ಲಾಲ್‌ಬಾಗ್‌ ಹಲಸು- ಮಾವು ಮೇಳ | ಮೇ 24ರಿಂದ ಆರಂಭ; ಭರ್ಜರಿ ಸಿದ್ಧತೆ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 24ರಿಂದ ಜೂನ್ 10ರ ವರೆಗೆ ಮಾವು- ಹಲಸು ಮೇಳ ನಡೆಯಲಿದೆ. 18 ದಿನಗಳ ಕಾಲ ಈ ಮೇಳ ನಡೆಯಲಿದ್ದು, ಮೇಳಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

By :  Hitesh Y
Update: 2024-05-21 10:32 GMT
ಲಾಲ್‌ಬಾಗ್‌ನಲ್ಲಿ ಮೇ 24ರಿಂದ ನಡೆಯಲಿರುವ ಮಾವು ಮತ್ತು ಹಲಸು ಮೇಳದ ಮಳಿಗೆಗಳ ಚಿತ್ರ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 24ರಿಂದ ಜೂನ್ 10ರ ವರೆಗೆ ಮಾವು- ಹಲಸು ಮೇಳ ನಡೆಯಲಿದೆ. ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ 18 ದಿನಗಳ ಕಾಲ ಈ ಮೇಳ ನಡೆಯಲಿದ್ದು, ಮಾವು - ಹಲಸಿನ ಮೇಳಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜ್ಯದಲ್ಲಿ ಕಳೆದ ವರ್ಷ ಎದುರಾಗಿದ್ದ ಬರಗಾಲದಿಂದ ಮಾವು ಇಳವರಿ ಪ್ರಮಾಣವೂ ಕುಸಿತ ಕಂಡಿದ್ದು, ಮಾವು ಬೆಲೆ ದುಬಾರಿಯಾಗಿದೆ. ಕರ್ನಾಟಕದಲ್ಲಿ 1.49 ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತದೆ. ಅದರಲ್ಲಿ ಅಂದಾಜು 12ರಿಂದ 15 ಲಕ್ಷ ಮೆಟ್ರಿಕ್ ಟನ್ ಇಳವರಿ ಬರುತ್ತದೆ. ಆದರೆ, ಈ ಬಾರಿ ಶೇ.30ರಷ್ಟು ಮಾತ್ರ ಬೆಳೆ ಬಂದಿದೆ. ತೀವ್ರ ಬಿಸಿಲು, ಶುಷ್ಕ ಹವಾಮಾನದ ವಾತಾವರಣ ಹಾಗೂ ಅನಿರೀಕ್ಷಿತ ಮಳೆಯಿಂದಾಗಿ 5 ಲಕ್ಷ ಮೆಟ್ರಿಕ್ ಟನ್‌ನಷ್ಟು ಮಾತ್ರ ಇಳವರಿ ಬಂದಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾವು- ಹಲಸು ಮೇಳದಲ್ಲಿ ಏನೇನಿರಲಿದೆ?

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ಮೇಳವು ಹಲವು ವಿಶೇಷತೆಗಳಿಂದ ಕೂಡಿವೆ. ಈ ಬಾರಿ ಮೇಳದಲ್ಲಿ ಮಲಗೋವಾ, ರಸಪುರಿ, ಸೆಂದೂರ, ಮಲ್ಲಿಕಾ, ತೋತಾಪುರಿ ಹಾಗೂ ನೀಲಂ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳ ಮಾರಾಟ ನಡೆಯಲಿದೆ. ಅಲ್ಲದೇ ಮಾವಿನ ಹಣ್ಣಿನಿಂದ ಮಾಡಲಾಗಿರುವ ಅಪ್ಪೆಮಿಡಿ ಉಪ್ಪಿನಕಾಯಿ ಮತ್ತು ಮಿಡಿ ಉಪ್ಪಿನಕಾ ಸಹ ಲಭ್ಯವಿರಲಿದೆ. ಮತ್ತೊಂದು ವಿಶೇಷವೆಂದರೆ, ಮಾವಿನ ಹಣ್ಣಿನ ಜೊತೆಗೆ ಹಲಸು ಮೇಳವೂ ನಡೆಯಲಿದ್ದು, ಹಲಸಿನ ಹಣ್ಣು ಹಾಗೂ ಹಲಸಿನ ಹಣ್ಣಿನಿಂದ ಮಾಡಿದ ಪದಾರ್ಥಗಳು ಮೇಳದಲ್ಲಿ ಲಭ್ಯವಿರಲಿದೆ.

ಎಲ್ಲೆಲ್ಲಿ ಮಾವು ಮೇಳ

ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಾವು ಮೇಳ ಆಯೋಜಿಸಲಾಗುತ್ತಿದ್ದು, ಜನರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಕೊಪ್ಪಳ, ಬೆಳಗಾವಿ, ಧಾರವಾಡ, ಅಂಕೋಲಾ, ರಾಯಚೂರು, ಚಿತ್ರದುರ್ಗ ರಾಮನಗರ ಹಾಗೂ ಕೋಲಾರ ಸೇರಿದಂತೆ ವಿವಿಧ ಭಾಗದಲ್ಲಿ ಮಾವು ಮೇಳವನ್ನು ಆಯೋಜಿಸಲಾಗಿದ್ದು, ರೈತರಿಗೆ ಮಾವು ಹಾಗೂ ಹಲಸು ಮಾರಾಟ ಮಾಡಲು ಮಳಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಕಡಿಮೆ ಇಳವರಿಯಿಂದ ಬೆಲೆ ಏರಿಕೆ

ʻಈ ಬಾರಿ ಮಾವು ಇಳವರಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಮಾವಿನ ಬೆಲೆ ಹೆಚ್ಚಳವಾಗಿತ್ತು. ಈಗ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಬಾರಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 24ರಿಂದ ನಡೆಯಲಿರುವ ಮಾವು ಮತ್ತು ಹಲಸಿನ ಮೇಳಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆʼ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಸಿ.ಜಿ ನಾಗರಾಜ್ ತಿಳಿಸಿದರು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಈ ಬಾರಿ ಮಾವು ಇಳವರಿ ಈಗಾಗಲೇ ಕುಸಿತ ಕಂಡಿದೆ. ರೈತರಿಗೆ ಅಲ್ಪ ಪ್ರಮಾಣದಲ್ಲಿ ಇಳವರಿ ಸಿಕ್ಕಿದೆ. ಹೀಗಾಗಿ, ಮಾವು ಮಾರಾಟದ ರಿಯಾಯಿತಿ ನೀಡುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲʼ ಎಂದು ತಿಳಿಸಿದರು.

ರೈತರಿಂದ ನೇರ ಮಾವು ಮಾರಾಟ

ಮಾವು ಮಾರಾಟಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಮಾವು ಮಂಡಳಿ ರೈತರಿಗೆ ಸಹಕಾರ ನೀಡುತ್ತಿವೆ. ಇದರೊಂದಿಗೆ ರೈತರು ಸಹ ನೇರ ಮಾವು ಮಾರಾಟ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅಮೆಜಾನ್, ಫ್ಲಿಪ್‌ಕಾರ್ಟ್‌ಗಳನ್ನು ಹೊರತುಪಡಿಸಿ, 14 ಆನ್‌ಲೈನ್‌ ಮಾರುಕಟ್ಟೆಯ ಮೂಲಕ ರೈತರು ನೇರವಾಗಿ ಮಾವು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಭಾರತೀಯ ಅಂಚೆ ಇಲಾಖೆಯೂ ಸಹಕಾರ ನೀಡುತ್ತಿದೆ. ಕೆಲವು ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ಗಳೊಂದಿಗೂ ರೈತರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನಾಗರಾಜ್ ಮಾಹಿತಿ ನೀಡಿದರು.

ಮಾವು ಪ್ರವಾಸ ಮೇಳ ಇಲ್ಲ?

ಈ ಬಾರಿ ಮಾವು ಪ್ರವಾಸ ಮೇಳ ಆಯೋಜನೆ ಸಾಧ್ಯತೆ ಬಹುತೇಕ ಕ್ಷೀಣಿಸಿದೆ. ಹವಾಮಾನ ವೈಪರೀತ್ಯ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಮಾವು ಪ್ರವಾಸ ಮೇಳ ಆಯೋಜಿಸಲಾಗಿಲ್ಲ. ಕರ್ನಾಟಕದಲ್ಲಿ ಗರಿಷ್ಠ ಉಷ್ಣಾಂಶವು ಗಣನೀಯ ಪ್ರಮಾಣದಲ್ಲಿ ದಾಖಲಾಗಿತ್ತು. ಆ ಸಂದರ್ಭದಲ್ಲಿ ಮಾವು ಪ್ರವಾಸ ಆಯೋಜಿಸಲು ಸಾಧ್ಯವಾಗಲಿಲ್ಲ. ನಂತರದ ದಿನಗಳಲ್ಲಿ ಲೋಕಸಭೆ ಚುನಾವಣೆ ಹಾಗೂ ಚುನಾವಣೆ ನೀತಿಸಂಹಿತೆ ಜಾರಿಯಾಗಿತ್ತು. ಇನ್ನು ಇದೀಗ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಮಾವು ಪ್ರವಾಸ ಮೇಳ ಆಯೋಜಿಸಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.

Tags:    

Similar News