ಬಳ್ಳಾರಿಯಲ್ಲಿ ಬಾಣಂತಿಯರ ಸಾವು | ಜಿಲ್ಲಾಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ, ತೀವ್ರ ಪರಿಶೀಲನೆ
ಲೋಕಾಯುಕ್ತ ಅಧಿಕಾರಿಗಳ ತಂಡ ಸರ್ಚ್ ವಾರೆಂಟ್‌ನೊಂದಿಗೆ ಆಸ್ಪತ್ರೆಗೆ ಧಾವಿಸಿ, ಹೆರಿಗೆ ವಾರ್ಡ್, ಐಸಿಯು, ಔಷಧ ದಾಸ್ತಾನು ಮಳಿಗೆ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸುತ್ತಿದೆ.;
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಶನಿವಾರ ಆಸ್ಪತ್ರೆ ಮೇಲೆ ದಾಳಿ ನಡೆಸಿ, ಪರಿಶೀಲನೆ ಆರಂಭಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ದರಾಜು, ಡಿವೈಎಸ್ಪಿ ವಸಂತ ಕುಮಾರ್ ಹಾಗೂ ಇನ್‌ಸ್ಪೆಕ್ಟರ್ ಮಹಮ್ಮದ್ ರಫೀಕ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಸರ್ಚ್ ವಾರೆಂಟ್‌ನೊಂದಿಗೆ ಆಸ್ಪತ್ರೆಗೆ ಧಾವಿಸಿ, ಹೆರಿಗೆ ವಾರ್ಡ್, ಐಸಿಯು, ಔಷಧ ದಾಸ್ತಾನು ಮಳಿಗೆ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸುತ್ತಿದೆ.
ರಾಜ್ಯ ಸರ್ಕಾರ ಪಶ್ಚಿಮ ಬಂಗಾ ಫಾರ್ಮಾಸುಟಿಕಲ್ ಕಂಪನಿಯ ಐವಿ ದ್ರಾವಣ ಬಳಸದಂತೆ ಸೂಚಿಸಿದ್ದರೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವಿ ಮತ್ತು ಆರ್‌ಎಲ್ ದ್ರಾವಣ ಬಳಸಿದ ಕುರಿತು ಔಷಧ ವಿಭಾಗದ ಸಿಬ್ಬಂದಿ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೊತೆಗೆ ಬಾಣಂತಿಯರು ಅಸ್ವಸ್ಥರಾಗಲು ಕಾರಣವಾದ ಅಂಶಗಳ ಕುರಿತು ನಾಲ್ವರು ಅಧಿಕಾರಿಗಳ ತಂಡ ವೈದ್ಯರಿಂದ ಮಾಹಿತಿ ಪಡೆಯುತ್ತಿದೆ. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿರುವ ಕುರಿತು ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಬಿಜೆಪಿ ನಿಯೋಗ ಶುಕ್ರವಾರ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿತ್ತು.
ಶ್ರೀರಾಮುಲು ನೇತೃತ್ವದಲ್ಲಿ ಧರಣಿ
ಲೋಕಾಯುಕ್ತ ದಾಳಿಯ ನಡುವೆಯೇ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮಾಜಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ.
ಆಸ್ಪತ್ರೆ ಮುಂಭಾಗದಲ್ಲಿ ಜಮಾಯಿಸಿದ ಬಿಜೆಪಿ ಜಿಲ್ಲಾ ಮುಖಂಡರು, ಕಾರ್ಯಕರ್ತರು, ಮಹಿಳಾ ಮೋರ್ಚಾ ಮುಖಂಡರು ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಈ ವೇಳೆ ಶ್ರೀರಾಮುಲು ಪ್ರತಿಕ್ರಿಯಿಸಿ, ಬಾಣಂತಿಯರ ಕುಟುಂಬಕ್ಕೆ 2 ಲಕ್ಷ ಪರಿಹಾರ ಸಾಲದು. ತಲಾ 1 ಕೋಟಿ ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇನೆ. ಬಾಣಂತಿಯರ ಕುಟುಂಬಕ್ಕೆ ನ್ಯಾಯ ಸಿಗುವವರಿಗೆ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಧಿವೇಶನದಲ್ಲಿ ಪ್ರತಿಪಕ್ಷಗಳ ಟೀಕೆ ಎದುರಿಸಬೇಕಾಗುತ್ತದೆ ಎಂಬ ಭೀತಿಯಲ್ಲಿ ಘಟನೆ ನಡೆದು ಇಷ್ಟು ದಿನವಾದ ಬಳಿಕ ಆರೋಗ್ಯ ಸಚಿವರು ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಬಳ್ಳಾರಿಗೆ ಬಂದವರು ಸೌಜನ್ಯಕ್ಕಾದರೂ ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ. ಈಗ ಭೇಟಿ ನೀಡುವ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.