ಲೋಕಸಭೆ ಚುನಾವಣೆ: ಕಾಂಗ್ರೆಸ್‌, ಬಿಜೆಪಿ ಮೈತ್ರಿ ಪಕ್ಷದಿಂದ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ

ಮಾರ್ಚ್‌ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ

Update: 2024-03-02 11:54 GMT

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿಗಳು ಕಾತುರದಿಂದ ಕಾಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಲೋಕಸಭೆ ಚುನಾವಣೆಗೆ ಮಾರ್ಚ್ ಎರಡನೇ ವಾರದಲ್ಲಿ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ - ಜೆಡಿ(ಎಸ್) (ಮೈತ್ರಿ ಪಕ್ಷಗಳು) ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಿದ್ಧತೆ ನಡೆಸಿವೆ.

ಲೋಕಸಭೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಉಳಿದಿದ್ದು, ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಈಚೆಗೆ ನಡೆದ ಶಿಕ್ಷಕರ ಕ್ಷೇತ್ರ ಮತ್ತು ರಾಜ್ಯಸಭಾ ಚುನಾವಣಾ ಫಲಿತಾಂಶದ ಯಶಸ್ಸಿನಿಂದ ಉತ್ಸುಕವಾಗಿರುವ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಇತ್ತೀಚೆಗೆ ಸ್ಕ್ರೀನಿಂಗ್ ಕಮಿಟಿಯ ಎರಡನೇ ಸುತ್ತಿನ ಸಭೆಯನ್ನು ನಡೆಸಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

ಮಾರ್ಚ್ ಮೊದಲ ವಾರದೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿ

ಮೂಲಗಳ ಪ್ರಕಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯು 28 ಲೋಕಸಭಾ ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪೂರ್ಣಗೊಂಡಿದ್ದು, ಅಂತಿಮ ಅನುಮತಿಗಾಗಿ ಪಕ್ಷದ ಹೈಕಮಾಂಡ್‌ಗೆ ಕಳುಹಿಸುತ್ತಿದ್ದು, ಬಹುತೇಕ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾರ್ಚ್ ಮೊದಲ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ ಸುರೇಶ್ ಅವರ ನಿವಾಸದಲ್ಲಿ ಔತಣಕೂಟ ಏರ್ಪಡಿಸಲಾಗಿದ್ದು, ಪಕ್ಷದ ಎಲ್ಲಾ ಹಿರಿಯ ಮುಖಂಡರು ಭಾಗವಹಿಸಿದ್ದರು. ಎಲ್ಲಾ 28 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಜೊತೆಗೆ ಚುನಾವಣೆಯಲ್ಲಿ ಎರಡಂಕಿ ದಾಟಲು ತಂತ್ರ ಹೆಣೆಯಲಾಗಿದೆ. ಸಂಪುಟದ ಎಲ್ಲ ಸಚಿವರು ತಮ್ಮ ಕ್ಷೇತ್ರಗಳಲ್ಲಿ‌ ಸಕ್ರಿಯವಾಗಿ ಕೆಲಸ ಮಾಡಿ ಪಕ್ಷ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಸೂಚಿಸಲಾಗಿದೆ. ಈ ಜವಾಬ್ದಾರಿಯಲ್ಲಿ ವಿಫಲವಾದರೆ, ಸಂಬಂಧಪಟ್ಟ ಮಂತ್ರಿಗಳನ್ನು ಹೊಣೆಯಾಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕುವುದೇ ಸವಾಲು

ಬೆಂಗಳೂರು ನಗರ ಸೇರಿದಂತೆ ಕನಿಷ್ಠ 10 ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕುವುದು ಕಷ್ಟಕರವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಕಠಿಣ ಸವಾಲು ನೀಡಲು ಪ್ರಯತ್ನಿಸುತ್ತಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಒತ್ತಡದಲ್ಲಿ ರಾಜ್ಯ ಕಾಂಗ್ರೆಸ್ ಇದೆ. ಇನ್ನು ಕಾಂಗ್ರೆಸ್‌ ಹೊಸ ಮುಖಗಳನ್ನು ಪ್ರಯೋಗಿಸದೆ ಇರಲು ನಿರ್ಧರಿಸಿದೆ. ಆದರೆ, ಗೆಲುವಿನ ಅವಕಾಶಗಳನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಗೆಲುವು ಸಾಧಿಸುವ ಸಾಮರ್ಥ್ಯ ಹೊಂದಿರುವವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವರ್ಚಸ್ಸನ್ನು ಕಾಪಾಡುವ ಉದ್ದೇಶದಿಂದ ಲೋಕಸಭೆಯಲ್ಲಿ ಮಂತ್ರಿಗಳನ್ನೂ ಸ್ಪರ್ಧಿಸುವಂತೆ ಹೇಳುವ ಸಾಧ್ಯತೆ ಇದೆ. ಕಾಂಗ್ರೆಸ್‌ ಮೂಲಗಳು ಇದನ್ನು ಖಚಿತಪಡಿಸಿವೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದರು.

ಮಂತ್ರಿಗಳು ಸ್ಪರ್ಧಿಸುವ ಸಾಧ್ಯತೆ ?

ಕಾಂಗ್ರೆಸ್‌ನಲ್ಲಿ ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಪ್ರತಿನಿಧಿಸುವ ಏಕೈಕ ಸಂಸದ ಡಿ ಕೆ ಸುರೇಶ್ ಇದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಸ್ವಯಂ ಪ್ರೇರಿತರಾಗಿ ತುಮಕೂರು ಅಭ್ಯರ್ಥಿಯಾಗಲು ಮುಂದಾಗಿದ್ದಾರೆ. ಬೆಳಗಾವಿಯಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಚಾಮರಾಜನಗರದಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೋಲಾರದಿಂದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಬೀದರ್‌ನಿಂದ ಅರಣ್ಯ ಸಚಿವ ಈಶ್ವರ ಖಂಡ್ರೆ, ಹಾವೇರಿಯಿಂದ ಎಂ.ಎಲ್.ಸಿ ಸಲೀಂ ಅಹಮದ್, ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರನ್ನು ಕಣಕ್ಕಿಳಿಸಲು ಪಕ್ಷ ಕೋರಿದೆ.

ಮಹದೇವಪ್ಪ ಮತ್ತು ಮುನಿಯಪ್ಪ ಇಬ್ಬರೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲವು ಷರತ್ತುಗಳೊಂದಿಗೆ ಒಪ್ಪಿಕೊಂಡಿದ್ದರು. ಮಹದೇವಪ್ಪ ಅವರು ತಮ್ಮ ಮಗನಿಗೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದರು. ಶಾಸಕ ಸುನೀಲ್ ಬೋಸ್ ಮತ್ತು ಮುನಿಯಪ್ಪ ಅವರು ತಮ್ಮ ಪುತ್ರಿ ಮತ್ತು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್‌ಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದರು.

ಅದೇ ರೀತಿ 28 ಕ್ಷೇತ್ರಗಳಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ನಿರಂತರ ಸಭೆಗಳನ್ನು ನಡೆಸುತ್ತಿದೆ. ಜೆಡಿಎಸ್ (ಎಸ್) 5 ಕ್ಷೇತ್ರಗಳನ್ನು ಕೇಳಿದೆ. ಅದರಲ್ಲಿ ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿವೆ. ಮೂಲಗಳ ಪ್ರಕಾರ, ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಬಿಜೆಪಿಯಿಂದ ನಾಲ್ಕು ಪ್ರಾಥಮಿಕ ಸಮೀಕ್ಷೆಗಳು

ಬಿಜೆಪಿಯ ಮೂಲಗಳ ಪ್ರಕಾರ, ಪಕ್ಷದ ಹೈಕಮಾಂಡ್ ಎಲ್ಲಾ 28 ಕ್ಷೇತ್ರಗಳಲ್ಲಿ ಪಕ್ಷದ ಮತ್ತು ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಮೂರು ಖಾಸಗಿ ಏಜೆನ್ಸಿಗಳಿಂದ ಸಮೀಕ್ಷೆಯನ್ನು ನಡೆಸಿದೆ. ಆಯಾ ಸಮೀಕ್ಷಾ ಸಂಸ್ಥೆಗಳು ತಮ್ಮ ವರದಿಯನ್ನು ಸಲ್ಲಿಸಿವೆ. ಅದೇ ರೀತಿ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ 100 ದಿನ ಪೂರೈಸಿರುವ ಬಿ.ವಿಜಯೇಂದ್ರ ಅವರು ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷದ ಅಭ್ಯರ್ಥಿಗಳ ಭವಿಷ್ಯ, ಆಯಾ ಕ್ಷೇತ್ರಗಳಲ್ಲಿ ಹಾಲಿ ಸಂಸದರ ಪ್ರಭಾವದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಪಕ್ಷವು ಪ್ರತಿನಿಧಿಸುವ ಸ್ಥಾನಗಳನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿರುವ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ವರಿಷ್ಠರಿಗೆ ಅನುಕೂಲವಾಗುವಂತೆ ವಿಜಯೇಂದ್ರ ಅವರು ತಮ್ಮ ಸಮೀಕ್ಷೆಯ ವರದಿಯನ್ನು ಹೈಕಮಾಂಡ್‌ಗೆ ಕಳುಹಿಸಿದ್ದಾರೆ. ನಾಲ್ಕೂ ಸಮೀಕ್ಷಾ ವರದಿಗಳಲ್ಲಿರುವ ಸಾಮಾನ್ಯ ಅಭ್ಯರ್ಥಿಗಳು ಸ್ಪರ್ಧಿಸಲು ಪಕ್ಷದ ಹೈಕಮಾಂಡ್ ಅನುಮತಿ ನೀಡುವ ಸಾಧ್ಯತೆ ಇದೆ.

ಬಿಜೆಪಿ ಹಾಲಿ ಸಂಸದರು ಮತ್ತೆ ಸ್ಪರ್ಧಿಸುವ ಸಾಧ್ಯತೆ

ರಾಜ್ಯದಲ್ಲಿ ಈಗ ಬಿಜೆಪಿಯ 25 ಸಂಸದರಿದ್ದು, ಅವರಲ್ಲಿ 15 ಜನ 2024ರ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸುವ ಸಾಧ್ಯತೆ ಇದೆ. 10 ಹಾಲಿ ಸಂಸದರು ಆಯಾ ಕ್ಷೇತ್ರಗಳಲ್ಲಿ ಮತ್ತೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಫೆಡರಲ್‌ಗೆ ತಿಳಿಸಿದ್ದಾರೆ.

ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಕೆಲವರು ಸ್ವಯಂಪ್ರೇರಣೆಯಿಂದ ಸ್ಪರ್ಧೆಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಇನ್ನು ಕೆಲವರು ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿದ್ದರಿಂದ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಾರೆ ಎಂದು ಪಕ್ಷದ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ 13ರ ನಂತರ ಭಾರತೀಯ ಚುನಾವಣಾ ಆಯೋಗವು (ಇಸಿಐ) ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಮಾರ್ಚ್ 10 ರೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ರಾಜ್ಯ ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ಫೆಡರಲ್‌ಗೆ ತಿಳಿಸಿದ್ದಾರೆ.

ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಉಮೇದುವಾರಿಕೆ ಬಗ್ಗೆ ವದಂತಿ

ಏತನ್ಮಧ್ಯೆ, ಬಹುತೇಕ ಹಾಲಿ ಸಂಸದರು ತಮ್ಮ ಕ್ಷೇತ್ರಗಳಿಂದ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ. ಇತ್ತೀಚೆಗೆ ಧಾರವಾಡದಿಂದ ನಾಲ್ಕು ಬಾರಿ ಸಂಸದರಾಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿಜಯಪುರ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿರುವ ರಮೇಶ ಜಿಗಜಿಣಗಿ ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರ ಬೇರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದ ಮೇಲೆ ಇಬ್ಬರು ಸಂಸದರು ಸಮರ್ಥನೆ ನೀಡಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್‌ ನೀಡಲು, ಉತ್ತರ ಕನ್ನಡದಿಂದ ಜೋಶಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ರಮೇಶ ಜಿಗಜಿಣಗಿ ಅವರ ವಯಸ್ಸಿನ ಅಂಶವನ್ನು ಪರಿಗಣಿಸಿ ಅವರನ್ನು ಕಡೆಗಣಿಸಬಹುದು ಎಂಬ ಊಹಾಪೋಹಗಳಿವೆ. ಫೆಡರಲ್ ಜೊತೆ ಮಾತನಾಡಿದ ರಮೇಶ್ ಜಿಗಜಿಣಗಿ ಅವರು, ವಿಜಯಪುರ (ಮೀಸಲು) ಸ್ಥಾನದಿಂದ ಸ್ಪರ್ಧಿಸುವುದಾಗಿ ಖಚಿತಪಡಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜಯಶಂಕರ್ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಪ್ರಹ್ಲಾದ್ ಜೋಶಿ ಅವರು ಈಚೆಗೆ ಹೇಳಿದ್ದರೂ ಸಹ ಇಬ್ಬರೂ ಸಚಿವರು ಕರ್ನಾಟಕದಿಂದ ಸ್ಪರ್ಧಿಸುವ ಸಾಧ್ಯತೆಯನ್ನು ಕರ್ನಾಟಕ ರಾಜ್ಯ ಬಿಜೆಪಿ ಮೂಲಗಳು ಬಲವಾಗಿ ನಿರಾಕರಿಸುತ್ತವೆ.

“ಹೌದು, ತೇಜಸ್ವಿ ಸೂರ್ಯ ಪ್ರತಿನಿಧಿಸುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿರ್ಮಲಾ ಸೀತಾರಾಮ್ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿವೆ. ಆದರೆ, ಇದು ಕೆಲವು ಪಟ್ಟಭದ್ರ ಹಿತಾಸಕ್ತಿ ನಾಯಕರ ಕಪೋಲಕಲ್ಪಿತ ಕಲ್ಪನೆ ಮತ್ತು ‘ಇಚ್ಛೆ’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಸ್ಪಷ್ಟಪಡಿಸಿದ್ದು, ಜೈಶಂಕರ್ ಕರ್ನಾಟಕದಿಂದ ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗಳೆಯುತ್ತಾರೆ.  

Tags:    

Similar News