ಬೆಂಗಳೂರು ಅಮೃತ ಮಹೋತ್ಸವ ಯೋಜನೆ: 27.50 ಕೋಟಿ ರೂ. ಅಕ್ರಮ ವರ್ಗಾವಣೆ, ಅಧಿಕಾರಿ ವಿರುದ್ಧ ದೂರು

ಅಕ್ರಮಕ್ಕೆ ಬಿಬಿಎಂಪಿ ಕಲ್ಯಾಣ ಇಲಾಖೆಯ ಮಾಜಿ ಪ್ರಭಾರಿ ಸಹಾಯಕ ಆಯುಕ್ತರಾದ ನಾಗಭೂಷಣ್ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.;

Update: 2025-08-19 06:34 GMT

 ರಮೇಶ್ ಎನ್. ಆರ್. ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. 

ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 'ಅಮೃತ ಮಹೋತ್ಸವ ಯೋಜನೆ'ಯಡಿ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿ 27.50 ಕೋಟಿ ರೂ.ಗಳನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಬಿಬಿಎಂಪಿ ಮಾಜಿ ಸದಸ್ಯ ಮತ್ತು ಬಿಜೆಪಿ ಮುಖಂಡ ರಮೇಶ್ ಎನ್.ಆರ್. ದೂರು ನೀಡಿದ್ದಾರೆ.

ಅಕ್ರಮಕ್ಕೆ ಬಿಬಿಎಂಪಿ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ಆಯುಕ್ತರಾಗಿದ್ದ ನಾಗಭೂಷಣ್ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಾಗಭೂಷಣ್ ಅವರು ಪ್ರಸ್ತುತ ಮಹದೇವಪುರ ವಲಯದ ಕಲ್ಯಾಣ ಇಲಾಖೆಯ ಸಹಾಯಕ ಕಂದಾಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೂರಿನಲ್ಲಿ ಏನಿದೆ? 

ಬಿಬಿಎಂಪಿ ಮುಖ್ಯ ಆಯುಕ್ತರು ಹೊರಡಿಸಿರುವ ಮಾರ್ಗಸೂಚಿಗಳಾದ ಅರ್ಹತೆ, ಷರತ್ತುಗಳು, ಆಯ್ಕೆ ವಿಧಾನ ಮತ್ತು ಅನುಷ್ಠಾನದ ಕ್ರಮಗಳನ್ನು ನಾಗಭೂಷಣ್ ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೇ, ನೇರವಾಗಿ ರಾಜೀವ್ ಗಾಂಧಿ ವಸತಿ ನಿಗಮದಿಂದ 550 ಅಭ್ಯರ್ಥಿಗಳ ಪಟ್ಟಿಯನ್ನು ಪಡೆದು, ಪ್ರತಿ ಅಭ್ಯರ್ಥಿಗೆ 5 ಲಕ್ಷ ರೂ.ಗಳಂತೆ ಒಟ್ಟು 27.50 ಕೋಟಿ ರೂ. ಅಕ್ರಮವಾಗಿ ವರ್ಗಾಯಿಸಿದ್ದಾರೆ.

ಯೋಜನೆಯ ನಿಯಮಗಳ ಪ್ರಕಾರ, ಫಲಾನುಭವಿಗಳು ಬಿಬಿಎಂಪಿ ಕಚೇರಿಗೆ ಭೌತಿಕವಾಗಿ ಅಥವಾ ಆನ್‌ಲೈನ್‌ನಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು. ನಂತರ ಆಯಾ ವಲಯದ ಸಹಾಯಕ ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಮಹಜರು ವರದಿ ಹಾಗೂ ಸೂಕ್ತ ಶಿಫಾರಸ್ಸಿನೊಂದಿಗೆ ವಲಯ ಸಮಿತಿಯ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಬೇಕು. ಆದರೆ, ಈ ಯಾವುದೇ ನಿಯಮಗಳನ್ನು ಪಾಲಿಸದೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ದೂರಿದ್ದಾರೆ.

ಬಿಬಿಎಂಪಿ ಕಚೇರಿಗೆ ಅರ್ಜಿ ಸಲ್ಲಿಸದ 550 ಅನರ್ಹ ಅಭ್ಯರ್ಥಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಈ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವ ಸಂಶಯ ವ್ಯಕ್ತವಾಗಿದೆ.

2022-23, 2023-24 ಮತ್ತು 2024-25ನೇ ಸಾಲಿನಲ್ಲಿ ಬಿಬಿಎಂಪಿ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಿರುವ ಅರ್ಹ, ಬಡ, ವಿಧವೆ, ವಿಕಲಚೇತನ ಮತ್ತು ಹಿರಿಯ ನಾಗರಿಕರಂತಹ ಫಲಾನುಭವಿಗಳಿಗೆ ಇದುವರೆಗೂ ಅನುದಾನ ಬಿಡುಗಡೆ ಮಾಡಲಾಗಿಲ್ಲ. ಭ್ರಷ್ಟ ಅಧಿಕಾರಿಗಳ ಈ ಕೃತ್ಯದಿಂದಾಗಿ ನಿಜವಾದ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನಲ್ಲಿರುವ ಬೇಡಿಕೆಗಳು

ತಪ್ಪಿತಸ್ಥ ಅಧಿಕಾರಿ ನಾಗಭೂಷಣ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು. ಅಕ್ರಮವಾಗಿ ವರ್ಗಾಯಿಸಲಾಗಿರುವ 27.50 ಕೋಟಿ ರೂ. ಹಣವನ್ನು ವಸೂಲಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಅಲ್ಲದೆ, ಈ ಅಕ್ರಮಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ಅಕ್ರಮ ಹಣ ದುರ್ಬಳಕೆ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳನ್ನು ದಾಖಲಿಸಿಕೊಂಡು ನಾಗಭೂಷಣ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ಎಡಿಜಿಪಿ ಹಾಗೂ ಐಜಿಪಿ ಅವರಿಗೆ ದಾಖಲೆಗಳ ಸಹಿತ ದೂರು ಸಲ್ಲಿಸಲಾಗಿದೆ. ಜೊತೆಗೆ, ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಲಾಗಿದೆ.

Tags:    

Similar News