ಬೀದಿ ನಾಯಿ ದಾಳಿಗೆ ವ್ಯಕ್ತಿ ಬಲಿ: ಕಣ್ಣುಗುಡ್ಡೆಯನ್ನೇ ಕಿತ್ತು ರಕ್ಕಸನ ಹಾಗೆ ವರ್ತಿಸಿದ ಶ್ವಾನ
ಮೃತ ವ್ಯಕ್ತಿಯನ್ನು ಕುಂಪಲದ ದಯಾನಂದ(60) ಎಂದು ಗುರುತಿಸಲಾಗಿದೆ. ಮದ್ಯ ವ್ಯಸನಿಯಾಗಿದ್ದ ದಯಾನಂದ್ ಗುರುವಾರ(ನ.13) ರಾತ್ರಿ ಅಂಗಡಿಯೊಂದರ ಬಳಿ ಮಲಗಿದ್ದರು. ಈ ವೇಳೆ ನಾಯಿ ಏಕಾಏಕಿ ದಾಳಿ ಮಾಡಿದೆ.
ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರುತ್ತಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ. ಈ ಭಯಾನಕತೆಗೆ ಇಂಬು ಕೊಡುವಂತೆ, ಉಳ್ಳಾಲದ ಕುಂಪಲ ಬೈಪಾಸ್ ಬಳಿ ಬೀದಿ ನಾಯಿಯೊಂದು 60 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಅಟ್ಟಾಡಿಸಿ ಕೊಂದು, ಕಣ್ಣುಗುಡ್ಡೆಯನ್ನೇ ಕಿತ್ತು ಹಾಕಿರುವ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕುಂಪಲ ನಿವಾಸಿ ದಯಾನಂದ (60) ಮೃತ ದುರ್ದೈವಿ. ವರದಿಗಳ ಪ್ರಕಾರ, ಮದ್ಯವ್ಯಸನಿಯಾಗಿದ್ದ ದಯಾನಂದ ಅವರು ಗುರುವಾರ ರಾತ್ರಿ ಅಂಗಡಿಯೊಂದರ ಬಳಿ ಮಲಗಿದ್ದರು. ಈ ವೇಳೆ ದಾಳಿ ಮಾಡಿದ ನಾಯಿಯಿಂದ ತಪ್ಪಿಸಿಕೊಳ್ಳಲು ಅವರು ಯತ್ನಿಸಿದರೂ, ಶ್ವಾನವು ಅವರನ್ನು ಅಟ್ಟಾಡಿಸಿ, ಪಾಳು ಮನೆಯೊಂದರ ಬಳಿ ಎಳೆದೊಯ್ದು ಕೊಂದು ಹಾಕಿದೆ. ಶುಕ್ರವಾರ ಬೆಳಿಗ್ಗೆ ಅಂಗಡಿ ಮಾಲೀಕರು ರಸ್ತೆಯಲ್ಲಿ ಕಣ್ಣುಗುಡ್ಡೆ ಬಿದ್ದಿರುವುದನ್ನು ಕಂಡು ಆಘಾತಕ್ಕೊಳಗಾದರು. ನಂತರ ಪರಿಶೀಲಿಸಿದಾಗ, ಸ್ವಲ್ಪ ದೂರದಲ್ಲಿ ದಯಾನಂದ ಅವರ ರಕ್ತಸಿಕ್ತ ಮೃತದೇಹ ಪತ್ತೆಯಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ, ಸಾರ್ವಜನಿಕರ ಆಕ್ರೋಶ
ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ದೂರುಗಳನ್ನು ಕಡೆಗಣಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹೆಚ್ಚಿದ ಶ್ವಾನ ಹಾವಳಿ
ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವೆಡೆ ಬೀದಿ ನಾಯಿಗಳ ದಾಳಿಗಳು ಹೆಚ್ಚಾಗಿದ್ದು, ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ.ಆಗಸ್ಟ್‌ನಲ್ಲಿ ಕೊಡಿಗೆಹಳ್ಳಿಯಲ್ಲಿ ವೃದ್ಧರೊಬ್ಬರು ವಾಕಿಂಗ್‌ಗೆ ತೆರಳಿದ್ದಾಗ ನಾಯಿ ದಾಳಿಗೆ ಬಲಿಯಾಗಿದ್ದರು.ಕುಕನೂರಿನಲ್ಲಿ ಒಂದೇ ದಿನ 20ಕ್ಕೂ ಹೆಚ್ಚು ಜನರನ್ನು ನಾಯಿಯೊಂದು ಕಚ್ಚಿ ಗಾಯಗೊಳಿಸಿತ್ತು. ಅಂಗಡಿಗೆ ತೆರಳುತ್ತಿದ್ದ ಎಲ್‌ಕೆಜಿ ಬಾಲಕಿಯ ಮೇಲೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ್ದವು. ವಿವಿ ಆವರಣದಲ್ಲಿ ವಿದ್ಯಾರ್ಥಿನಿಯರ ಮೇಲೆಯೂ ನಾಯಿ ದಾಳಿ ನಡೆದಿತ್ತು.