Accident | ರಾಜ್ಯ ಬಿಜೆಪಿ ಅಧ್ಯಕ್ಷರ ಕಾರಿಗೆ ಲಾರಿ ಡಿಕ್ಕಿ; ಪ್ರಾಣಾಪಾಯದಿಂದ ಪಾರಾದ ಬಿ.ವೈ.ವಿಜಯೇಂದ್ರ
ಚಿಕ್ಕಮಗಳೂರಿನಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸೇರಿದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ವಿಜಯೇಂದ್ರ ಬೇರೊಂದು ಕಾರಿನಲ್ಲಿ ತೆರಳುತ್ತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.;
ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಅದೃಶ್ಟವಶಾತ್ ಬಿ.ವೈ. ವಿಜಯೇಂದ್ರ ಅವರು ಬೇರೊಂದು ಕಾರಿನಲ್ಲಿ ಸಂಚರಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ಬಸವ ತತ್ವ ಕಾರ್ಯಕ್ರಮ ಮುಗಿಸಿ ಶಿವಮೊಗ್ಗಕ್ಕೆ ವಾಪಸ್ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಚಿಕ್ಕಮಗಳೂರು ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ವಿಜಯೇಂದ್ರ ಅವರು ಹೊರ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವಾಗ ಇದೇ ಕಾರನ್ನು ಬಳಸುತ್ತಿದ್ದರು. ಆದರೆ, ಬಸವ ತತ್ವ ಕಾರ್ಯಕ್ರಮ ಮುಗಿಸಿಕೊಂಡು ಬೇರೆ ಕಾರಿನಲ್ಲಿ ಪ್ರಯಾಣಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಬೀರೂರು ಮೂಲದ ಹರೀಶ್ ಎಂಬುವರಿಗೆ ಸೇರಿದ ಲಾರಿ ಮರದ ದಿಮ್ಮಿಗಳನ್ನು ತುಂಬಿಕೊಂಡು ಚಿಕ್ಕಮಗಳೂರು ನಗರದಿಂದ ಮುಂಬೈಗೆ ತೆರಳುತ್ತಿತ್ತು. ಗ್ರಾಮಾಂತರ ಠಾಣೆ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.