Loksabha Election 2024 | ಮಂಡ್ಯ, ಕೋಲಾರದಲ್ಲಿ ರಾಹುಲ್ ಗಾಂಧಿ ಪ್ರಚಾರ
ಬುಧವಾರ ರಾಹುಲ್ ಗಾಂಧಿ ರಾಜ್ಯ ಪ್ರವಾಸ ನಿಗದಿಯಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಮಧ್ಯಾಹ್ನ ಮಂಡ್ಯ ಜಿಲ್ಲೆಗೆ ತೆರಳಲಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ನಡೆಸಲಿದ್ದಾರೆ. ಬಳಿಕ ಕೋಲಾರ ಜಿಲ್ಲೆಗೆ ತೆರಳಲಿದ್ದಾರೆ.;
ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಮೂರು ಬಾರಿ ರಾಜ್ಯಕ್ಕೆ ಆಗಮಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹೈಕಮಾಂಡ್ ನಾಯಕರು ಕರ್ನಾಟಕದತ್ತ ಇನ್ನೂ ಮುಖ ಮಾಡದೆ ಇರುವುದು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜ್ಯ ಪ್ರಚಾರಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಮಂಡ್ಯ ಹಾಗೂ ಕೋಲಾರದಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಏ.17 ರ ಬುಧವಾರ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ, ಎರಡು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ಬುಧವಾರ ರಾಹುಲ್ ಗಾಂಧಿ ರಾಜ್ಯ ಪ್ರವಾಸ ನಿಗದಿಯಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಮಧ್ಯಾಹ್ನ ಮಂಡ್ಯ ಜಿಲ್ಲೆಗೆ ತೆರಳಲಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ನಡೆಸಲಿದ್ದಾರೆ. ಬಳಿಕ ಕೋಲಾರ ಜಿಲ್ಲೆಗೆ ತೆರಳಲಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರ ಎದುರು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ನಿಟ್ಟಿನಲ್ಲಿ ಮಂಡ್ಯ ಕ್ಷೇತ್ರ ಕಾಂಗ್ರೆಸ್‌ಗೆ ಸವಾಲಾಗಿದೆ. ಈ ಕಾರಣಕ್ಕಾಗಿ ಮಂಡ್ಯಕ್ಕೆ ಹೆಚ್ಚಿನ ಆದ್ಯತೆ ಕಾಂಗ್ರೆಸ್ ನೀಡಿದೆ. ರಾಹುಲ್ ಗಾಂಧಿ ಮಂಡ್ಯದಲ್ಲೇ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಇನ್ನು ಗೆಲ್ಲುವ ಸಾಧ್ಯತೆ ಇರುವ ಕೋಲಾರದಲ್ಲಿ ಭಿನ್ನಮತೀಯ ಚಟುವಟಿಕೆಯಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಹಾಗಾಗಿ ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಪ್ರಚಾರ ಮಾಡಲು ಬರುತ್ತಿರುವುದು ಮಹತ್ವ ಪಡೆದುಕೊಂಡಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ʻʻರಾಹುಲ್ ಗಾಂಧಿ ಮಂಡ್ಯ, ಕೋಲಾರದಲ್ಲಿ ಪ್ರಚಾರ ನಡೆಸಲಿದ್ದಾರೆ. ಆದರೆ ಬೆಂಗಳೂರಿನಲ್ಲಿ ಯಾವುದೇ ಪ್ರಚಾರ ಕಾರ್ಯಕ್ರಮ ನಿಶ್ಚಯವಾಗಿಲ್ಲ. ಇನ್ನು ಪ್ರಿಯಾಂಕಾ ಗಾಂಧಿ ರಾಜ್ಯ ಪ್ರಚಾರಕ್ಕೆ ಬೇಡಿಕೆ ಇದೆ. ಅವರಿಗೂ ರಾಜ್ಯಕ್ಕೆ ಬರಬೇಕು ಎಂದು ಕೇಳಿದ್ದೇವೆ. ಅವರಿಗೆ ಬೇರೆ ಕ್ಷೇತ್ರಗಳಲ್ಲಿ ತುಂಬಾ ಒತ್ತಡ ಇದೆ. ಆದರೂ ನಮ್ಮ ರಾಜ್ಯಕ್ಕೆ ಒಮ್ಮೆ ಆಗಮಿಸಬೇಕು ಎಂದು ಮನವಿ ಮಾಡಿದ್ದೇವೆ" ಎಂದರು.