Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ
ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತದಾನ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ತಮ್ಮ ಸ್ವಗ್ರಾಮ ಪೆರೇಸಂದ್ರದ ಮತಗಟ್ಟೆಯಲ್ಲಿ ಮತಚಲಾಯಿಸಿದರು. ತಂದೆ ಕೇಶವರೆಡ್ಡಿ, ಪತ್ನಿ ಡಾ.ಪ್ರೀತಿ ಸಹ ಜೊತೆಯಲ್ಲಿ ಇದ್ದರು. ಈ ವೇಳೆ ಮಾತನಾಡಿದ ಡಾ.ಕೆ.ಸುಧಾಕರ್, ಕಳೆದ ಮೂರು ವಾರದಿಂದ ಹಗಲಿರುಳು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೇರ್ಗಳ್ಳಿ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಹತ್ತು ನಿಮಿಷ ತಡವಾಗಿ ಆರಂಭವಾಗಿದೆ ಎಂದು ಮತದಾರರು ಆಕ್ಷೇಪ ವ್ಯಕ್ತಪಡಿಸಿದರು. ಇಲ್ಲಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಸಾರ್ವಜನಿಕರ ಜೊತೆ ಸರದಿ ಸಾಲಿನಲ್ಲಿ ಬಂದು ಮತ ದಾನ ಮಾಡಿದರು. ವಾರ್ಡ್ ನಂ. 51ರ ಬೂತ್ ನಂ. 139ರಲ್ಲಿ (ಸಂಸ್ಕೃತ ಪಾಠಶಾಲೆಯಲ್ಲಿ) ಮತದಾನ ಮಾಡಿದರು. ಅವರಿಗೆ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಇವಿಎಂ ತಾಂತ್ರಿಕ ದೋಷ: ಚಿಕ್ಕಮಗಳೂರಿನ ಆರೆನೂರು ಗ್ರಾಮದ ಮತಗಟ್ಟೆ ಸಂಖ್ಯೆ 53 ರಲ್ಲಿ ಇವಿಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾದಗಿ ಕೆಲವೇ ನಿಮಿಷಗಳಲ್ಲಿ ಮತದಾನ ಸ್ಥಗಿತಗೊಂಡಿದೆ. ಮತದಾನಕ್ಕಾಗಿ ಮತದಾರರು ಸರದಿಯಲ್ಲಿ ಕಾದು ನಿಂತಿದ್ದಾರೆ.
ಮೊದಲ ಹಂತದ ಚುನಾವಣೆ: ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ) ಸೇರಿ 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.
ಮತದಾರರಿಗೆ ಕಟ್ಟುನಿಟ್ಟಿನ ಆದೇಶವೊಂದು ಜಾರಿಯಾಗಿದ್ದು, ಮತಗಟ್ಟೆಗಳೊಳಗೆ ಮತದಾರರು ಮೊಬೈಲ್ ಫೋನ್, ಸ್ಮಾರ್ಟ್ ಫೋನ್ ಗಳನ್ನು ಕೊಂಡೊಯ್ಯದಂತೆ ಸೂಚಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದಲೇ ಈ ಆದೇಶ ಹೊರಬಿದ್ದಿದೆ.