ಬಿಬಿಎಂಪಿ ವಿಭಜನೆ: ಭಾಷಾ ಸಂಘರ್ಷ, ಆರ್ಥಿಕ ಅಸಮತೋಲನದ ಆತಂಕ

ಸಿಎಂ ಸಿದ್ಧರಾಮಯ್ಯ ಸರ್ಕಾರದ ನಿರ್ಣಯವು ಅತ್ಯಂತ ಅವೈಜ್ಞಾನಿಕವಾಗಿದೆ ಮತ್ತು ಇಲ್ಲಿನ ʼಮೂಲ ನಿವಾಸಿʼಗಳನ್ನು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಸುವ ದೊಡ್ಡ ಸಂಚು ಎಂಬುದು ಅತ್ಯಂತ ಸ್ಪಷ್ಟವಾಗಿದೆ ಎಂದು ಬಿಜೆಪಿ ಮುಖಂಡ ರಮೇಶ್‌ ಎನ್‌. ಆರ್‌. ತಿಳಿಸಿದ್ದಾರೆ.;

Update: 2025-07-22 10:07 GMT

ಬಿಬಿಎಂಪಿ 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಐದು ಪ್ರತ್ಯೇಕ ಪಾಲಿಕೆಗಳಾಗಿ ವಿಭಜಿಸುವ ರಾಜ್ಯ ಸರ್ಕಾರದ ನಿರ್ಧಾರವು ಆಡಳಿತಾತ್ಮಕ ಸುಧಾರಣೆ ಎಂಬ ಸರಳ ಚೌಕಟ್ಟನ್ನು ಮೀರಿ, ರಾಜಕೀಯ, ಭಾಷಾ ಮತ್ತು ಆರ್ಥಿಕ ಆಯಾಮಗಳನ್ನು ಹೊಂದಿರುವ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ.

ಸರ್ಕಾರದ ಈ ನಡೆ ಬೆಂಗಳೂರಿನ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶವನ್ನು ಅಧಿಕೃತವಾಗಿ ಹೊಂದಿದ್ದರೂ, ಇದರ ಹಿಂದೆ ರಾಜಕೀಯ ಲೆಕ್ಕಾಚಾರ ಮತ್ತು ಬೆಂಗಳೂರಿನ ಜನಾಂಗೀಯ ಸ್ವರೂಪವನ್ನೇ ಬದಲಿಸುವ ಸಂಚು ಅಡಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಎತ್ತಿರುವ ಪ್ರಮುಖ ಆತಂಕವಿದು. ಅವರ ಪ್ರಕಾರ, ಹೊಸದಾಗಿ ರಚನೆಯಾಗಲಿರುವ ಐದು ಪಾಲಿಕೆಗಳ ಪೈಕಿ, ಕೇವಲ 'ಪಶ್ಚಿಮ ಪಾಲಿಕೆ'ಯಲ್ಲಿ ಮಾತ್ರ ಕನ್ನಡಿಗರು ಬಹುಸಂಖ್ಯಾತರಾಗಲಿದ್ದಾರೆ. ಉಳಿದ ನಾಲ್ಕು ಪಾಲಿಕೆಗಳಾದ ಕೇಂದ್ರ, ಉತ್ತರ, ದಕ್ಷಿಣ ಮತ್ತು ಪೂರ್ವ ಪಾಲಿಕೆಗಳಲ್ಲಿ ಉರ್ದು, ತಮಿಳು, ತೆಲುಗು ಮತ್ತು ಉತ್ತರ ಭಾರತೀಯ ಭಾಷಿಕರು ನಿರ್ಣಾಯಕ ಸಂಖ್ಯೆಯಲ್ಲಿರಲಿದ್ದಾರೆ.

ಇದರ ನೇರ ಪರಿಣಾಮವೆಂದರೆ, ಐದರಲ್ಲಿ ನಾಲ್ಕು ಪಾಲಿಕೆಗಳ ಮೇಯರ್ ಸ್ಥಾನಗಳು ಎಂದಿಗೂ ಕನ್ನಡಿಗರಿಗೆ ದಕ್ಕುವುದಿಲ್ಲ. ಇದು, ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಕನ್ನಡಿಗರನ್ನು ಆಡಳಿತಾತ್ಮಕವಾಗಿ ನೇಪಥ್ಯಕ್ಕೆ ಸರಿಸುವ ವ್ಯವಸ್ಥಿತ ಪ್ರಯತ್ನ ಎಂಬುದು ಪ್ರಮುಖ ಆರೋಪವಾಗಿದೆ.

ಬಿಬಿಎಂಪಿಯಲ್ಲಿ ಹಿಡಿತ ಸಾಧಿಸಲು ಕಾಂಗ್ರೆಸ್ ನಿರಂತರವಾಗಿ ವಿಫಲವಾಗುತ್ತಿರುವುದೇ ಈ ವಿಭಜನೆಯ ಹಿಂದಿನ ರಾಜಕೀಯ ಪ್ರೇರಣೆ ಎಂಬುದು ಬಿಜೆಪಿಯ ವಾದ. 2007ರಲ್ಲಿ ಬಿಬಿಎಂಪಿ ರಚನೆಯಾದ ನಂತರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಹೀಗಾಗಿ, ಬಿಜೆಪಿಯ ಹಿಡಿತವನ್ನು ಮುರಿಯಲು, ಪಾಲಿಕೆಯನ್ನು ವಿಭಜಿಸಿ ರಾಜಕೀಯ ಲಾಭ ಪಡೆಯುವ ದುರುದ್ದೇಶ ಕಾಂಗ್ರೆಸ್‌ಗೆ ಇದೆ ಎಂದು ಆರೋಪಿಸಲಾಗಿದೆ.

ಆರ್​ಆರ್​​ ನಗರ ಮೂರು ಹೋಳು

ಇದಕ್ಕೆ ಪೂರಕವಾಗಿ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಭಾರೀ ಮುನ್ನಡೆ ನೀಡಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರವನ್ನು ಮೂರು ಪಾಲಿಕೆಗಳಿಗೆ ಹಂಚಿರುವುದು ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪದ್ಮನಾಭನಗರ ಕ್ಷೇತ್ರವನ್ನು ವಿಭಜಿಸಿರುವುದು 'ಸೇಡಿನ ರಾಜಕಾರಣ'ಕ್ಕೆ ನಿದರ್ಶನ ಎಂದು ವಿಶ್ಲೇಷಿಸಲಾಗುತ್ತಿದೆ.

ಆರ್ಥಿಕ ಅಸಮತೋಲನ ಮತ್ತು ಅವೈಜ್ಞಾನಿಕ ವಿಭಜನೆ

ಈ ವಿಭಜನೆಯು ಆರ್ಥಿಕವಾಗಿ ತೀವ್ರ ಅಸಮತೋಲನ ಸೃಷ್ಟಿಸಲಿದೆ. ಉದಾಹರಣೆಗೆ, ಪೂರ್ವ ಪಾಲಿಕೆಯು ವಾರ್ಷಿಕ 1,500 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿ 'ಶ್ರೀಮಂತ' ಪಾಲಿಕೆಯಾದರೆ, ಕೇಂದ್ರ ಪಾಲಿಕೆಯು ಕೇವಲ 400 ಕೋಟಿ ರೂ. ಸಂಗ್ರಹಿಸಿ 'ಬಡ' ಪಾಲಿಕೆಯಾಗಿ ಸಂಕಷ್ಟಕ್ಕೆ ಸಿಲುಕಲಿದೆ. ಇದು ಪಾಲಿಕೆಗಳ ನಡುವೆ ಅಭಿವೃದ್ಧಿಯಲ್ಲಿ ತಾರತಮ್ಯಕ್ಕೆ ಎಡೆಮಾಡಿಕೊಡುತ್ತದೆ.

ಬೆಂಗಳೂರಿಗಿಂತಲೂ ಹೆಚ್ಚು ಜನಸಂಖ್ಯೆ ಇರುವ ಮುಂಬೈ, ದೆಹಲಿ, ಕೋಲ್ಕತ್ತಾದಂತಹ ಮಹಾನಗರಗಳಲ್ಲೇ ಪಾಲಿಕೆ ವಿಭಜಿಸಿಲ್ಲ. ದೆಹಲಿಯಲ್ಲಿ ಮೂರು ಪಾಲಿಕೆಗಳನ್ನು ಮಾಡಿ, ಆರ್ಥಿಕ ಸಮಸ್ಯೆಯಿಂದಾಗಿ ಪುನಃ ಒಂದಾಗಿಸಿದ ಉದಾಹರಣೆ ನಮ್ಮ ಕಣ್ಣ ಮುಂದಿರುವಾಗ, ಬೆಂಗಳೂರನ್ನು ಐದು ಭಾಗಗಳಾಗಿ ವಿಭಜಿಸುವ ಅವಶ್ಯಕತೆ ಇತ್ತೇ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ಸರ್ಕಾರದ ನಿಲುವು ಮತ್ತು ಪರ್ಯಾಯ ಮಾರ್ಗ

ಸದ್ಯಕ್ಕೆ, ವಿರೋಧ ಪಕ್ಷಗಳೊಂದಿಗೆ ಚರ್ಚಿಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದು ಸರ್ಕಾರದ ಮೇಲಿನ ಒತ್ತಡಕ್ಕೆ ಸಿಕ್ಕ ತಾತ್ಕಾಲಿಕ ಮನ್ನಣೆಯಾಗಿರಬಹುದು. ಆಡಳಿತ ವಿಕೇಂದ್ರೀಕರಣ ಮಾಡುವುದೇ ಸರ್ಕಾರದ ಉದ್ದೇಶವಾಗಿದ್ದರೆ, ಬಿಬಿಎಂಪಿಯನ್ನು ವಿಭಜಿಸುವ ಬದಲು, ಆರರಿಂದ ಹತ್ತು ವಲಯಗಳನ್ನು ರಚಿಸಿ, ಐಎಎಸ್ ಅಧಿಕಾರಿಗಳನ್ನು ವಲಯ ಆಯುಕ್ತರನ್ನಾಗಿ ನೇಮಿಸಿ ಅಧಿಕಾರವನ್ನು ಹಂಚುವುದು ಉತ್ತಮ ಪರ್ಯಾಯ ಎಂಬ ಸಲಹೆಯೂ ಮುಂದಿದೆ.

Tags:    

Similar News