ಬಳ್ಳಾರಿ ಬಾಣಂತಿಯರ ಸಾವು | ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಲೋಕಾಯುಕ್ತ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಆದೇಶಿಸಿದ್ದಾರೆ.

Update: 2024-12-07 14:21 GMT

ಬಾಣಂತಿಯರ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಶನಿವಾರ ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಔಷಧ ನಿಯಂತ್ರಕರು ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಯಮಿತ ವ್ಯವಸ್ಥಾಪಕ ನಿರ್ದೇಶಕರು, ಬಳ್ಳಾರಿ ಸರ್ಕಾರಿ ಆಸ್ಪತ್ರೆ ಹಿರಿಯ ಅಧಿಕಾರಿಗಳು, ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಆದೇಶಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವಿ ಹಾಗೂ ಆರ್​ಎಲ್ ದ್ರಾವಣದಿಂದ ಐದು ಮಂದಿ ಬಾಣಂತಿಯರು ಮೃತಪಟ್ಟಿದ್ದರು. ಈ ಪ್ರಕರಣ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಐವಿ ದ್ರಾವಣ ಪೂರೈಸಿದ ಪಶ್ಚಿಮ ಬಂಗಾ ಫಾರ್ಮಾಸುಟಿಕಲ್‌ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ ಸರ್ಕಾರ ಆದೇಶಿಸಿತ್ತು. ಔಷಧ ನಿಯಂತ್ರಕರನ್ನು ಅಮಾನತು ಮಾಡಿತ್ತು.

ರಾಜ್ಯದ ಆಸ್ಪತ್ರೆಗಳಲ್ಲಿ ಪ್ರಸಕ್ತ ವರ್ಷ ಒಟ್ಟು 327 ತಾಯಂದಿರು ಮರಣವಾಗಿದೆ ಎಂದು ಸ್ವತಃ ಆರೋಗ್ಯ ಸಚಿವರೇ ಮಾಹಿತಿ ನೀಡಿದ್ದರು. ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವಾಗಿದೆ. ಕೂಡಲೇ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು. ಪ್ರಕರಣದ ಕುರಿತು ಲೋಕಾಯುಕ್ತರು ತನಿಖೆ ನಡೆಸಬೇಕು. ಸಂತ್ರಸ್ಥರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ನಿಯೋಗ ಶುಕ್ರವಾರ ಲೋಕಾಯುಕ್ತರಿಗೆ ದೂರು ಸಲ್ಲಿಸಿತ್ತು.

ಅಂತೆಯೇ ಶನಿವಾರ ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದರು. ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ 25 ಅಧಿಕಾರಿಗಳ ನಾಲ್ಕು ತಂಡಗಳು ಹೆರಿಗೆ ವಾರ್ಡ್, ಐಸಿಯು, ಔಷಧ ದಾಸ್ತಾನು ಹಾಗೂ ಆಸ್ಪತ್ರೆ ಆವರಣದ ವೆರ್ ಹೌಸ್‌ನಲ್ಲಿ ಪರಿಶೀಲನೆ ನಡೆಸಿದ್ದರು. ಗೋದಾಮಿನಲ್ಲಿ ಬಾಣಂತಿಯರ ಸಾವಿಗೆ ಕಾರಣವಾದ ಐವಿ ಹಾಗೂ ಆರ್ಎಲ್ ದ್ರಾವಣದ ಪೂರೈಕೆಯಾದ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಿದ್ದರು.

ಇನ್ನು ಔಷಧ ಉಗ್ರಾಣದಲ್ಲಿ ಜಪ್ತಿ ಮಾಡಲಾದ 280 ಐವಿ ಹಾಗೂ ಆರ್‌ಎಲ್‌ ದ್ರಾವಣದ ಬಾಟಲಿಗಳು ಪತ್ತೆಯಾಗಿದ್ದವು. ಈ ಪೈಕಿ 150 ಐವಿ ದ್ರಾವಣದ ಬಾಟಲಿಗಳು ಪಶ್ಚಿಮ ಬಂಗಾ ಫಾರ್ಮಾಸೂಟಿಕಲ್ ಕಂಪನಿಯಿಂದ ಪೂರೈಕೆಯಾಗಿದ್ದ ಸಂಗತಿ ಕಂಡು ಬಂದಿತ್ತು.

Tags:    

Similar News