂದು ಸಚಿವಾಲಯದ ರಿವರ್ ವ್ಯಾಲಿ ಆ್ಯಂಡ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಸ್ಟ್ ಕಾರ್ಯದರ್ಶುಗೆ ನಮೂನೆ-1, ಕರಡು ವಿಸ್ತೃತ ಯೋಜನಾ ವರದಿಯ ಸಹಿತ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ, ಸಚಿವಾಲಯವು ಜುಲೈ 2 ರಂದು ಅಗತ್ಯ ವಿವರಗಳನ್ನು ಕೇಳಿತ್ತು. ಡಿಪಿಆರ್ ಅನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಅನುಮೋದಿಸಿದೆಯೇ? ಎಂದು ಕೇಳಿದ್ದ ಸಚಿವಾಲಯ, ನ್ಯಾಯಾಲಯದ ಪ್ರಕರಣಗಳ ವಿವರಗಳು ಮತ್ತು ಅಂತರರಾಜ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಕ್ಲಿಯರೆನ್ಸ್ ಸಲ್ಲಿಸುವಂತೆ ಸೂಚಿಸಿತ್ತು. ಇದಕ್ಕೆ ಕರ್ನಾಟಕ ಸರ್ಕಾರ ಜುಲೈ 9 ರಂದು ಪ್ರತಿಕ್ರಿಯೆ ಕಳುಹಿಸಿದೆ.
ಯೋಜನೆಯ ವಿವಿಧ ತಾಂತ್ರಿಕ ಮತ್ತು ಆರ್ಥಿಕ ಅಂಶಗಳ ಪರಿಶೀಲನೆಗಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೇಕೆದಾಟು ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಹಿಂದಿರುಗಿಸಿದೆ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿತ್ತು.
ಮೇಕೆದಾಟು ಯೋಜನೆಯ ಅನುಷ್ಠಾನವನ್ನು ಪರಿಶೀಲಿಸುಂತೆ ಕೋರಿ ಕರ್ನಾಟಕ ಸರ್ಕಾರವು 2019 ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಪರಿಸರ ಸಚಿವಾಲಯದ ತಜ್ಞರ ಮೌಲ್ಯಮಾಪನ ಸಮಿತಿಯು ತಿರಸ್ಕರಿಸಿತ್ತು. ತಮಿಳುನಾಡು ಸರ್ಕಾರದೊಂದಿಗೆ ಸೌಹಾರ್ದಯುತವಾಗಿ ವಿಷಯಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿತ್ತು.
ಮೇಕೆದಾಟು ಯೋಜನೆಯು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮತ್ತು 400 MW ಜಲವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ.