Malnad State Demand | ಮತ್ತೆ ಮೊಳಗಿದ ಪ್ರತ್ಯೇಕ ರಾಜ್ಯ ಕೂಗು: ʼಚಲೋ ಲಿಂಗನಮಕ್ಕಿʼ ಆರಂಭ
ವಿವಿಧ ಜಲವಿದ್ಯುತ್ ಮತ್ತು ನೀರಾವರಿ ಯೋಜನಾ ಸಂತ್ರಸ್ತರು ಸೇರಿದಂತೆ ರೈತರ ಸಾಗುವಳಿ ಭೂಮಿಯನ್ನು ಕಿತ್ತುಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಮಲೆನಾಡು ರೈತರು, ಸಾಗರ ಪಟ್ಟಣದಲ್ಲಿ ಆರಂಭಿಸಿರುವ ಭೂ ಹಕ್ಕು ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕಲು ರೈತರು ಗುರುವಾರ ಪಾದಯಾತ್ರೆ ಆರಂಭಿಸಿದ್ದಾರೆ;
ವಿವಿಧ ಜಲವಿದ್ಯುತ್ ಮತ್ತು ನೀರಾವರಿ ಯೋಜನಾ ಸಂತ್ರಸ್ತರು ಸೇರಿದಂತೆ ರೈತರ ಸಾಗುವಳಿ ಭೂಮಿಯನ್ನು ಕಿತ್ತುಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಮಲೆನಾಡು ರೈತರು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಆರಂಭಿಸಿರುವ ಭೂ ಹಕ್ಕು ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಸಮಾಜವಾದಿ ಹೋರಾಟಗಾರ, ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪ ಮತ್ತು ಸಿಗಂದೂರು ಧಾರ್ಮಿಕ ಕ್ಷೇತ್ರದ ಧರ್ಮದರ್ಶಿ ಡಾ ರಾಮಪ್ಪ ಅವರು ಚಾಲನೆ ನೀಡಿದ್ದ ಈ ರೈತ ಹೋರಾಟ, ಇದೀಗ ಮತ್ತೊಂದು ಮಜಲಿಗೆ ಹೊರಳಿದ್ದು, ಗುರುವಾರ(ಅ.24) ರೈತರು ಸಾಗರ ಪಟ್ಟಣದಿಂದ ಕಾರ್ಗಲ್ ಸಮೀಪದ ಲಿಂಗನಮಕ್ಕಿಯ ಶರಾವತಿ ಅಣೆಕಟ್ಟೆಯ ಕಡೆಗೆ ಪಾದಯಾತ್ರೆ ʼಲಿಂಗನಮಕ್ಕಿ ಚಲೋʼ ಆರಂಭಿಸಿದರು.
ತಮ್ಮ ಜಮೀನು ಮತ್ತು ಮನೆಮಠ ಮುಳುಗಿಸಿ ನಿರ್ಮಿಸಿರುವ ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕುವ ಘೋಷಣೆ ಮಾಡಿರುವ ಪ್ರತಿಭಟನಾಕಾರರು, ನಮ್ಮ ನಡೆ ಲಿಂಗನಮಕ್ಕಿ ಅಣೆಕಟ್ಟಿನ ಕಡೆ ಎಂಬ ಘೋಷಣೆಯೊಂದಿಗೆ ಗುರುವಾರ ಬೆಳಿಗ್ಗೆಯಿಂದಲೇ ಪಾದಯಾತ್ರೆ ಆರಂಭಿಸಿದ್ದಾರೆ. ಗುರುವಾರ ಸಾಗರ ಮತ್ತು ಕಾರ್ಗಲ್ ನಡುವಿನ ತಾಳಗುಪ್ಪಾಕ್ಕೆ ತಲುಪಿ, ವಿಶ್ರಾಂತಿ ಪಡೆಯಲಿರುವ ಹೋರಾಟಗಾರರು, ಮಾರನೇ ದಿನ; ಅಂದರೆ ಶುಕ್ರವಾರ(ಅ.25) ಬೆಳಿಗ್ಗೆ ಕಾರ್ಗಲ್ ಕಡೆ ತಮ್ಮ ಯಾತ್ರೆ ಮುಂದುವರಿಸಲಿದ್ದಾರೆ.
ಸದ್ಯದ ಯೋಜನೆಯ ಪ್ರಕಾರ ಶುಕ್ರವಾರ ಸಂಜೆ ಕಾರ್ಗಲ್‌ನಲ್ಲಿ ವಾಸ್ತವ್ಯ ಹೂಡಿ, ಮಾರನೇ ದಿನ ಶನಿವಾರ(ಅ.26) ಲಿಂಗನಮಕ್ಕಿ ಜಲಾಶಯದತ್ತ ಹೆಜ್ಜೆ ಹಾಕಲಿದ್ದಾರೆ.
ಮತ್ತೆ ಮೊಳಗಿದ ಪ್ರತ್ಯೇಕ ರಾಜ್ಯ ಕೂಗು
ಕಳೆದ ಎಂಭತ್ತು ವರ್ಷಗಳಿಂದ ಸರ್ಕಾರಗಳು ಒಂದಿಲ್ಲೊಂದು ಜಲವಿದ್ಯುತ್ ಯೋಜನೆ, ನೀರಾವರಿ ಯೋಜನೆ, ಅಭಯಾರಣ್ಯ ಯೋಜನೆಗಳ ಮೂಲಕ ಮಲೆನಾಡಿನ ರೈತರ ಭೂಮಿಯನ್ನು ಕಿತ್ತುಕೊಂಡು ಬೀದಿ ಪಾಲು ಮಾಡುತ್ತಿವೆ. ಜೊತೆಗೆ ಹೀಗೆ ವಿವಿಧ ಯೋಜನಾ ಸಂತ್ರಸ್ತರು ಎತ್ತಂಗಡಿಯಾಗಿ ಹೋಗಿ ಬೇರೆ ಬೇರೆ ತಾಲೂಕುಗಳಲ್ಲಿ ನೆಲೆ ಕಂಡುಕೊಂಡಿರುವ ಭೂಮಿಯನ್ನೂ ಈಗ ಅರಣ್ಯ ಒತ್ತುವರಿ ತೆರವು, ಸರ್ಕಾರಿ ಭೂಮಿ ಒತ್ತುವರಿ ತೆರವು ನೆಪದಲ್ಲಿ ಕಿತ್ತುಕೊಳ್ಳಲಾಗುತ್ತಿದೆ. ಸರ್ಕಾರಗಳು ನಿರಂತರವಾಗಿ ಮಲೆನಾಡು ಬಡ ರೈತರ ಮೇಲೆ ನಡೆಸುತ್ತಿರುವ ಈ ದಬ್ಬಾಳಿಕೆ, ದಾಳಿಗಳು ನಿಲ್ಲಬೇಕು. ಇಲ್ಲವಾದರೆ, ನಾವು ಪ್ರತ್ಯೇಕ ಮಲೆನಾಡು ಬೇಡಿಕೆ ಇಡುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವಿಶೇಷವಾಗಿ ಹತ್ತಾರು ಯೋಜನೆಗಳ ಸಂತ್ರಸ್ತರಿರುವ ಮತ್ತು ಪರಿಸರ ಮತ್ತು ಅರಣ್ಯ ಕಾಯ್ದೆಗಳಿಂದ ಶೋಷಿತರಾಗಿರುವ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಿಗೆ ಇರುವ ವಿಶೇಷ ಸ್ಥಾನಮಾನ ನೀಡಬೇಕು. ಸಂವಿಧಾನದ ಆರನೇ ಪರಿಚ್ಛೇದದ ಅಡಿ ಸಿಗುವ ಆ ವಿಶೇಷ ಸ್ಥಾನಮಾನದ ಮೇಲೆ ನಮಗೆ ಈಗಿರುವ ಅರಣ್ಯ ಮತ್ತು ಇತರೆ ದೌರ್ಜನ್ಯದ ಕಾಯ್ದೆಗಳಿಂದ ಮಲೆನಾಡನ್ನು ಹೊರಗಿಡಬೇಕು. ನಮಗೆ ಬೇಕಾದ ಕಾನೂನು ನಮ್ಮ ಪಂಚಾಯ್ತಿ ಮಟ್ಟದಲ್ಲೇ ನಾವು ಮಾಡಿಕೊಳ್ಳುತ್ತೇವೆ ಎಂದು ಹೋರಾಟದ ನೇತೃತ್ವ ವಹಿಸಿರುವ ಪ್ರಮುಖರಲ್ಲಿ ಒಬ್ಬರಾದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ ನಾ ಶ್ರೀನಿವಾಸ್ ಹೇಳಿದರು.
ಮಾತು ಮರೆತ ಸಿಎಂ, ಡಿಸಿಎಂ
ಒಂದೂವರೆ ವರ್ಷದ ಹಿಂದೆ ವಿಧಾನಸಭಾ ಚುನಾವಣೆಗೆ ಮುಂಚೆ ಶಿವಮೊಗ್ಗದಲ್ಲಿ ಪಾದಯಾತ್ರೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು, ಮಲೆನಾಡಿನ ಅರಣ್ಯ ಭೂಮಿ ಹಕ್ಕು ಸಮಸ್ಯೆ, ಬಗರ್ಹುಕುಂ ಸಾಗುವಳಿ ಮಂಜೂರು ಬಿಕ್ಕಟ್ಟು, ಶರಾವತಿ ಸಂತ್ರಸ್ತರ ಪುನರ್ ವಸತಿ ಸಮಸ್ಯೆ, ಕೆಪಿಸಿ ಭೂಮಿ ಮಂಜೂರಾತಿ, ಇಂಡೀಕರಣ ಅನ್ಯಾಯ ಸೇರಿದಂತೆ ವಿವಿಧ ಭೂ ಸಮಸ್ಯೆಗಳ ಕುರಿತು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ವಿಧಾನಸಭೆಯಲ್ಲಿ ಚರ್ಚೆಯಾಗಿಲ್ಲ, ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸುವ ಪ್ರಯತ್ನವಾಗಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಸಿಎಂ ಮತ್ತು ಡಿಸಿಎಂ ತಾವು ಕೊಟ್ಟ ಮಾತನ್ನೇ ಮರೆತುಬಿಟ್ಟಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ ಆರ್ ಜಯಂತ್ ಹೇಳಿದರು.
ಮಲೆನಾಡಿನ ಒಂಭತ್ತು ಜಿಲ್ಲೆಗಳ ರೈತರ ಈ ಬದುಕಿನ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಕೇಂದ್ರವಾಗಲೀ, ರಾಜ್ಯವಾಗಲೀ ಯಾವುದೇ ಸರ್ಕಾರವೂ ಮಾಡಿಲ್ಲ. ನಮ್ಮ ಮಲೆನಾಡಿನ ಶಾಸಕರು, ಸಂಸದರು ಕೂಡ ಈ ಬಗ್ಗೆ ದನಿ ಎತ್ತುವ ಪ್ರಯತ್ನವನ್ನೂ ಮಾಡಿಲ್ಲ. ಇಂತಹ ಅನ್ಯಾಯವನ್ನು ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಮುಳುಗಡೆ ಸಂತ್ರಸ್ತರ ಗೋಳು, ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆ, ಬಗರ್ ಹುಕುಂ ಸಾಗುವಳಿದಾರರ ನೋವನ್ನು ಕೇಳುವ ಸಣ್ಣ ಕಾಳಜಿ ಯಾವ ಜನಪ್ರತಿನಿಧಿಗಳಿಗೂ ಇಲ್ಲದಾಯಿತೆ? ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಶಾಸಕರು, ಉಸ್ತುವಾರಿ ಸಚಿವರು ನಾಪತ್ತೆ
ಮಲೆನಾಡಿನ ರೈತರ ಮೇಲೆ ನಿರಂತರ ಸರ್ಕಾರಗಳು ನಡೆಸುತ್ತಿರುವ ದಬ್ಬಾಳಿಕೆ ಮತ್ತು ಭೂಮಿ ಹಕ್ಕಿನ ಬೇಡಿಕೆಯ ಅಹೋರಾತ್ರಿ ಹೋರಾಟ ನಾಲ್ಕು ದಿನಗಳಿಂದ ಸಾಗರದ ಉಪ ವಿಭಾಗಾಧಿಕಾರಿಗಳ ಕಚೇರಿಯ ಮುಂದೆ ನಡೆಯುತ್ತಿದ್ದರೂ ಸಾಗರದ ಶಾಸಕರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಅನ್ನದಾತರ ನೋವು ಆಲಿಸುವ ಪ್ರಯತ್ನ ಮಾಡಿಲ್ಲ ಎಂಬುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಯಿತು.
ಹೋರಾಟದ ನೇತೃತ್ವ ವಹಿಸಿರುವ ಎಚ್ ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಶಿರವಾಳ ಅವರು ಮಾತನಾಡಿ, “ನಮ್ಮ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಬೇರು ಬಿಟ್ಟಿದ್ದಾರೆ. ಅವರು ಅಲ್ಲೇ ಇರಲಿ, ಅವರು ಇನ್ನು ಈ ಕಡೆ ಮುಖ ಹಾಕುವುದು ಬೇಡ. ಮುಂದಿನ ಚುನಾವಣೆಗೂ ಅವರು ಅಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸಲಿ. ನಾವೆಲ್ಲಾ ಪಾದಯಾತ್ರೆ ಮಾಡಿಕೊಂಡು ಹೋಗಿ ಅವರಿಗೆ ಮತ ಹಾಕಿ ಬರ್ತೀವಿ.. ನಮ್ಮ ಹೋರಾಟ ಅನ್ನದಾತರ ಹೋರಾಟ, ರೈತರ ಬದುಕಿನ ಹೋರಾಟ. ಯಾರು ಕೇಳಲಿ, ಬಿಡಲಿ ನಾವು ನಮ್ಮ ಹೋರಾಟ ನಡೆಸುತ್ತೇವೆ. ಈ ಹೋರಾಟ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರವಾಗುತ್ತಾ, ಸಾವಿರಾರು ಜನರನ್ನು ಒಳಗೊಳ್ಳುತ್ತಾ ಮಲೆನಾಡು ಇಡೀ ಹಬ್ಬಲಿದೆ.. ಹೋರಾಟ ನಿಲ್ಲದು” ಎಂದು ಶಾಸಕರು ಮತ್ತು ಉಸ್ತುವಾರಿ ಸಚಿವರ ಉದಾಸೀನ ಧೋರಣೆಯ ವಿರುದ್ಧ ವ್ಯಂಗ್ಯವಾಡಿದರು.
ಪಾದಯಾತ್ರೆಯಲ್ಲಿ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ ರಾಮಪ್ಪ, ನಗರ ಹೋಬಳಿ ರೈತ ಮುಖಂಡ ವಿ ಜಿ ಶ್ರೀಕರ್, ತುಮರಿಯ ಸಾಮಾಜಿಕ ಹೋರಾಟಗಾರ ಜಿ ಟಿ ಸತ್ಯನಾರಾಯಣ, ರೈತ ಸಂಘದ ವಸಂತ ಕುಮಾರ್, ಶಿವಾನಂದ ಕುಗ್ವೆ, ರವಿ ಕುಗ್ವೆ, ಚಾರ್ವಾಕ ರಾಘವೇಂದ್ರ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ, ದಲಿತ ಮುಖಂಡ ದೂಗೂರು ಪರಮೇಶ್ವರ್ ಮತ್ತಿತರು ಭಾಗವಹಿಸಿದ್ದರು.