Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ
x

Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ


ದೇಶದಲ್ಲೆಡೆ ಇಂದು ಲೋಕಸಭೆ ಚುನಾವಣೆ 2024ರ 2ನೇ ಹಂತದ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಇದು ಮೊದಲ ಹಂತದ ಮತದಾನವಾಗಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಸೇರಿ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಮತದಾನ ಪ್ರಕ್ರಿಯೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಲಭ್ಯ...

Live Updates

 • 26 April 2024 12:44 PM GMT

  ಸಂಜೆ 5ರ ಹೊತ್ತಿಗೆ ಶೇ.63.90 ರಷ್ಟು ಮತದಾನ

  ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನದಲ್ಲಿ ಶುಕ್ರವಾರ ಸಂಜೆ 5ರ ಹೊತ್ತಿಗೆ ಶೇ.63.90 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  ಅತಿಹೆಚ್ಚು ಪ್ರಮಾಣದ ಮತದಾನ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಡೆದಿದ್ದು, ಒಟ್ಟು ಶೇ. 74.87ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ, ಶೇ.48.61ರಷ್ಟು ಮತದಾನವಾಗಿದೆ.

  ಇನ್ನುಳಿದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.72.13, ದಕ್ಷಿಣಕನ್ನಡದಲ್ಲಿ ಶೇ. 71.83, ಹಾಸನದಲ್ಲಿ ಶೇ.72.13, ಚಿತ್ರದುರ್ದದಲ್ಲಿ ಶೇ.67.22, ತುಮಕೂರಿನಲ್ಲಿ ಶೇ.72.10, ಮೈಸೂರಿನಲ್ಲಿ ಶೇ.65.85, ಚಾಮರಾಜನಗರದಲ್ಲಿ ಶೇ.69.60, ಬೆಂಗಳೂರು ಗ್ರಾಮಾಂತರದಲ್ಲಿ ಶೇ.61.78, ಬೆಂಗಳೂರು ಉತ್ತರದಲ್ಲಿ ಶೇ.50.04, ಬೆಂಗಳೂರು ದಕ್ಷಿಣದಲ್ಲಿ 49.37, ಚಿಕ್ಕಬಳ್ಳಾಪುರದಲ್ಲಿ ಶೇ.70.97 ಹಾಗೂ ಕೋಲಾರದಲ್ಲಿ ಶೇ.71.26ರಷ್ಟು ಮತದಾನವಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

 • 26 April 2024 11:35 AM GMT

  ಚಾಮರಾಜನಗರದಲ್ಲಿ ಚುನಾವಣೆ ಬಹಿಷ್ಕಾರ: ಗ್ರಾಮಸ್ಥರಿಂದ ಮತಗಟ್ಟೆ ಧ್ವಂಸ

  ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕರಿಸಲಾಗಿದೆ. ಇದೇ ವೇಳೆ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ನಡೆದಿದೆ.

  ಮೂಲ ಸೌಕರ್ಯವನ್ನು ಕಲ್ಪಿಸಲಾಗಿಲ್ಲ ಎಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಜನರು ಮತದಾನ ಬಹಿಷ್ಕರಿಸಿ ಮತದಾನದಿಂದ ದೂರ ಉಳಿದುಕೊಂಡಿದ್ದಾರೆ. ಆದ್ರೆ, ಹಾಡಿ ಜನರನ್ನು ಮನವೊಲಿಸಿ ಕರೆತಂದು ಮತದಾನ ಮಾಡಿಸಲು ಅಧಿಕಾರಿಗಳು ಮತಗಟ್ಟೆಗೆ ಕರೆದುಕೊಂಡು ಬಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಂಡಿಗನತ್ತ ಗ್ರಾಮದ ಮತಗಟ್ಟೆಯನ್ನು ಸುತ್ತುವರಿದಿದ್ದು, ಮೂಲಸೌಕರ್ಯ ಕಲ್ಪಿಸುವವರೆಗೆ ಮತದಾನ ಮಾಡಬೇಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದರಿಂದ ಪೊಲೀಸರು ಜನರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಮತಗಟ್ಟೆ ಮೇಲೆ ದಾಳಿ ಮಾಡಿದ್ದು, ಮೇಜು, ಕುರ್ಚಿ, ಇವಿಎಂ ಧ್ವಂಸಮಾಡಿದ್ದಾರೆ.

  ಸ್ಥಳದಲ್ಲಿ ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್ ನಡೆಸಲಾಗಿದೆ. ಇದೇ ವೇಳೆ ತಿರುಗಿಬಿದ್ದ ಜನರು ಸಹ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ. ಸಾರ್ವಜನಿಕರು ಸೇರಿ ಅಧಿಕಾರಿಗಳಿಗೂ ಗಾಯಗಳಾಗಿವೆ. ಪುರುಷರು, ಮಹಿಳೆಯರು ಎನ್ನದೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ.

 • 26 April 2024 9:51 AM GMT

  ಕಾಂಗ್ರೆಸ್ ಪ್ರಚಾರ ಕರಪತ್ರ ಹಿಡಿದು ಟೀಕೆ ಮಾಡಿದ ಮಾಜಿ ಪ್ರಧಾನಿ ದೇವೇಗೌಡ

  ಮಾಜಿ ಪ್ರಧಾನಿ ದೇವೇಗೌಡ ಅವರು ಪತ್ನಿ ಚನ್ನಮ್ಮ ಅವರೊಂದಿಗೆ ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಗೆ ಆಗಮಿಸಿ ಮತದಾನ ಮಾಡಿದರು.

  ಮತದಾನದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, ʻʻಮಹಾನುಭಾವ ರಾಹುಲ್ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಯೋಗ್ಯತೆ ಇಲ್ಲದೇ ಚುನಾವಣೆಗೆ ಕೇರಳದಲ್ಲಿ ಹೋಗಿ ನಿಂತಿದ್ದಾರೆ. ಇವರು ಕೊಡುವ ಚುನಾವಣಾ ಪ್ರಚಾರದ ಕಾರ್ಡ್‌ನಲ್ಲಿ ನೀಡಿರುವ ಭರವಸೆಗಳಿಗೆ ಸಿಎಂ, ಹಾಗೂ ಉಪಮುಖ್ಯಮಂತ್ರಿ ಅವರು ಸಹಿ ಮಾಡಿದರೆ ನಾನು ಒಪ್ಪುತ್ತೇನೆ. ಜನರಿಗೆ ವಂಚನೆ ಮಾಡುವ, ಮೋಸ ಮಾಡುವ ಒಂದು ದುಷ್ಕೃತ್ಯ ಈ ರಾಜ್ಯದಲ್ಲಿ ನಡೆದಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನರನ್ನು ತಪ್ಪುದಾರಿಗೆ ಎಳೆಯಲು ಮತ್ತು ಮೂರ್ಖರನ್ನಾಗಿಸಲು ಕರ್ನಾಟಕದಲ್ಲಿ ಕರಪತ್ರ ಹಂಚಲಾಗಿದೆ' ಎಂದು ಕಾಂಗ್ರೆಸ್ ಗ್ಯಾರಂಟಿ ಕರಪತ್ರದ ಬಗ್ಗೆ ವ್ಯಂಗ್ಯವಾಡಿದರು.

 • 26 April 2024 9:37 AM GMT

  ವಿಕಸಿತ ಭಾರತದ ನಿರ್ಮಾಣಕ್ಕಾಗಿ ಇಂದು ಎಲ್ಲರೂ ತಪ್ಪದೇ ಮತದಾನ ಮಾಡಿ: ಡಾ. ಸಿಎನ್‌ ಮಂಜುನಾಥ್‌

  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಸಿಎನ್‌ ಮಂಜುನಾಥ್‌ ಅವರು ಇಂದು ಪದ್ಮನಾಭನಗರದ ಸಹಕಾರಿ ವಿದ್ಯಾಕೇಂದ್ರದಲ್ಲಿ ಮತದಾನ ಮಾಡಿದ್ದಾರೆ.

  ಮತದಾನದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಅವರು, ʻʻವಿಕಸಿತ ಭಾರತ ನಿರ್ಮಾಣಕ್ಕಾಗಿ ನಮ್ಮ ಹಕ್ಕು ಚಲಾಯಿಸಿದೆವು. ನಾನು ಮತ್ತು ಧರ್ಮಪತ್ನಿ ಡಾ. ಅನಸೂಯಾ ಮಂಜುನಾಥ್ ಹಾಗೂ ಮಕ್ಕಳು ಇಂದು ಪದ್ಮನಾಭ ನಗರದಲ್ಲಿ ಮತ ಚಲಾಯಿಸಿದೆವು. ವಿಕಸಿತ ಭಾರತದ ನಿರ್ಮಾಣಕ್ಕಾಗಿ ಇಂದು ಎಲ್ಲರೂ ತಪ್ಪದೇ ಮತದಾನ ಮಾಡಿʼʼ ಎಂದು ಕರೆ ನೀಡಿದರು.

  ʻʻನಿಮ್ಮ ಒಂದೊಂದು ಮತವೂ ಭಾರತದ ಅಭ್ಯುದಯಕ್ಕೆ ಅಡಿಪಾಯವಾಗಲಿದೆ. ಇಂದು ಹಾಗೂ ಮೇ ಏಳರಂದು ಈ ಬಾರಿ ಕರ್ನಾಟಕದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮತ ಚಲಾಯಿಸೋಣ. ಉಜ್ವಲ ಭಾರತದ ನಿರ್ಮಾಣಕ್ಕೆ ನಾಂದಿ ಹಾಡೋಣʼʼ ಎಂದು ಬರೆದಿದ್ದಾರೆ.

 • 26 April 2024 9:01 AM GMT

  ರಾಜ್ಯದಲ್ಲಿ 1 ಗಂಟೆವರೆಗೆ ಒಟ್ಟು ಶೇ. 38.23ರಷ್ಟು ಮತದಾನ

  ಬೆಳಿಗ್ಗೆ 7 ರಿಂದ ಮತದಾನ ಆರಂಭಗೊಂಡಿದ್ದು, ಮಧ್ಯಾಹ್ನ 1 ಗಂಟೆವರೆಗೆ ಕೇವಲ ಶೇ. 38.23ರಷ್ಟು ಮಾತ್ರ ಮತದಾನವಾಗಿದೆ. ಸಂಜೆ 6 ಗಂಟೆವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. 

  ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ?

  ಚಾಮರಾಜನಗರ ಕ್ಷೇತ್ರದಲ್ಲಿ ಶೇಕಡಾ 39.57ರಷ್ಟು,

  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 39.85ರಷ್ಟು,

  ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 39.05ರಷ್ಟು,

  ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 48.10ರಷ್ಟು,

  ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 40.99ರಷ್ಟು,

  ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 38.42ರಷ್ಟು,

  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 40.70ರಷ್ಟು,

  ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇಕಡಾ 41.58ರಷ್ಟು,

  ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 41.91ರಷ್ಟು

  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇಕಡಾ 46.43ರಷ್ಟು ಮತದಾನವಾಗಿದೆ.

  ಬೆಂಗಳೂರಿನಲ್ಲಿ ಎಷ್ಟೆಷ್ಟು ಮತದಾನ?

  ಬೆಂಗಳೂರು ಗ್ರಾಮಾಂತರದಲ್ಲಿ ಮಧ್ಯಾಹ್ನ 1.30ರ ತನಕ  ಶೇ.36.09,

  ಬೆಂಗಳೂರು ಉತ್ತರದಲ್ಲಿ ಮಧ್ಯಾಹ್ನ 1.30ರ ತನಕ ಶೇ.32.25,

  ಬೆಂಗಳೂರು ಕೇಂದ್ರದಲ್ಲಿ ಮಧ್ಯಾಹ್ನ 1.30ರ ತನಕ ಶೇ 30.10

  ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಧ್ಯಾಹ್ನ 1.30ರ ತನಕ ಶೇ 31.51ರಷ್ಟು ಮತದಾನ

 • 26 April 2024 7:59 AM GMT

  ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವು!

  ಚುನಾವಣೆ ಕರ್ತವ್ಯ ನಿರ್ವಹಿಸಿದ್ದ ವೇಳೆ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹೊಟ್ಟೆಪ್ಪನಹಳ್ಳಿಯ ಮೇಗಳಗೊಲ್ಲರಹಟ್ಟಿ ಮತಗಟ್ಟೆ ಸಂಖ್ಯೆ 202ರಲ್ಲಿ ಎಪಿಆರ್‌ಓ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರನ್ನು ಯಶೋಧ (58) ವರ್ಷ ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕಿ ಯಶೋಧರ ಅವರು ಬೊಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

 • 26 April 2024 7:43 AM GMT

  ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಲಿಂಗತ್ವ ಅಲ್ಪಸಂಖ್ಯಾತರು

  ಕೋಲಾರ ಮತ್ತು ಹಾಸನ ಜಿಲ್ಲೆಯಲ್ಲಿ ಲೈಂಗತ್ವ ಅಲ್ಪಸಂಖ್ಯಾತ ಸಮುದಾಯದ ಮತದಾರರು ಮತ ಚಲಾಯಿಸಿ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನ ಮರೆಯದೇ ಪಾಲಿಸಿದ್ದಾರೆ . ಸಮಾಜದಿಂದ ಮೂಲೆಗೆ ತಳ್ಳಲ್ಪಟ್ಟ ಲಿಂಗತ್ವ ಅಲ್ಪಸಂಖ್ಯಾತರು ಈ ದಿನ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

 • 26 April 2024 6:46 AM GMT

  ರಾಜ್ಯದಲ್ಲಿ 11 ಗಂಟೆವರೆಗೆ ಒಟ್ಟು ಶೇ 22.34ರಷ್ಟು ಮತದಾನ

  11 ಗಂಟೆಯ ವರೆಗಿನ ಕರ್ನಾಟಕ ಲೋಕಸಭಾ ಚುನಾವಣೆಯ ಶೇಕಡಾವಾರು ಮತದಾನ ಶೇಕಡಾ 22.34 ರಷ್ಟು ಆಗಿದೆ. ನಿಮ್ಮ ಪ್ರತಿಯೊಂದು ಕೊಡುಗೆಯೂ ಅಮೂಲ್ಯ. ಬನ್ನಿ ಎಲ್ಲರೂ ಮತದಾನ ಮಾಡಿ ಎಂದು ಚುನಾವಣಾ ಆಯೋಗ ಕರೆ ನೀಡಿದೆ.

  ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ:

  ಚಿತ್ರದುರ್ಗ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆವರೆಗೆ ಒಟ್ಟು ಶೇ 21.75  ಮತದಾನ

  ಉಡುಪಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 29.03 ಮತದಾನ.

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 30.98ರಷ್ಟು ಮತದಾನ‌.

  ಮಂಡ್ಯ ಜಿಲ್ಲೆಯಲ್ಲಿ ಶೇ.21.24ರಷ್ಟು ಮತದಾನ

  ಹಾಸನ ಜಿಲ್ಲೆಯಲ್ಲಿ ಶೇ. 22.03 ರಷ್ಟು ಮತದಾನ

  ಚಿಕ್ಕಬಳ್ಳಾಪುರದಲ್ಲಿ ಶೇ 21.92 ರಷ್ಟು ಮತದಾನ.

  ಮೈಸೂರು-ಕೊಡಗು ಜಿಲ್ಲೆಯಲ್ಲಿ ಶೇ.25.09 ಮತದಾನ

  ಚಾಮರಾಜನಗರದಲ್ಲಿ ಶೇ.22.81 ಮತದಾನ

  ಚಿತ್ರದುರ್ಗದಲ್ಲಿ ಶೇ.21.75% ಮತದಾನ.

  ಬೆಂಗಳೂರು ಗ್ರಾಮಾಂತರದಲ್ಲಿ ಶೇ.20.35

  ಬೆಂಗಳೂರು ಸೆಂಟ್ರಲ್ ಶೇ.19.21

  ಬೆಂಗಳೂರು ದಕ್ಷಿಣ ಶೇ. 19.81

  ಬೆಂಗಳೂರು ಉತ್ತರದಲ್ಲಿ ಶೇ 19.78ರಷ್ಟು ಮತದಾನವಾಗಿದೆ.

 • 26 April 2024 6:35 AM GMT

  ಮತಗಟ್ಟೆ ಬಳಿ ಖಾಲಿ ಚೆಂಬು ಪ್ರದರ್ಶನ

  ಬೆಂಗಳೂರಿನ ಮಂಜುನಾಥ್ ನಗರದ ಗೌತಮ್ ಕಾಲೇಜು ಬಳಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀ ನಿವಾಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಖಾಲಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶನ ಮಾಡಿದ್ದಾರೆ. 

  ಇತ್ತೀಚೆಗೆ ರಾಜ್ಯ ಕಾಂಗ್ರೆಸ್‌ ಘಟಕ ಎಲ್ಲ ಮಾಧ್ಯಮಗಳಿಗೆ ಖಾಲಿ ಚೊಂಬು ಜಾಹೀರಾತು ನೀಡುವ ಮೂಲಕ ಬಿಜೆಪಿಗರನ್ನು ಕೆರಳಿಸಿತ್ತು.

 • 26 April 2024 6:29 AM GMT

  ಕಡ್ಡಾಯ ಮತದಾನ ಕಾನೂನು ಜಾರಿಗೆ ತರದೇ ಇರೋದು ಈ ದೇಶದ ದುರಂತ: ಸಿದ್ದಗಂಗಾ ಶ್ರೀ

  ಹಸುವಿಗೆ ಹಣ್ಣು ತಿನ್ನಿಸಿ ಸಿದ್ದಗಂಗಾ ಮಠದ ಮತಗಟ್ಟೆ ಸಂಖ್ಯೆ 113 ರಲ್ಲಿ ಸಿದ್ದಗಂಗಾ ಶ್ರೀಗಳು ಮತದಾನ ಮಾಡಿದ್ದಾರೆ. ಆ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಮತದಾನ ಮಾಡೋದು ಒಂದು ಪವಿತ್ರ ಕಾರ್ಯ. ಸಿದ್ದಗಂಗಾ ಮಠದ ಸಂಪ್ರದಾಯದಂತೆ ನಾನು ಬಂದು ಮೊದಲು ಮತದಾನ ಮಾಡಿದ್ದೇನೆ. ಶಿವಕುಮಾರ ಶ್ರೀಗಳು ಸಿದ್ದಗಂಗಾ ಮಠದ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡುತ್ತಿದ್ದರು. ಮತದಾನ ಮಾಡಲು ಸರ್ಕಾರ ಎಲ್ಲಾ ರೀತಿಯ ಸವಲತ್ತು ಒದಗಿಸಿ ಕೊಟ್ಟಿದೆ ಎಂದರು.

  ಎಲ್ಲರೂ ಬಂದು 100ಕ್ಕೆ 100 ರಷ್ಟು ಮತದಾನ ಮಾಡಬೇಕು. ಕಡ್ಡಾಯ ಮತದಾನ ಕಾನೂನು ಜಾರಿಗೆ ತರದೇ ಇರೋದು ಈ ದೇಶದ ದುರಂತ. ಪ್ರತಿಶತ 100 ಮತದಾನ ಆಗಬೇಕಾದರೆ ಕಡ್ಡಾಯ ಮತದಾನ ಕಾನೂನು ತರಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿಗೆ ಮತದಾನ ಆಗುತ್ತದೆ. ನಗರ ಪ್ರದೇಶದಲ್ಲಿ ಕಡಿಮೆ ಆಗುತ್ತದೆ. ವಿದ್ಯಾವಂತರೇ ಮತದಾನದಿಂದ ದೂರ ಉಳಿಯುತ್ತಾರೆ. ಹೀಗಾಗಬಾರದಿದ್ದರೆ ಕಡ್ಡಾಯ ಮತದಾನ ಜಾರಿಯಾಗಬೇಕು ಎಂದು ಶ್ರೀಗಳು ಒತ್ತಾಯಿಸಿದರು. 

Read More
Next Story