ವೈದ್ಯರ ನಿರ್ಲಕ್ಷ್ಯ: ಚಿತ್ರದುರ್ಗದಲ್ಲಿ ಸಿಸೇರಿಯನ್ಗೆ ಒಳಗಾಗಿದ್ದ ಬಾಣಂತಿ ಸಾವು
ಸೀಜರಿನ್ ಆಪರೇಷನ್ ಸಮರ್ಪಕವಾಗಿ ಆಗದ ಕಾರಣ ನಂಜು ಆಗಿದೆ. ಹೊಲಿಗೆ ಹಾಕಿದ ಜಾಗದಲ್ಲಿ ಕೀವು ತುಂಬಿಕೊಂಡಿತ್ತು. ಹೀಗಾಗಿ ರೋಜಮ್ಮಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಲಾಗಿದೆ.
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ನಡುವೆ ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿಯೊಬ್ಬರು ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ ಎಂಬ ಆರೋಪಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಗನೂರುಹಟ್ಟಿ ಗ್ರಾಮದ ರೋಜಮ್ಮ(25) ಅಕ್ಟೋಬರ್ 31ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೈದ್ಯೆ ಡಾ.ರೂಪಶ್ರೀ ಸೀಜರಿನ್ ಆಪರೇಷನ್ ಮಾಡಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಐದು ದಿನಗಳ ಬಳಿಕ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಬುಧವಾರ ನಾಯಕನಹಟ್ಟಿ ಸರ್ಕಾರಿ ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ರೋಜಮ್ಮ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೀಜರಿನ್ ಆಪರೇಷನ್ ಸಮರ್ಪಕವಾಗಿ ಆಗದ ಕಾರಣ ನಂಜು ಆಗಿದೆ. ಹೊಲಿಗೆ ಹಾಕಿದ ಜಾಗದಲ್ಲಿ ಕೀವು ತುಂಬಿಕೊಂಡಿತ್ತು. ಹೀಗಾಗಿ ರೋಜಮ್ಮಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣವಾಗಿದೆ. ಆಸ್ಪತ್ರೆಗೆ ಬಂದಾಗ ದುಡ್ಡು ಕೊಡದೆಯೇ ಕೆಲಸವೇ ಮಾಡಲ್ಲ. ಮಾಡುವ ಕೆಲಸದಲ್ಲೂ ನಿರ್ಲಕ್ಷ ತೋರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮೃತ ರೋಜಮ್ಮಗೆ 40ದಿನದ ಪುಟ್ಟ ಮಗು ಸೇರಿ ಮೂವರು ಮಕ್ಕಳಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸೂಕ್ತ ಪರಿಹಾರ ನೀಡಬೇಕೆಂಬುದು ಸಂಬಂಧಿಕರು ಆಗ್ರಹಿಸಿದ್ದಾರೆ.
ಕನ್ನಡಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಆವರಣದಲ್ಲಿ ಜಮಾಯಿಸಿ ವೈದ್ಯಕೀಯ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಹಾಗೂ ಡಿಹೆಚ್ಓ ಕಚೇರಿಗೆ ತೆರಳಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಜಿಲ್ಲಾಸ್ಪತ್ರೆಯ ಆರ್ಎಂಓ ಡಾ. ಆನಂದ ಪ್ರಕಾಶ್ ಪ್ರತಿಕ್ರಿಯಿಸಿದ್ದು, ಪೋಸ್ಟ್ ಮಾರ್ಟ್ಂ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸರಣಿ ಬಾಣಂತಿಯರ ಸಾವು ಸಂಭವಿಸಿತ್ತು. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣವೇ ಸಾವುಗಳಿಗೆ ಕಾರಣವಾಗಿದ್ದು, ಪಶ್ಚಿಮ ಬಂಗಾ ಫಾರ್ಮಾಸೂಟಿಕಲ್ ಕಂಪನಿ ಪೂರೈಸಿದ 92 ಐವಿ ದ್ರಾವಣದ ಸ್ಯಾಂಪಲ್‌ಗಳ ವರಿದಿಯಲ್ಲಿ ಫಂಗಸ್ ಸೇರಿದಂತೆ ಹಲವು ಬ್ಯಾಕ್ಟಿರಿಯಾಗಳಿರುವುದು ಪತ್ತೆಯಾಗಿತ್ತು.