ಮೇಕೆದಾಟು ವಿವಾದ | ಡಿಎಂಕೆ ಪ್ರಣಾಳಿಕೆಗೆ ಮೌನವಾಗಿದ್ದೇಕೆ?: ಡಿಕೆಶಿಗೆ ಹೆಚ್ಡಿಕೆ ಪ್ರಶ್ನೆ
ʼʼಕಾಂಗ್ರೆಸ್, ಡಿಎಂಕೆ ಅಣ್ತಮ್ಮ ಪಕ್ಷಗಳಲ್ಲವೇ? ಮೇಕೆದಾಟು ಮಾಡಲು ಕರ್ನಾಟಕದವರಿಗೆ ಬಿಡೋದೇ ಇಲ್ಲ ಎಂದು ಡಿಎಂಕೆ ಚುನಾವಣೆ ಪ್ರಣಾಳಿಕೆಯಲ್ಲೇ ಘೋಷಣೆ ಮಾಡಿದೆ. ಇದಕ್ಕೂ ನಿಮ್ಮದು, ನಿಮ್ಮ ಪಕ್ಷದ್ದು 'ಮೌನಂ ಶರಣಂ ಗಚ್ಛಾಮಿ!! ನಿಮ್ಮ ಸರ್ಕಾರದಲ್ಲಿ ಏನೇನ್ ನಡೀತಿದೆ ಶಿವಕುಮಾರ್ ಅವರೇ? ಪೆನ್ನು ಪೇಪರ್ ಕೂಡ 'ಮೌನಂ ಶರಣಂ ಗಚ್ಛಾಮಿ' ಎನ್ನುತ್ತಿವೆಯಾ.. ಹೇಗೆ? ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ʻʻಅಧಿಕಾರ ಇರುವುದು ನಿಮ್ಮ ಕೈಯ್ಯಲ್ಲಿ. ಜನ ಪೆನ್ನು-ಪೇಪರ್ ಕೊಟ್ಟಿರುವುದೂ ನಿಮಗೇ. ಕೆಲಸ ಮಾಡಿ ಎಂದರೆ ಹಳೆಯದನ್ನು ಕೆದಕುತ್ತಿದ್ದೀರಿ, ಯಾಕೆ? ಜನರು ಕೊಟ್ಟ ಪೆನ್ನು-ಪೇಪರ್ ಹಿಡಿದುಕೊಳ್ಳುವ ನಿಮ್ಮ ಶಕ್ತಿ ಕೇವಲ ಹತ್ತೇ ತಿಂಗಳಿಗೆ ನಿಸ್ತೇಜವಾಯಿತಾ ಡಿಕೆ ಶಿವಕುಮಾರ್ ಅವರೇ? ಕೈಲಾಗದೆ ಮೈ ಪರಚಿಕೊಳ್ಳುವುದು ಎಂದರೆ ಇದೆ ಅಲ್ಲವೇ?ʼʼ ಎಂದು ಕೆಣಕಿದ್ದಾರೆ.
ʻʻಅಧಿಕಾರ ಇದ್ದಾಗಲೇ ಕುಮಾರಸ್ವಾಮಿ ಅವರು ಮೇಕೆದಾಟು ಮಾಡಲಿಲ್ಲ ಎಂದು ಹೇಳಿದ್ದೀರಿ! ಕುಮಾರಸ್ವಾಮಿ ಏನೂ ಮಾಡಿಯೇ ಇಲ್ಲವೆಂದು ಕಟ್ಟುಕಥೆ ಕಟ್ಟಿದ್ದೀರಿ. ಎಷ್ಟಾದರೂ ನೀವು ಸುಳ್ಳು ಫ್ಯಾಕ್ಟರಿಯ ಮೇಟಿ! ಮೇಕೆದಾಟುಗಾಗಿ ನಾನು ಏನೆಲ್ಲಾ ಮಾಡಿದೆ ಎನ್ನುವುದು ನಿಮಗೇಗೆ ಗೊತ್ತಾದೀತು? ಸತ್ಯಕ್ಕೂ ನಿಮಗೂ ಎಣ್ಣೆ ಶೀಗೇಕಾಯಿ ಸಂಬಂಧ! ಹೌದಲ್ಲವೇ?ʼʼ ಎಂದು ಕುಟುಕಿದ್ದಾರೆ.
ʻʻಮೇಕೆದಾಟು ನಿರ್ಮಾಣಕ್ಕೆ 2018-19ರಲ್ಲೇ ಸಮಗ್ರ ಯೋಜನಾ ವರದಿ (DPR) ಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು ಅಂದಿನ ನನ್ನ ಸರ್ಕಾರ. ಆ ಸರ್ಕಾರದಲ್ಲಿ ನೀವು ಸಚಿವರಿದ್ದಿರಿ. ಈ ಮಾಹಿತಿಯೇ ನಿಮಗಿಲ್ಲವೆಂದರೆ ಹೇಗೆ? ಇದೆಂಥಾ ಹತವಿಧಿ!? ಹಾಗಾದರೆ, ಜನರು ಕೊಟ್ಟ ಪೆನ್ನು-ಪೇಪರ್ ಗತಿ ಏನು?ʼʼ ಎಂದು ಕೇಳಿದ್ದಾರೆ.
ʻʻ2006-2007ರಲ್ಲೇ ಮಹಾದಾಯಿ ಯೋಜನೆಗೆ ಸಂಪುಟದಲ್ಲಿಯೇ ಒಪ್ಪಿಗೆ ನೀಡಿ, ₹100 ಕೋಟಿ ಮಂಜೂರು ಮಾಡಿ ಆಗಲೇ ಶಂಕುಸ್ಥಾಪನೆಯನ್ನೂ ನೆರವೇರಿಸಲಾಯಿತು. ಆಮೇಲೆ 5 ವರ್ಷ ನಿಮ್ಮದೇ ಕಾಂಗ್ರೆಸ್ ಸರ್ಕಾರ ಇತ್ತಲ್ಲಾ..? ಏನ್ ಮಾಡ್ತಾ ಇದ್ದಿರಿ ಶಿವಕುಮಾರ್ ಅವರೇ? ಆಗ ಯಾಕೆ ತಾವು ನುಡಿದಂತೆ ನಡೆಯಲಿಲ್ಲ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.
ʻʻಮೇಕೆದಾಟು, ಮಹದಾಯಿ ಸೇರಿ ರಾಜ್ಯದ ನೀರಾವರಿ ಯೋಜನೆಗಳಿಗಾಗಿ ನಾನು ಮುಖ್ಯಮಂತ್ರಿಯಾಗಿ ಆಯಾ ಇಲಾಖೆಯ ಕೇಂದ್ರ ಸಚಿವರನ್ನು ಎಷ್ಟು ಸಲ ಭೇಟಿಯಾಗಿದ್ದೆ ಎನ್ನುವ ಮಾಹಿತಿಯೂ ನಿಮಗಿಲ್ಲವಲ್ಲ? ನಿತಿನ್ ಗಡ್ಕರಿ ಅವರೊಬ್ಬರನ್ನೇ ನಾನು 10 ಸಲ ಭೇಟಿಯಾಗಿದ್ದೆʼʼ ಎಂದು ತಿಳಿಸಿದ್ದಾರೆ.
ʻʻ90ರ ಇಳಿವಯಸ್ಸಿನಲ್ಲಿಯೂ ದೇವೇಗೌಡರು ಸಂಸತ್ತಿನ ಒಳ-ಹೊರಗೆ ರಾಜ್ಯಕ್ಕಾಗಿ ಅವಿರತವಾಗಿ ಹೋರಾಡುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ಅವರು ಮೇಕೆದಾಟು ಬಗ್ಗೆ ದನಿ ಎತ್ತಿದರೆ, ರಾಜ್ಯದವರೇ ಆದ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮೌನವ್ರತ ಮಾಡುತ್ತಿದ್ದರು! ನಿಮ್ಮ ಪಕ್ಷದ ಉಳಿದ ಸದಸ್ಯರು ನಿಮ್ಮ ಅಧ್ಯಕ್ಷರು ಮಾಡಿದ್ದನ್ನೇ ಚಾಚೂ ತಪ್ಪದೇ ಪಾಲಿಸುತ್ತಿದ್ದರು!ʼʼ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.