Lorry Strike| ಇಂದು ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ
ಲಾರಿ ಮುಷ್ಕರದ ಕಾರಣ 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದೆ. ಜಲ್ಲಿ ಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜತೆಗೆ, ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿಗಳೂ ಬಂದ್ ಆಚರಿಸಲಿವೆ.;
ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆ ಹಾಗೂ ಟೋಲ್ ಶುಲ್ಕದ ಹೆಚ್ಚಳದ ವಿರುದ್ಧ ರಾಜ್ಯ ಲಾರಿ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಿದ್ದು, ಸೋಮವಾರ (ಏ.14) ಮಧ್ಯರಾತ್ರಿಯಿಂದಲೇ ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಸೇವೆ ಬಂದ್ ಮಾಡಲಿವೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
6 ತಿಂಗಳಲ್ಲಿ ಸರ್ಕಾರ 2ಬಾರಿ ಡಿಸೇಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಇಳಿಸಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರವರೆಗೆ ಗಡುವು ನೀಡಿದ್ದರು. ಆದರೆ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಸೋಮವಾರ ಮಧ್ಯರಾತ್ರಿಯಿಂದಲೆ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಮುಂದಾಗಿದೆ.
ಮುಷ್ಕರದ ಕಾರಣ 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದೆ. ಜಲ್ಲಿ ಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜತೆಗೆ, ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿಗಳೂ ಬಂದ್ ಆಚರಿಸಲಿವೆ. ಬೇರೆ ರಾಜ್ಯಗಳ ಲಾರಿಗಳಿಗೂ ಪ್ರವೇಶವಿಲ್ಲ ಎಂದು ಷಣ್ಮುಗಪ್ಪ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 18 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ. ಬೇರೆ ಯಾವ ರಾಜ್ಯದಲ್ಲಿಯೂ ರಾಜ್ಯ ಹೆದ್ದಾರಿಗೆ ಟೋಲ್ ಇಲ್ಲ. ರಾಜ್ಯದಲ್ಲಿ ಟೋಲ್ ಸಂಗ್ರಹ ಕೈಬಿಡಬೇಕು. ಗಡಿ ಚೆಕ್‌ಪೋಸ್ಟ್‌ಗಳನ್ನು ರದ್ದುಮಾಡಬೇಕು. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್ ಸರ್ಟಿಫಿಕೆಟ್) ನವೀಕರಣಕ್ಕೆ ಶುಲ್ಕವನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಿರುವುದು, ಕೇವಲ ಐದು ಗಂಟೆ ಅವಕಾಶ ನೀಡಿರುವುದನ್ನು ತೆಗೆದುಹಾಕಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ. ಅಲ್ಲಿಯವರೆಗೆ ನಮ್ಮ ಮುಷ್ಕರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ. 2.73 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಡೀಸೆಲ್ ಬೆಲೆ 2 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಏಪ್ರಿಲ್ 1ರಿಂದಲೇ ದರ ಹೆಚ್ಚಳ ಜಾರಿಗೆ ಬಂದಿತ್ತು.